Sunday, 2 June 2013

ಊರು ಸುಟ್ಟರೂ ಹನುಮಪ್ಪ ಹೊರಗ

ಊರು ಸುಟ್ಟರೂ ಹನುಮಪ್ಪ ಹೊರಗ

ಆಗಿನ್ನೂ ಸೂರ್ಯಾ ಎಳ್ಲೋ ಬ್ಯಾಡೋ ಅಂತ ಕಣ್ಣು ಬಿಡಾಕ ಹತಿದ್ದ.  ಊರ ನಡುವಿನ ಬಿದ್ಯಾಗ "ಗುಡ್ಯಾನ ಹನುಮಪ್ಪ ಕಳುವಾಗ್ಯಾನಪೊ ಎಂತ ಪುಜೇರಪ್ಪ ಲಬೊ... ಲಬೊ... ಹೊಯ್ಕೊತ ಜೋರಲೇ ಒಡಾಕ ಹತ್ತಿದ್ದ.  ತಂಬಿಗೆ ಹಿಡಕೊಂಡು ಎರಡಕ್ಕೆ ಹೊರಟವರು, ಈಗಿನ್ನ ಎದ್ದು ಒಂದಕ್ಕ ಮಾಡುತ್ತಿದ್ದ ಹೈಕಳುಗಳು, ಬಿದ್ದಲ್ಲೆ ಬಿದ್ದು ಹುಡಗೀರ ಕನಸು ಕಾಣುತ್ತಿದ್ದ ಪಡ್ಡೆ ಹುಡುಗರು, ಬಚ್ಚಲದಾಗ ಜಳಕ ಮಾಡುತ್ತಿದ್ದ ಮಡಿವಂತರು, ಎತ್ತಿನ  ಮೈ ತೊಳೆಯುತ್ತಿದ್ದ ರೈತರು, ಸಗಣಿ ಕಸ ಗುಡಿಸುತ್ತಿದ್ದ ಆಳುಮಕ್ಕಳು, ಚಳಿ ತಡಿಲಾರದ ಚುಟ್ಟಾ ಸೇದುತ್ತಿದ್ದ ಮುದಕರು ಒಟ್ಟಿನಲ್ಲಿ ಇಡೀ ವಜ್ರಗಟ್ಟಿ ಊರೆಂಬೋ ಊರು ದಿಗಿಲುಗೊಂಡು ಪುಜಾರಿಯ ಬೆನ್ನ ಹಿಂದೆ ಬಿತ್ತು.
 ನಿನ್ನೆ ಮಾಡಿದ ಪಾಪ ಕರ್ಮಗಳನ್ನು ತೊಳೆದುಕೊಳ್ಳಲು ಜಳಕ ಮಾಡಿ, ಭಸ್ಮ ಬಳಕೊಂಡು, ಬಕ್ಕ ಮೈಯಲ್ಲಿ ಹನುಮಪ್ಪನ ಗುಡಿಗೆ ಹೊಂಟಿದ್ದ ಗ್ರಾಮ ಪಂಚಾಯಿತಿ ಚೇರಮನ್ನರು, ಇಡಿ ಊರಿಗೆ ಊರೇ ತನ ಮನೆಯತ್ತ ದಾಂಗುಡಿಯಿಡುತ್ತಿದ್ದುದನ್ನು ನೋಡಿ ಒಂದು ಕ್ಷಣ ಹೌಹಾರಿ, ಮತ್ತೊಂದು ಏಕಿರಬಹುದೆಂದು ಭಯ ವಿಹ್ವಲತೆಯಿಂದ ಚಿಂತಿಸತೊಡಗಿದರು. ಚೇರಮನ್ನರನ್ನು ಕಾಣುಗಂಟ ಹೊಯ್ಕೊಳ್ಳುತ್ತಿದ್ದ ಪುಜಾರಿ, ಅವರನ್ನು ಕಂಡೊಡನೆ ವಿಶಿಷ್ಟ ರಾಗದಲ್ಲಿ ಅಳತೊಡಗಿದ. ಚೇರಮನ್ರಿಗೆ ಕಿರಿಕಿರಿಯಾಗಿ ಬೈದು ಬೆದರಿಸಿ, ಕಾರಣವೆನೆಂದು ಕೇಳಿದರು. ತನ್ನ ರಾಗಕ್ಕೆ ಸ್ವಲ್ಪ ಬ್ರೇಕ್ ನೀಡಿದ ಪುಜಾರಿ "ಹನುಮಂತ ದೇವರನ್ನು ತುಡಗಮಾಡ್ಯರ" ಎಂದು ಹೇಳಿ ಮತ್ತೆ ತನ್ನ ರಾಗಕ್ಕೆ ಚಾಲನೆ ನೀಡಿದ. ಚೆರಮನ್ನರು ಒಂದು ಕ್ಷಣ ದಂಗಾದರು. ಪ್ರತಿದಿನದ ಪಾಪಗಳನ್ನು ಹನುಮಂತನ ದರ್ಶನದಿಂದ ತೊಳಕೊತಿದ್ನಿ, ಇನ್ನ ಮುಂದ ಯಾರ ದರ್ಶನದಿಂದ ಪಾಪ ತೊಳಕೊಳ್ಳುದು. ಹಿಂದ ಮಾಡಿದ ಪಾಪಗಳನ್ನು ತೊಳಕೊಳ್ಳಲಾರದ ಮುಂದ ಪಾಪಗಳನ್ನು ಹ್ಯಂಗ ಮಾಡುದು ಎಂದು ತನ್ನೊಳಗ ಚಿಂತಿ ಮಾಡಾಕ ಹತ್ತಿ, ಚಿಂತಿಗೆ ಪರಿಹಾರ ಗೊತ್ತಾಗಲಾರದ ತಾನೂ ಪುಜಾರಿ ಜೊತೆ ರಾಗ ಸೇರಿಸಿ ಅಳಬೇಕೆಂದನು. ಆದರೆ ಸುತ್ತಮುತ್ತಲ ಮಂದಿ ನೊಡಿ ಮರ್ಯಾದೆಗಂಜಿ ಅಳು ನುಂಗಿಕೊಂಡನು.
"ನಮ್ಮ ಊರಿನವರ ಭಕ್ತಿ ಕಡಿಮೆ ಆಗಿರೊದ್ರಿಂದ ಬೇಸತ್ತ ಹನುಮಪ್ಪ ನಮ್ಮ ಊರು ಬಿಟ್ಟು ತಪ್ಪಿಸಿಗೊಂಡು ಓಡಿ ಹೋಗ್ಯಾನ"
"ಸತ್ಯುಳ್ಳ ಹನುಮಂತನ ಪವಾಡ ಶಕ್ತಿ ಕಂಡು ಬೇರೆ ಊರ ಭಕ್ತರು ಹನುಮಂತನ ಒಲಿಸಿಕೊಂಡು ಕರಕೊಂಡು ಹೋಗ್ಯಾರ"
ತಲೆಗೊಬ್ಬಬ್ಬರು ತಮಗನಿಸಿದ್ದನ್ನು ಒದರತೊಡಗಿದರು.
"ಈಗ ಮುಂದ ಹ್ಯಂಗ ಮಾಡೂದು" ಎಂದು ಚೇರಮನ್ನರು ಜನರ ಒದುರುವಿಕೆಗೆ ಬ್ರೆಕ್ ಹಾಕಿದರು.
"ಎಲ್ಲಾ ಕಡೆ ಹುಡಕಾಡಿಸೋನು"
"ಪೋಲಿಸ್ ಕಂಪ್ಲೆಂಟ್ ಕೊಡೋಣ" ಇಂತಹ ತರಾವರಿ ಸಲಹೆಗಳೂ ಗುಂಪಿನಿಂದ ತೂರಿ ಬರತೊಡಗಿದವು.
"ತನ್ನನ್ನು ತಾನು ಕಾಪಾಡಿಕೊಳ್ಳಲಾರದ ಹನುಮಂತ ದೇವರು ನಮ್ಮನ್ನೆಲ್ಲಾ ಹ್ಯಂಗ  ಕಾಪಾಡತಾನ, ಇಂಥ ಕೈಲಾಗದ ದೇವರು ನಮಗ ಬ್ಯಾಡ" ಎಂದು ಒದರಿಬಿಟ್ಟ ಹುಚ್ಚಮಲ್ಲ.
ಜನ ಅವನ ಮೇಲೆ ರಪ್ಪಂತ ಉಗಿಬಿದ್ದು, ಸಾಕಾಗುವಷ್ಟು ಒದ್ದು ಗುಂಪಿನಿಂದ ಹೊರಗೊಯ್ದು ಬಿಟ್ಟರು. "ದಡ್ಡನನ್ನ ಮಕ್ಕಳು, ಸತ್ಯ ಹೇಳಿದರ ಒಪ್ಪಕೊಳ್ಳಾಕ ತಯಾರಿಲ್ಲ" ಎಂದು ಕುಂಟುತ್ತಾ ಹುಚ್ಚಮಲ್ಲ ಹೊರ ಹೋಗುವುದು ಕಾಣಿಸಿತು.
 ಈ ಮಧ್ಯ ಹಿರಿಯಜ್ಜನೊಬ್ಬ "ಆ ದೇವಸ್ಥಾನ ಪೂರ್ವಿಕರ ಕಾಲದಿಂದಲೂ ದರೆಗಟ್ಟಗೆ ಸೇರಿದ್ದು. ಆ ಊರಿನ ಹಿರ್ಯಾರಿಗೆ ತಿಳಿಸೂದು ಒಳ್ಳೆದು" ಎಂದು ಸಲಹೆ ನೀಡಿದ. ಬೇರೆ ದಾರಿ ಕಾಣದ ಅವರೆಲ್ಲರೂ ಅಜ್ಜನ ಸಲಹೆಗೆ ಸಮ್ಮತಿಯಿತ್ತು ಕೆಲವು ಯುವಕರಿಗೆ ಸುದ್ದಿ ಮುಟ್ಟಿಸುವ ಜವಾಬ್ದಾರಿ ವಹಿಸಿದರು.
                           * * * * *
"ಜಡ್ಡು ಜಡ್ಡು ನಕುಕ್ಕ, ನಕ್ಕುಕ್ಕ" ಎಂದು ಹಲಗೆಗಳ ಸಪ್ಪಳ ಮೈಲು ದೂgಕವಿರುವ ಮುಂಚೆಯೇ ವಜ್ರಗಟ್ಟಿಯ ಯುವಕರಿಗೆ ದರೆಗಟ್ಟಿಯಿಂದ ಕೇಳಿಸತೊಡಗಿತು.  ಅವರು ಊರಲ್ಲಿ ಯಾರದೋ ಲಗ್ನ ನಡೆತಿರಬಹುದು ಎಂದು ಅಂದಾಜಿಸಿಕೊಂಡರು. ಹತ್ತತ್ತಿರ ಬಂದು ನೊಡಿದರೆ ಟ್ಯಾಕ್ಟರಿನಲ್ಲಿ ಯಾವದೋ ಒಂದು ಮೂರ್ತಿ ಇಟ್ಟು ಮೆರವಣಿಗೆ ಮಾಡುತ್ತಿದ್ದಾರೆ. ದೃಷ್ಟಿಸಿ ನೋಡುತ್ತಾರೆ, ಅರೆ ಅದು ಅದೆ ಗುಡಿಯಲ್ಲಿ ಕಳುವಾದ ಹನುಮಂತ ದೇವರು! ಹನುಮಂತ ತನ್ನ ಸೊಟ್ಟಮೊತಿಯಲ್ಲಿ ಇವರನ್ನು ನೋಡಿ ಅಣಕಿಸಿದಂತಾಯಿತು. ಆ ಮೆರವಣಿಗೆಯಲ್ಲಿ ಭಾಗವಹಿದವರೆಲ್ಲರೂ ಈ ಯುವಕರಿಗೆ ಕಳ್ಳರಂತೆ ಗೊಚರಿಸತೊಡಗಿದರು. ಇವರು ಎನು ಮಾಡಬೇಕೆಂದು ಯೋಚಿಸುವ ಮಂಚೆಯೇ ದರೆಗಟ್ಟಿಯವರು ಈ ಯುವಕರಿಗೆ ದೇವರ ಅನ್ನ ಪ್ರಸಾದ ಹಾಕಿ ಕಳುಹಿಸಿಕೊಟ್ಟರು.

                * * * * * *
ದರೆಗಟ್ಟಿ ಗ್ರಾಮ ಈಗ ಕಳುವಾಗಿರುವ ಹನುಮಂತನ ಗುಡಿಯ ಸುತ್ತ ಹತ್ತಾರು ತಲೆಮಾರುಗಳ ಹಿಂದೆ ಸಂಪದ್ಭರಿತತೆಯಿಂದ ನೆಲೆಸಿತ್ತು. ಇಲ್ಲಿನ ಮೊಳಕಾಲೆತ್ತರದ ಗೊಡೆಗಳು, ಮಡಿಕೆ ಕುಡಿಕೆಯ ಚೂರುಗಳು   ನಿಧಿüಶೋಧಕ್ಕಾಗಿ ಅಗೆಸಿಕೊಂಡಿರುವ ತಗ್ಗುಗಳು ಇದಕ್ಕೆ ಪುರಾವೆ ಒದಗಿಸುತ್ತವೆ ದರೆಗಟ್ಟಿಯಿಂದ ಕೂಗಳತೆಯಲ್ಲಿ ವಜ್ರಗಟ್ಟಿ ಗ್ರಾಮವಿದ್ದು, ಇಲ್ಲಿಯ ಜನರು ಕೂಡ ದರೆಗಟ್ಟಿಯ ಹನುಮಪ್ಪನಿಗೆ ಅನಾದಿಕಾಲದಿಂದಲೂ ನಡೆದುಕೊಳ್ಳುತ್ತಿದ್ದರು. ಕಾಲಾನಂತರದಲ್ಲಿ ಯಾವದೋ ಹೆಮ್ಮಾರಿ ರೋಗ ಊರೊಳಗೆ ಹೊಕ್ಕು ಒಂದೊಂದೆ ಕುಟುಂಬಗಳನ್ನು ಬಲಿ ತೆಗೆದುಕೊಳ್ಳತೊಡಗಿತಂತೆ. ಇದ್ದು ಬಿದ್ದವರು ಈ ಊರು ಬಿಟ್ಟು ಈಗ ಊರಿಂದ  ಮೂರು ಕಿ.ಮಿ. ದೂರದಲ್ಲಿರುವ ಪ್ರದೇಶಕ್ಕೆ ಹೋಗಿ ನೆಲೆಗೊಂಡರಂತೆ ಇಂದು ಅದೆ ಜಾಗ ದರೆಗಟ್ಟಿ ಗ್ರಾಮವೇನಿಸಿಕೊಂಡಿದೆ. ಗುಡಿಯ ಸುತ್ತಲಿನ ಎಲ್ಲ ಮನೆಗಳು ಮಣ್ಣಿನಲ್ಲಿ ಮಣ್ಣಾಗಿದ್ದರೂ ಹನುಮಪ್ಪನ ಗುಡಿ ಮಾತ್ರ ಮುಕ್ಕಾಗದೆ ಹಾಗೆ ಉಳಿದಿದ್ದು, ಎರಡು ಊರಿನ ಭಕ್ತರು ಮೊದಲಿನಂತೆಯೇ ಈಗಲೂ ಕೂಡ ತುಂಬ ಶ್ರಧ್ಧೆಯಿಂದ ನಡೆದುಕೊಳ್ಳುತ್ತಾರೆ.

 ಪುಜಾರಿ ಪ್ರತಿದಿನ ಸೂರ್ಯೋದಯಕ್ಕೂ ಮುಂಚೆ ಗುಡಿಗೆ ಹೋಗಿ ಕಸ ಗುಡಿಸಿ ಎಣ್ಣೆ ಬತ್ತಿ ಹಚ್ಚಿ ಎರಡು ಊರಿನ ಭಕ್ತರಿಂದ ನೈವೆದ್ಯ ಸ್ವೀಕರಿಸಿ ಸಂಜೆ ಮನೆಗೆ ತೆರಳುವುದು ರೂಡಿಸಿಕೊಂಡ ಬಂದ ಪದ್ದತಿ. ಆದರೆ ಹತ್ತಾರು ವರ್ಷಗಳ ಹಿಂದೆ ಪುಜಾರಿಕೆ ಅಣ್ಣ ತಮ್ಮಂದಿರ ನಡುವೆ ಹಂಚಿಕೆಯಾಗಿದ್ದು, ಒಂದುವರ್ಷ ಒಬ್ಬರು ಮತ್ತೊಂದು ವರ್ಷ ಮತ್ತೊಬ್ಬರು ಹೀಗೆ ಪಾಳೆ ಪ್ರಕಾರ ಪುಜಾರಿಕೆ ಮಾಡಿಕೊಂಡು ಬರುತ್ತಿದ್ದರು. ಅಣ್ಣನಾದವನಿಗೆ ವಯಸ್ಸಾದುದರಿಂದ ಗುಡಿಗೆ ಹತ್ತಿರವಿರುವ ವಜ್ರಗಟ್ಟಯಲ್ಲಿಯೇ ಜನತಾ ಮನೆ ಮಾಡಿಕೊಂಡು ಕುಟುಂಬದೊಂದಿಗೆ ವಾಸಿಸತೊಡಗಿದನು. ಇದರಿಂದ ಗುಡಿಗೆ ಬೆಳಿಗ್ಗೆ ಹೋಗಿ ದೇವರ ಪೂಜೆ ಮಾಡಲು ಅವನಿಗೆ ಅನುಕೂಲವಾಗಿತ್ತು. ಹೀಗಾಗಿ ಸಹಜವಾಗಿಯೇ ಎರಡು ಊರಿನವರು ಅವನ ಮೇಲೆ ವಿಶೇಷವಾದ ಆದರವನ್ನಿಟ್ಟುಕೊಂಡಿದ್ದರು. ತಮ್ಮ ಮನೆಯಲ್ಲಿನ ವಿಶೇಷ ಪೂಜೆಗಳಿಗೆ ಇನ್ನಾವುದೆ ಧಾರ್ಮಿಕ ಕಾರ್ಯಗಳಿಗೆ ಈ ಹಿರಿ ಪುಜಾರಿಗೆ ಹೆಚ್ಚಿನ ಅಹ್ವಾನಗಳಿರುತ್ತಿದ್ದವು. ಇದರಿಂದ ಹೆಚ್ಚು ಮತ್ಸರಕ್ಕಿಡಾದವಳು ಕಿರಿ ಪುಜಾರಿ ಹಂಡತಿ ಸುಬ್ಬಮ್ಮ. ಅವಳು ಪ್ರತಿದಿನ ತನ್ನ ಗಂಡನ ಮುಂದೆ ಹೊಟ್ಟೆಯೊಳಗಿನವಿಷವನ್ನು ಕಕ್ಕುತ್ತಿದ್ದಳು. ಕ್ರಮೇಣ ಈ ವಿಷ ಕಿರಿ ಪುಜಾರಿಯ ಮೈಯಲ್ಲಾ ಅಡರಿ, ಆತ ಇದಕ್ಕೊಂದು ಪರಿಹಾರಕ್ಕಾಗಿ ಚಿಂತಿಸತೊಡಗಿದನು.

ಒಂದಿನ ಬೆಳಿಗ್ಗೆ ಇದ್ದಕಿದ್ದಂತೆ "ಹನುಮಂತ ನನ್ನ ಕನಸನ್ಯಾಗ ಬರಾಕಹತ್ಯಾನ, ನಿಮ್ಮೂರಿನ ಭಕ್ತರು ನನ್ನ ಗುಡಿ ಮಟ ಬರಾಕ ದೂರ ಆಗಿ ತ್ರಾಸ ಅಕೈತಿ. ಅದಕ್ಕ ಈಗಿನ ಹೊಸ ಊರಾಗ ನನಗೊಂದು ಗುಡಿ ಕಟ್ಟಿಸಬೇಕು, ಬರುವ ಉಗಾದಿಯಂದು ನನ್ನ ಪ್ರತಿಷ್ಠಪನಾ ಅಗಬೇಕು ಎಂದು ಅಪ್ಪಣಿ ಕೊಟ್ಟಾನ" ಎಂದು ಕಂಡ ಕಂಡವರಿಗೆಲ್ಲಾ ಪುಜಾರಿ ಹೇಳ ಹತ್ತಿದನು. ಮೊದ ಮೊದಲು ಜನ ಕಿವಿಗೊಡದಿದ್ದರೂ ಪುಜಾರಿಯ ಬಣ್ಣದ ಮಾತುಗಳಿಗೆ ಮರುಳಾಗಿ ಈ ವಿಷಯನ್ನು ಗಂಭಿರವಾಗಿ ತೆಗೆದುಕೊಂಡರು. ಊರಲ್ಲಿ ಬಿಸಿ ಬಿಸಿ ಚರ್ಚೆಗಳಾಗತೊಡಗಿದವು. ಉದ್ಯೋಗವಿಲ್ಲದ ಬಡಿಗ್ಯಾ ಅದೆನೋ ಕೆತ್ತಿಕೊಂಡ ಎನ್ನುವಂತೆ ರಾಜಕೀಯ ಮರಿ ಪುಡಾರಿ ಹಾಗೂ ಯುವಕ ಸಂಘಧ ಅಧ್ಯಕ್ಷ ಬಸಣ್ಣ ಈ ವಿಷಯವನ್ನು ಪ್ರತಿಷ್ಟೆಯ ವಿಷಯವಾಗಿ ತೆಗೆದುಕೊಂಡನು. ನಮ್ಮೂರು ದೇವರು ನಮ್ಮೂರಾಗಿದ್ರ ಛಂದ, ಅದಕ್ಕ ಊರವ್ರೆಲ್ಲಾ ಸಹಕಾರ ಕೊಡಬೆಕು ಎಂದು ಬಣ್ಣದ ಮಾತುಗಳಿದ ತನ್ನೊಳಗಿನ ಕಿಡಿಯನ್ನು ಎಲ್ಲಿಗೂ ಹರಡತೊಡಗಿ ಹನುಮಂತನನ್ನು ಮೂಲ ಗುಡಿಯಿಂದ ಎತ್ತಂಗಡಿ ಮಾಡಿಕೊಂಡು ಬರುವುದಕ್ಕಾಗಿ ಚಂದಾ ಎತ್ತತೊಡಗಿದನು.

 ಉಗಾದಿಯ ಹಿಂದಿನ ದಿನ ಹನುಮಂತನನ್ನು ಗುಡಿಯಿಂದ ಕಿಡ್ನ್ಯಾಪ್ ಮಾಡಿಕೊಂಡು ಬರುವದೆಂದು ಠರಾವುಗಳಾದವು. ಅವತ್ತ ದರೆಗಟ್ಟಿಯ ಜನ ಬೈಕ್, ಟ್ಯಾಕ್ಟರ್‍ಗಳ ಬೆನ್ನೇರಿ ಹನುಮಂತನ ಗುಡಿಗೆ ದಾಳಿಯಿಟ್ಟರು. ನಿರ್ದಾಕ್ಷಿಣ್ಯವಾಗಿ ಮೂರ್ತಿಯನ್ನು ಕಿತ್ತುಕೊಂಡು ದರೆಗಟ್ಟಿಗೆ ತಂದು ಬೆಳಗಿನ ಮೆರವಣಿಗೆಗೆ ತಯಾರು ಮಾಡಿಕೊಳ್ಳತೊಡಗಿದರು.

* * * * *
ವಜ್ರಗಟ್ಟಿಯ ಜನ ಚೇರಮನ್ನರ ನೇತೃತ್ವದಲ್ಲಿ ಎಮ್ಮೆಲ್ಲೆ ಬಳಿ ದಾವಿಸಿದರು. ಎಮ್ಮೆಲ್ಲೆಗೆ ಎರಡು ಊರಿನ ಮತಗಳು ಬೇಕಾಗುವುದರಿಂದ ತುಂಬ ಇಕ್ಕಟ್ಟಿನಲ್ಲಿ ಸಿಲುಕಿಕೊಂಡರು. ಆದರೂ ಇದರಲ್ಲಿ ದರೆಗಟ್ಟಿಯ ಜನರಿಂದಲೇ ತಪ್ಪು ಘಟಿಸಿರುವುದು ಎಂದು ಅವರು ನಿರ್ಣಯಿಸಿದರು. ಆ ಕೂಡಲೇ ಮೊಬೈಲಿನಿಂದ ದರೆಗಟ್ಟಿಯ ತಮ್ಮ ಚೇಲಾವೊಬ್ಬನಿಗೆ ರಿಂಗುಣಿಸಿದರು. "ಗುಡಿಯಿಂದ ದೇವರನ್ನು ಹೊತ್ತೊಯ್ಯುವುದು ಕಾಯ್ದೆ ಪ್ರಕಾರ ತಪ್ಪಾಕೈತಿ. ಇದರಿಂದ ಜನರ ಧಾರ್ಮಿಕ ಆಚರಣೆಗಳಿಗೆ, ಭಾವನೆಗಳಿಗೆ ಧಕ್ಕೆ ಆಗೇತಿ ಎಂದು ನಿಮ್ಮ ಊರಿನವರ ಮ್ಯಾಲ ದೊಡ್ಡ ಕೇಸು ಹಾಕಬಹುದು. ಆನುರೇಣು ತೃಣಕಾಷ್ಠಗಳಲ್ಲಿ ದೇವರಿದ್ದಾನ ಎಂದು ಎಲ್ಲ ದಾರ್ಶನಿಕರು ಹೇಳ್ತಾರ, ಅದಕ್ಕ ಆ ಮೂರ್ತಿನ ವಜ್ರಗಟ್ಟಿಯವರಿಗೆ ಕೊಟ್ಟುಬಿಡ್ರಿ. ನಾನು ಬೇಕಾದರೆ ನಿಮಗ ಗುಡಿ ಕಟ್ಟಿಸುವಂತಹ ದೇವರ ಕೆಲಸಕ್ಕೆ 5 ಲಕ್ಷ ರೂಪಾಯಿ ಕೊಡ್ತಿನಿ.  ಸಂಗಮರಿ ಕಲ್ಲಿನ ಮೂರ್ತಿ ಕೊಡಸಿರ" ಎಂದು ಆಸ್ವಾಶನೆ ನೀಡಿದರು.
ಚೇಲಾ ಊರಿನ ಪ್ರಮುಖರನ್ನು ತನ್ನ ಮನೆಯ ಪಡಸಾಲಿಗೆ ಕರೆಸಿದ. ಎಮ್ಮೇಲ್ಲೆಎ ಪೋನು ಮಾಡಿರುವುದನ್ನು ಸಂಕ್ಷಿಪ್ತವಾಗಿ ತಿಳಿಸಿ 5 ಲಕ್ಷ ಸಿಗುವ ವಿಷಯವನ್ನು ಒತ್ತಿ ಒತ್ತಿ ಹೇಳತೊಡಗಿದ. ಗುಡಿ ಕಟ್ಟುವ ನೆಪದಲ್ಲಿ ಈ ಐದು ಲಕ್ಷ ರೂಪಾಯಿಯಲ್ಲಿ ತಮಗೆ ಹಿರಿತನ ಸಿಗುತ್ತದೆ ಎಂದು ಲೆಖ್ಖ ಹಾಕಿದ ಹಿರಿಯರು, ಬಾಯಲ್ಲಿ ನೀರು ತಂದುಕೊಂಡು ಅದಕ್ಕೆ ಒಪ್ಪಿಗೆ ನೀಡಿದರು.

                                     * * * * *
ಮರುದಿನ ಬೆಳಿಗ್ಗೆ ಬಾಜಾ ಬಂಜಂತ್ರಿಯವರೊಂದಿಗೆ ಹುಂಬ ಉತ್ಸಾಹದಿಂದ ವಜ್ರಗಟ್ಟಿಯವರು ಮರೆಗಟ್ಟಿಗೆ ಬಂದರು. ಮರೆಗಟ್ಟಿಯ ಅಗಸಿಯಲ್ಲಿ ಸೊಟ್ಟ ಮುಖ ಮಾಡಿಕೊಂಡು ಕುಂತಿದ್ದ ಹನುಮಂತನನ್ನು ಅನಾಮತ್ತಾಗಿ ಎತ್ತಿಕೊಂಡು ಟ್ಯಾಕ್ಟರನಲ್ಲಿ ಕುಳ್ಳಿರಿಸಿಕೊಂಡು ಮತ್ತೆ ಮೇರವಣಿಗೆ ಸುರುಹಚ್ಚಿಕೊಂಡರು.  ನೇರವಾಗಿ ತಮ್ಮೂರಿಗೆ ಹೋಗದೇ ಇದು ತಮ್ಮ ವಿಜಯೋತ್ಸವೆಂದು ಬಿಂಬಿಸುವದಕ್ಕೊಸ್ಕರ ಮರೆಗಟ್ಟಿಯ ತುಂಬ ಹನುಮಂತನನ್ನು ಹೊತ್ತುಕೊಂಡು ಅಲೆದಾಡಹತ್ತಿದರು. ಇದರಿಂದ ಮರೆಗಟ್ಟಿಯ ಬಸಣ್ಣ ಮತ್ತು ಅವನ ಸಂಘದ ಹುಡುಗರಿಗೆ ಚಡ್ಡಿಯಲ್ಲಿ ಇರುವೆ ಬಿಟ್ಟಂತಾಗಿ ಯುವಕ ಮಂಡಳದಲ್ಲಿ ಸಭೆ ಸೇರಿದರು.  ಮೈಕ್ ಹಿಡಿದುಕೊಂಡ "ನಮ್ಮೂರಿನ ಹಿರಿಯರು ಐದು ಲಕ್ಷ ರೂಪಾಯಿ ಎಂಜಲಕ ಆಸೆ ಮಾಡಿ ಇನ್ನೊಂದು ಊರಿಗೆ ನಮ್ಮ ಗ್ರಾಮ ದೇವರು ಹನುಮಂತನನ್ನು ಮಾರುತ್ತಿದ್ದು, ಷಂಡರಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ನಾವು ಬಿಸಿ ರಕ್ತದ ಹುಡುಗರು ಅವಕಾಶ ಕೊಡುದು ಬ್ಯಾಡ" ಎಂದು ತನ್ನ ಬಿಸಿಯನ್ನು ಇನ್ನಿತರ ಯುವಕರಿಗೆ ಹರಡತೊಡಗಿದನು. ಆದರೂ ಕೂಡ ಹಿರಿಯರು ಅತ್ತ ಕಡೆ ಹಾಯದೆ ಅವನ ಭಾಷಣಕ್ಕೆ ಕ್ಯಾರೆ ಅನ್ನಲಿಲ್ಲ. ಇದರಿಂದ ಮತ್ತಷ್ಟು ಅವಮಾನಿತನಾದ ಬಸಣ್ಣ ತನ್ನ ಹುಡುಗರನ್ನು ಕರೆದುಕೊಂಡು ಮೆರವಣಿಗೆ ಬರುವ ದಾರಿಯಲ್ಲಿ ಅಡ್ಡಗಟ್ಟಿ ಧರಣಿ ಕುಳಿತಬಿಟ್ಟನು. ಮೆರವಣಿಗೆ ಅಲ್ಲಿಯೇ ನಿಂತಿತು. ಎರಡು ಕಡೆಯ ಊರ ಹಿರಿಯರು ಬಸಣ್ಣನ ಮನ ಒಲಿಸಲು ಪ್ರಯತ್ನಿಸಿದರಾದರೂ ಫಲ ಸಿಗಲಿಲ್ಲ.

 ಹೊತ್ತು ನೆತ್ತಿ ಮ್ಯಾಲ ಬಂದು ಚರ್ಮದೊಳಗಡೆಯಿಂದ ಬೆವರು ತೊಟ್ಟಿಕ್ಕತೊಡಗಿತು. ಇದರಂದ ತಾಳ್ಮೆ ಕಳೆದುಕೊಂಡ ವಜ್ರಗಟ್ಟಿಯವರು ಜಗಳಕ್ಕೆ ನಿಂತರು. ಬಾಯಿ ಬಾಯಿ ಹತ್ತಿ, ಕೈ ಕೈ ಮಿಲಾಯಿಸತೊಡಗಿ, ಕೈಯಲ್ಲಿ ಕಲ್ಲುಗಳು ಬಂದು ಒಂದೆರಡು ತಲೆಗಳು ಕೂಡ ಒಡೆದು, ಬೆವರಿನೊಂದಿಗೆ ರಕ್ತವು ಬಸಿಯತೊಡಗಿತು. ಬಸಣ್ಣ ಮತ್ತು ಅವನ ಹುಡುಗರ ಕೈ ಮೇಲಾಗಿ ಮೈಯಲ್ಲಾ ಜಜ್ಜಿಸಿಕೊಂಡ ವಜ್ರಗಟ್ಟಿಯರು ಹನುಮಂತ ದೇವರನ್ನು ಅಲ್ಲಿಯೇ ಬಿಟ್ಟು ಊರ ದಾರಿಯನ್ನು ಹಿಡಿದರು. ಅವರ ಗುಂಪಿನಲ್ಲಿದ್ದ ಹುಚ್ಚಮಲ್ಲ ತನ್ನೊಳಗೆ ಮುಸಿ ಮುಸಿ ನಗುತ್ತಿದ್ದ. ಹನುಮಪ್ಪ ಕೂಡ!
                    
                                * * * * *
ವಜ್ರಗಟ್ಟಿ ಎಂಬ ಊರು ಅವಮಾನದ ಕುದಿ ತಾಳಲಾರದೆ ಪೂರ್ತಿಯಾಗಿ ಬಿಸಿಯಾಗತೊಡಗಿತು. "ಹನುಮಪ್ಪ ನಮ್ಮ ಅಜನ್ಮ ಸಿದ್ಧ ಆಸ್ತಿ" ಎನ್ನುವಂತೆ ಜನ ವರ್ತಿಸತೊಡಗಿದರು. ತಮ್ಮ ಮೊಬೈಲ್ ಟ್ರಿನ್ ಟ್ರಿನ್ ಎನಿಸಿದ ಛೆರಮನ್ನರು ಎಮ್ಮೆಲ್ಲೆ ಮುಂದೆ ತಮ್ಮ ಗೋಳನ್ನು ತೊಡಿಕೊಂಡರು. ಇದು ದೇವರ ವಿಷಯವಾಗಿರೊದ್ರಿಂದ ಎಮ್ಮೆಲ್ಲೆಗೂ ಒಂದು ಕ್ಷಣ ಎನು ಹೇಳಬೇಕೆಂದು ತೊಚದಾಯಿತು. ಮರುಕ್ಷಣ ಸುದಾರಿಸಿಕೊಂಡು "ಪುರಾತನವಾದ ದೇವರ ಮೂರ್ತಿ ಮತ್ತು ದೇವಸ್ಥಾನದ ಪ್ರಾಚ್ಯ ವಸ್ತುಗಳು ಕಳ್ಳತನ ಆಗ್ಯಾವ ಎಂದು ಪೋಲಿಸ್ ಕಂಪ್ಲೇಂಟ್ ಕೊಡ್ರಿ, ಸರಳ... ದಾರಿಗೆ ಬರ್ತಾರ" ಎಂದು ಅಸಹನೆಯಿಂದ ಅವಡುಗಚ್ಚಿ ಮೊಬೈಲ್ ಮಡಚಿಟ್ಟುಕೊಂಡರು.

  ಒಂದು ಸುಡು ಮಧ್ಯಾಹ್ನ ಬರ್ರರ್ರ... ಎಂದು ದೂಳೆಬ್ಬಿಸಿಕೊಂಡು ಒಂದರ ಹಿಂದೊಂದು ಮೂರು ಪೋಲಿಸ್ ಜೀಪುಗಳು ದರೆಗಟ್ಟಿಯತ್ತ ದಾವಿಸಿದವು. ಜೀಪಿನಿಂದ ದಬದಬನೆ ಕೆಳಗಿಳಿದ ಪೋಲಿಸರು ಕಂಡಕಂಡವರಿಗೆ ಲಾಠಿ ರುಚಿ ತೋರಿಸತೊಡಗಿದರು. ಜನರು ಕಂಗಾಲಾಗಿ ತಮ್ಮ ಮನೆಯೊಳಗೆ ಹೊಕ್ಕೊಂಡು ಒಳ ಚಿಲಕ ಹಾಕ್ಕೊಂಡರು. ಕ್ಷಣ ಮಾತ್ರದಲ್ಲಿ ರಸ್ತೆಗಳು ಖಾಲಿಯಾಗಿ ಬಿಕೋ ಎನ್ನತೊಡಗಿದವು. ನಂತರ ಪೋಲಿಸರು ಊರ ಅಗಸಿ ಬಾಗಿಲಿನತ್ತ ದಾವಿಸಿ ಸೊಟ್ಟ ಮೊರೆಯ ಹನುಮಪ್ಪನನ್ನು ಇಷ್ಟಕ್ಕೆಲ್ಲಾ ನಿನೇ ಕಾರಣ ಎನ್ನುವಂತೆ ಸಿಟ್ಟಿನಿಂದ ಎತ್ತಿಕೊಂಡು ಜೀಪಿನ ಮೇಲೆ ಹೇರಿಕೊಂಡರು. ಬಂದಷ್ಟೆ ವೇಗವಾಗಿ ಜೀಪುಗಳು ಮಾಯವಾದವು.

  ಮರುದಿನ ಎಲ್ಲ ಪತ್ರಿಕೆಗಳು "ಪೋಲಿಸ್ ಕಸ್ಟಡಿಯಲ್ಲಿ ಹನುಮಪ್ಪ ದೇವರು" ಎಂಬ ಶಿರ್ಷಿಕೆಯೊಂದಿಗೆ ಆಕರ್ಷಕವಾಗಿ ಸುದ್ಧಿ ಪ್ರಕಟಿಸಿದವು. ಹನುಮಪ್ಪ ಎಲ್ಲ ಟಿವಿ ಚಾನಲ್‍ಗಳಲ್ಲಿ ತನ್ನ ಸೊಟ್ಟ ಮೂತಿಯನ್ನು ತೋರಿಸಿದ್ದೆ ತೋರಿಸಿದ್ದು. ದೇವರು ಎನು ತಪ್ಪು ಮಾಡಿರಬಹುದು ಎಂದು ಜನರು ಗಾಬರಿಯಿಂದ ಸ್ಟೇಷನ್ನಿನ ಕಡೆ ಬರತೊಡಗಿದರು. ಸರಿಯಾಗಿ ಒಂಬತ್ತು ಗಂಟೆಗೆ ಎರಡು ಹಳ್ಳಿಯ ಜನರು ಟ್ಯಾಕ್ಟರ್, ಬೈಕು, ಟಂಟಂ ಗಾಡಿ ಮುಂತಾದವುಗಳಲ್ಲಿ ಪೋಲಿಸ್ ಸ್ಟೇಷನ್ ಮುಂದೆ ಬಂದಿಳಿಯತೊಡಗಿದರು. ಭಜನಾ  ಮಂಡಳಿಯವರು ಭಜನಾ ಪದ ಸುರು ಹಚಗೊಂಡರು. ಡೊಳ್ಳು ಹಲಗೆಗಳ ಬಡಿತ ಸ್ಟೇಷನ್ನಿನ ಅಂಗಳ ದಾಟಿಕೊಂಡು ನಗರವನ್ನೆಲ್ಲಾ ಆವರಿಸತೊಡಗಿ ನಗರದ ನಾಗರಿಕರೆನಿಸಿಕೊಂಡವರು ಪೋಲಿಸ್ ಸ್ಟೇಷನ್ ಕಡೆ ಮುಖ ಮಾಡಿದರು. ಪೇದೆಗಳು ಎನು ಮಾಡಬೆಕೆಂದು ಯೋಚಿಸಿ ಯೋಚಿಸಿ ಕೊನೆಗೆ "ನೀನೆ ದಾರಿ ತೊರಿಸಪ್ಪ" ಎಂದು ಹನುಮಪ್ಪನಿಗೆ ಕೈ ಮುಗಿದು ನಿಂತರು.

ಅಷ್ಟರಲ್ಲಿ ಎರಡು ಊರಿನ ಪೂಜಾರಿಗಳ ನಡುವೆ ಪೂಜೆಗಾಗಿ ನಾ ಮೊದಲು, ತಾ ಮೊದಲು ಎಂದು ಜಗಳ ಪ್ರಾರಂಭವಾಯಿತು. ಆಯಾ ಊರವರು ತಮ್ಮ ತಮ್ಮ ಊರಿನ ಪೂಜಾರಿಗಳ ಬೆಂಬಲಕ್ಕೆ ನಿಂತುದ್ದರಿಂದ ಉರಿಯುವ ಬೆಂಕಿಗೆ ತುಪ್ಪ ಹಾಕಿದಂತಾಯಿತು. ಪೋಲಿಸ್ ಅಧಿಕಾರಗಳ ಎಚ್ಚರಿಕೆಯನ್ನು ಕಡೆಗಣಿಸಿ ಜಗಳ ಮುಂದುವರೆದಿದ್ದರಿಂದ ಸಿಟ್ಟಿಗೆದ್ದ ಪೋಲಿಸರು ಲಾಠಿ ಬಿಸಿ ತೋರಿಸಿ ಜನರನ್ನು ಕಂಪೌಂಡನಿಂದ ಚದುರಿಸಿದರು.

 ಹೊರ ಬಂದ ಎರಡು ಊರಿನ ಜನ ಎರಡು ಕಡೆ ಬೇರೆ ಬೇರೆಯಾಗಿ ಸ್ಟೇಷನ್ ಮುಂದೆ ಕುಳಿತು ಪ್ರತಿಭಟನೆ ಮಾಡತೊಡಗಿದರು. "ಪೋಲಿಸರು ಲಾಠಿ ರುಚಿ ತೋರಿಸಿ ಅಮಾಯಕ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಾಕ ಹತ್ಯಾರ. ನಮ್ಮ ಗ್ರಾಮ ದೇವರನ್ನುಪೂಜೆ ಮಾಡುವುದಕ್ಕೆ ನಾವು ಪೋಲಿಸರ ಅನುಮತಿ ಕೇಳಬೇಕಾಗಿ ಬಂದಿರುವುದು ವಿಪರ್ಯಾಸ" ಎಂದು ಬಸಣ್ಣನಂತವರು ಎದ್ದು ನಿಂತು ತಮ್ಮ ನಾಲಿಗೆ ಚಟ ತೀರಿಸಿಕೊಳ್ಳತೊಡಗಿದರು. ಸೂರ್ಯ ನೆತ್ತಿ ಮೇಲೆ ಬಂದತೆಲ್ಲಾ ವಾತಾವರಣ ಬಿಸಿ ಎರುತ್ತಿರುವುದನ್ನು ಕಂಡ ಪೋಲಿಸ್ ಅಧಿಕಾರಿಗಳು ಮೊದಲ ಬಂದ ಊರಿನವರಿಗೆ ಆಧ್ಯತೆ ನೀಡಿ ಪಾಳೆ ಪ್ರಕಾರ ಪೂಜೆ ಮಾಡಲು ಅನುಮತಿ ನೀಡಿದರು.

                                * * * * *
ಪ್ರತಿ ಶನಿವಾರ ಸ್ಟೇಷನ್ನಿನಲ್ಲಿ ಹೀಗೆ ಪೂಜೆ ಮುಂದುವರೆಯಿತು. ವಾರದ ನಡುವಿನ ದಿನಗಳಲ್ಲಿ ತಮ್ಮ ವಯಕ್ತಿಕ ಕೆಲಸಗಳಿಗೆ ನಗರಕ್ಕೆ ಬರುತ್ತಿದ್ದ ಗ್ರಾಮಸ್ಥರು, ಸ್ಟೇಷನ್ನಿಗೆ ಬಂದು ಹನುಮಂತನ ದರ್ಶನ ಪಡೆಯುವದನ್ನು ರೂಡಿಸಿಕೊಂಡರು. ಸ್ಟೇಷನ್‍ನ್ನು ಐದು ಸುತ್ತು ಪ್ರದಕ್ಷಿಣೆ ಹಾಕಿ, ಮೂರ್ತಿ ಇಟ್ಟ ಕಟಂಜರಿ ಮುಂದೆ ಕಾಯಿ ಒಡೆಯುತ್ತಿದ್ದರು. "ನಮ್ಮಂತಹ ನರಮನಷ್ಯರು ಮಾಡಿದ ಪಾಪಗಳಿಂದ ದೇವರೆ ನಿನು ಈ ದುಷ್ಟ ಪೋಲಿಸರ ಕೈಗೆ ಸಿಗುವಂತಾಯಿತು. ನಿಯೇನ್ ಹೆದ್ರಕೋಬ್ಯಾಡ ನಾವೆನಾದರೂ ಉಪಾಯ ಮಾಡಿ ನಿನ್ನನ್ನು ಈ ನರಕದಿಂದ ಪಾರು ಮಾಡ್ತಿವಿ ಎಂದು ಕೆಲವು ಮುಗ್ದ ಜನರು ದೇವರಿಗೆ ಧೈರ್ಯ ತುಂಬಿ, ಹನುಮಪ್ಪನನ್ನು ಚಂದಂಗ ನೋಡಿಕೊಳಿ"್ರ ಎಂದು ತಮ್ಮ ಪರಿಚಯದ ಪೇದೆಗಳಿಗೆ ಬುದ್ಧಿವಾದ ಹೇಳಿ ಅಲ್ಲಿಂದ ಭಾರದ ಹೆಜ್ಜೆಗಳನ್ನಿಡುತ್ತಾ ಹೊರ ಬರುತ್ತಿದ್ದರು.

 ಕ್ರಮೇಣ ಸುತ್ತಮುತ್ತಲ ಬಡಾವಣೆಗಳಲ್ಲಿನ ಜನರು ಕೂಡ ಹನುಮಪ್ಪನ ದರ್ಶನಕ್ಕೆ ಬರತೊಡಗಿದರು. ಸ್ಟೇಷನನಿಗೆ ಯಾವುದೆ ಕೆಲಸದ ನಿಮಿತ್ತ ಬರುವ ಸುತ್ತಮುತ್ತಲ ಹಳ್ಳಿಯವರು ಮೊದಲು ಹನುಮಪ್ಪನ ದರ್ಶನ ತೆಗೆದುಕೊಂಡು ಆಮೇಲೆ ಅಧಿಕಾರಿಗಳ ಚೆಂಬರಿಗೆ ಹೋಗುತ್ತಿದ್ದರು. ಕೆಲವು ಪೇದೆಗಳು ಕೂಡ ತಮ್ಮ ಹಿರಿಯ ಅಧಿಕಾರಿಗಳಿಗೆ ಶಲ್ಯೂಟ್ ಹೊಡೆಯುವ ಮೊದಲು ಹನುಮಪ್ಪನಿಗೆ ಕೈ ಮುಗಿಯುವುದನ್ನು ರೂಡಿಸಿಕೊಂಡರು. ಪ್ರತಿದಿನವು ಬರುವ ಭಕ್ತರು ತಮ್ಮ ಗಂಟೆ ಜಾಗಟೆಗಳಿಂದ ವಿಶಿಷ್ಟ ರೀತಿಯಲ್ಲಿ ದ್ವನಿ ಹೊರಡಿಸಿ ತಾಸುಗಟ್ಟಲೆ ಪೂಜೆ ಮಾಡುತ್ತಿದ್ದರು. ಇದರಿಂದ ಅಧಿಕಾರಿಗಳಿಗೆ ಕಿರಿಕಿರಿ ಎನಿಸಿತು. ಇದಕ್ಕಾಗಿ ಒಂದು ಉಪಾಯ ಹುಡುಕಿ ಪೂಜೆಯಲ್ಲಿ ಪರಿಣತಿಯನ್ನು ಹೊಂದಿದ್ದ ಒಬ್ಬ ಪೇದೆಗೆ ಪುಜಾರಿ ಪಟ್ಟವನ್ನು ಕಟ್ಟಿದರು. ಹೀಗೆ ಪೋಲಿಸ್ ಸ್ಟೇಷನ್ ಎಂಬುದು ದಿನ ಗತಿಸಿದಂತೆ ದೇವಸ್ಥಾನವಾಗಿ ಬದಲಾಗತೊಡಗಿತು.
                    
                               * * * * *
ಇತ್ತ ವಜ್ರಗಟ್ಟಿಯವರು ಪುರಾತನವಾದ ಮೂರ್ತಿ ಮತ್ತು ಪ್ರಾಚ್ಯ ವಸ್ತುಗಳು ಕಳುವಾಗಿವೆ" ಎಂದು ಮರೆಗಟ್ಟಿಯ 115 ಜನರ ಮೇಲೆ ಬಲವಾದ ಕೇಸು ಜಡಿದಿದ್ದರು. ಮರೆಗಟ್ಟಿಯವರು ಕೂಡ ನಮ್ಮ ಊರಿಗೆ ಬಂದು ನಮ್ಮನ್ನೆ ಹೊಡೆದಿದ್ದಾರೆ ಎಂದು ವಜ್ರಗಟ್ಟಯವರ ಮೇಲೆ ಮರು ಕೇಸು ದಾಖಲಿಸಿದ್ದರು. ಎರಡು ಊರಿನವರು ಜಿಲ್ಲಾ ಕೊರ್ಟಿಗೆ ಅಲೆದಾಡುವುದು ಅನಿವಾರ್ಯವಾಯಿತು.  ಇದು ಧಾರ್ಮಿಕ ಅಚರಣೆಗೆ ಸಂಬಂಧಿಸಿದ ವಿಷಯವಾದುದರಿಂದ ವರ್ಷಾನುಗಟ್ಟಲೇ ಕೇಸು ವಿಳಂಬವಾಗತೊಡಗಿತು. ಮೊದಲೆಲ್ಲ ಉತ್ಸಾಹದಿಂದ ಕೋರ್ಟಿಗೆ ಹೋಗುತ್ತಿದ್ದ ಜನರು ನಂತರದಲ್ಲಿ ಇದರಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂದು ಹವನಿಸತೊಡಗಿದರು. ತಿಂಗಳಿಗೊಮ್ಮೆ ತಮ್ಮ ಹೊಲ ಮನೆಯ ಕೆಲಸಗಳನ್ನು ಬದಿಗಿಟ್ಟು ಕೈಯಿಂದ ಖರ್ಚು ಮಾಡಿಕೊಂಡು ಹೋಗುವುದು ಕೆಲವರಿಗೆ ಬಹಳಷ್ಟು ದುಸ್ತರವಾಗತೊಡಗಿತು.
ಮುಂದ ಹ್ಯಂಗ ಮಾಡುವುದು ಎಂದು ಯೋಚಿಸುತಿದ್ದವರಿಗೆ ಹನುಮಂತನ ದೇವರಿಗಾಗಿ ಬಿಟ್ಟಿದ್ದ ಪೊಗದಸ್ತಾದ ಹೋರಿಗಳು ಪರಿಹಾರವಾಗಿ ಕಂಡವು. ಹೊರಿಗಳನ್ನು ಹರಾಜು ಹಾಕಿ ಬಂದ ಹಣವನ್ನು ಬಸ್ ಚಾರ್ಜಿಗಾಗಿ ಬಳಸತೊಡಗಿದರು. ಆ ಹಣವು ಖಾಲಿಯಾಯಿತು. ಮುಂದೆ ಸ್ವಲ್ಪ ದಿನ ಊರ ಎಲ್ಲ ಮನೆಗಳಿಂದ ಚಂದಾ ಎತ್ತಿ ಕೋರ್ಟಿನ ಖರ್ಚನ್ನು ಸರಿದೂಗಿಸಿಕೊಂಡರು. ಅದು ಸಾಲದಾದಾಗ ತಮ್ಮ ತಮ್ಮ ಹೊಲವನ್ನು ಬಡ್ಡಿಯಲ್ಲಿ ಹಾಕಿದರು. ಬಸಣ್ಣನಂತ ಕಲವು ಯುವಕರು ಖರ್ಚಿಗಾಗಿ ಊರು ಬಿಟ್ಟು ಗೂಳೆ ಹೋಗುವುದು ಅನಿವಾರ್ಯವಾಯಿತು. ಕೊನೆ ಕೊನೆಯಲ್ಲಿ ಜನರು ಸ್ಟೇಷನ್ನಿಗೆ ಹೋಗಿ ಪೂಜೆ ಮಾಡುವುದನ್ನು ಕಡೆಗಣಿಸತೊಡಗಿದರು. ಯಾವಾಗಲಾದಾಗರೊಮ್ಮೆ ಹೋದಾಗ ನಿನ್ನಿಂದಲೇ ಆದ್ದದ್ದು ಎಂದು ಹನುಮಂತ ದೇವರಿಗೆ ಮೂದಲಿಸತೊಡಗಿದರು.

                                  * * * * *
ಮೂರೂವರೆ ವರ್ಷಗಳ ನಂತರ ಕೇಸು ಖುಲ್ಲಾ ಆಯಿತು. ಹನುಮಂತ ದೇವರ ಜಾಗ ಬದಲಿಸಿದ್ದು ಕಾನೂನು ಪ್ರಕಾರ ತಪ್ಪು. ಈ ಕೃತ್ಯದಲ್ಲಿ ಭಾಗವಹಿಸಿದವರೆಲ್ಲರೂ ಇಂತಿಷ್ಟು ದಂಡ ಕಟ್ಟಬೇಕು ಮತ್ತು ಎರಡು ಊರಿನವರು ಸೇರಿ ಹನುಮಂತ ದೇವರನ್ನು ಮರು ಪ್ರತಿಷ್ಠಾಪಿಸಬೇಕು ಎಂದು ಕೋರ್ಟು ಆದೇಶಿಸಿತು. ಅಷ್ಟೋತ್ತಿಗಾಗಲೇ ಜನ ಕೋರ್ಟಿಗೆ ಅಲೆದಾಡಿ ಸೋತು ಸುಣ್ಣವಾಗಿದ್ದರು. ಜನರ್ಯಾರು ಮೂರ್ತಿಯ ಮರು ಪ್ರತಿಷ್ಠಾಪನೆಗೆ ಉತ್ಸಾಹ ತೋರಿಸಲಿಲ್ಲ. ಪೋಲಿಸ್ ಅಧಿಕಾರಿಗಳು ಕಾಯುವಷ್ಟು ದಿನ ಕಾಯ್ದು ಕೊನೆಗೆ ಒಂದು ದಿನ ಮತ್ತೆ ಜೀಪಿನ ಮೇಲೆ ಹನುಮಂತನನ್ನು ಕುಳ್ಳಿರಿಸಿಕೊಂಡು ಬಂದರು. ಜೀಪಿನ ಮೇಲೆ ಮೂರ್ತಿಯನ್ನು ಕಂಡು ಜನ ದೆವ್ವ ಕಂಡವರಂತೆ ದಿಕ್ಕುಪಾಲಾಗಿ ಓಡತೊಡಗಿದರು.

                                     *****


-ಹನುಮಂತ ಹಾಲಿಗೇರಿ

Friday, 10 May 2013

ಸಿದ್ದು ನಡೆದ ಹಾದಿಯಲ್ಲಿ ಕಲ್ಲು ಮುಳ್ಳು ತಿರುವುಗಳು - ದಿಲಾವರ ರಾಮದುರ್ಗ.

ಅಂತೂ ಅಹಿಂದ ಹೀರೋ ಸಿದ್ದು ಗೆದ್ದರು...
ಸಿದ್ದರಾಮಯ್ಯ 1983ರಿಂದ 2006ರವರೆಗೆ ಸುಮಾರು 23 ವರ್ಷಗಳ ಕಾಲ ಕಾಂಗ್ರೆಸ್ ವಿರೋಧಿ ನೆಲೆಯಲ್ಲೇ ರಾಜಕೀಯದ ಕೆರಿಯರ್ ರೂಪಿಸಿಕೊಂಡು ಬಂದವರು. ಅಲ್ಲಿ ಪಕ್ಷದ ಪದಾಧಿಕಾರಿಯಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಅಧಿಕಾರದ ಎಲ್ಲ ಮೇಲ್ ಸ್ತರಗಳನ್ನು ತಾಕಿದವರು. ಅವರ ಒಂದೇ ಒಂದು ಕನಸು ಸಾಕಾರಗೊಳ್ಳದೇ ಉಳಿದಿದ್ದು ಮುಖ್ಯಮಂತ್ರಿ ಪಟ್ಟ.

ಮುಖ್ಯಮಂತ್ರಿ ಆಗುವ ಒನ್ ಪಾಯಿಂಟ್ ಪ್ರೋಗ್ರಾಂ ಇಟ್ಟುಕೊಂಡು ಕಾಂಗ್ರೆಸ್ ಸೇರಿ ಅಲ್ಪ ಅವಧಿಯಲ್ಲೇ ಆ ಕನಸನ್ನು ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. ಇದನ್ನು ಚತುರತೆ ಅನ್ನಬೇಕೋ, ಅದೃಷ್ಟ ಅನ್ನಬೇಕೋ, ಹೋರಾಟಕ್ಕೆ (ಮುಖ್ಯಮಂತ್ರಿ ಪಟ್ಟಕ್ಕೆ) ಸಂದ ಜಯ ಅನ್ನಬೇಕೋ?.

2006ರಿಂದ ಈಚೆಗಷ್ಟೇ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿಕೊಂಡಿದ್ದು. ಅಹಿಂದ ಸಕ್ಸೆಸ್ ಹಿನ್ನೆಲೆಯಲ್ಲಿ ಸ್ಟಾರ್ ನಂತೆ ಠಳಾಯಿಸಿದರು. ಈಗ ಕೇವಲ 7 ವರ್ಷದ ಕಾಂಗ್ರೆಸ್ ಜೀವನದಲ್ಲಿ ಕನಸಿನ ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಾರೆ. ಇದು ಸಿದ್ದು ಪವಾಡವೂ ಹೌದು. ಕಾಂಗ್ರೆಸ್ ರಾಜಕೀಯ ಅನಿವಾರ್ಯತೆಯೂ ಹೌದು. ಖರ್ಗೆ, ಷರೀಫ, ಆಸ್ಕರ್ ಅಂಥವರ ದುರಾದೃಷ್ಟವೂ ಹೌದು. ಅಂತೂ ದಕ್ಷತೆಯ 'ಕೈ'ಗಾದರೂ ಅಧಿಕಾರದ ಸೂತ್ರ ದಕ್ಕುತ್ತಿದೆ.

ಬಿಜೆಪಿಯ ಹಿಂದೂತ್ವದ ಕಾರ್ಡ್ ಮತ್ತು ಹಿಂದು ಪೊಲರೈಸೇಷನ್ ಯತ್ನದ ಮೂಲಕ ಅದಕ್ಕೆ ಭದ್ರ ಬುನಾದಿ ಹಾಕಿಕೊಂಡೀತೆಂಬ ಭಯ ಕಾಂಗ್ರೆಸ್ ನಲ್ಲಿತ್ತು. ಹೀಗಾಗಿ ಅದಕ್ಕೆ ರಾಜ್ಯದ ಹಿಂದೂ ಪಾಕೆಟ್ ನಲ್ಲಿರುವ ಬಹುದೊಡ್ಡ ಸಂಖ್ಯೆಯ ಹಿಂದುಳಿದ ವರ್ಗಗಳನ್ನು ಬೇರ್ಪಡಿಸಿಕೊಳ್ಳಬೇಕಿತ್ತು. ಜತೆಗೆ ರಾಜ್ಯದ ಬಹುದೊಡ್ಡ ಸಂಖ್ಯೆಯ ಲಿಂಗಾಯತ ಕೋಮಿನವರನ್ನು ಬಿಜೆಪಿಯಿಂದ ಬೇರ್ಪಡಿಸಬೇಕಿತ್ತು. ಒಕ್ಕಲಿಗರಲ್ಲಿ ದೇವೇಗೌಡರ ಪ್ರಭಾವ ದಟ್ಟವಾಗುತ್ತ ಸಾಗುವುದನ್ನು ತಡೆಯಬೇಕಿತ್ತು.

ಕಾಂಗ್ರೆಸ್ ಇದನ್ನು ತುಂಬ ಜಾಣತನದಿಂದ ಸಾಧಿಸಿದೆ. ರೆಡ್ಡಿ, ಯಡಿಯೂರಪ್ಪಗೆ ಹಗರಣದ ಕುಣಿಕೆ ತೋರಿಸುವ ಮೂಲಕ ಬಿಜೆಪಿಯನ್ನು ಡೈಲೂಟ್ ಮಾಡಿತು. ಯಡಿಯೂರಪ್ಪ ಬಿಜೆಪಿ ತೊರೆಯಬೇಕಾಯಿತು. ಆ ಮೂಲಕ ಲಿಂಗಾಯತರಲ್ಲಿ ಬಿಜೆಪಿ ಬಗ್ಗೆ ಅಸಮಧಾನ ಮೂಡುವಂಥ ರಾಜಕೀಯ ಆಟವೊಂದು ನಡೆದು ಹೋಯಿತು.
ಗೌಡರ ಪಾಳೆಯದ ಬಹುದೊಡ್ಡ ಶಕ್ತಿ ಸಿದ್ದರಾಮಯ್ಯ ತಾನಾಗೇ ಹೊರಬರತೊಡಗಿದ್ದರು. ಕಾಂಗ್ರೆಸ್ ಬಾಗಿಲು ತಟ್ಟಿದರು. ಜಾಣತನದಿಂದ ಒಳಕ್ಕೆಳೆದುಕೊಂಡ ಕಾಂಗ್ರೆಸ್ ಅಹಿಂದ ಕಾರ್ಡ್ ಆಟಕ್ಕೆ ಸಿದ್ದು ಸೂಕ್ತ ಅಂದುಕೊಂಡಿತು. ಅದು ಯಶಸ್ವಿ ಕೂಡ ಆಯ್ತು.
ಎಸ್.ಎಂ. ಕೃಷ್ಟ ಮೂಲಕ ಡಿ.ಕೆ. ಶಿವಕುಮಾರ್ ಮತ್ತು ಇತರ ಸಾಧ್ಯತೆಗಳ ಮೂಲಕ ಒಕ್ಕಲಿಗರಲ್ಲಿ ಗೌಡರ ಪ್ರಭಾವವನ್ನು ತಕ್ಕಮಟ್ಟಿಗೆ ನಿಯಂತ್ರಿಸುವ ತಂತ್ರವೂ ಬಳಕೆಯಾಯ್ತು. ಪರಮೇಶ್ವರ್ ಸೋಲುವಂಥ ವಾತಾವರಣ ಸೃಷ್ಟಿಯಾಗಿದ್ದು ಮತ್ತೊಂದು ರಾಜಕೀಯ ಆಟ.

ಸಿದ್ದರಾಮಯ್ಯ ರಾಜಕೀಯ ನಡೆ

1983ರಲ್ಲಿ ಒಂದು ಅನಿರೀಕ್ಷಿತ ಗೆಲುವಿನ ಮೂಲಕ ಸಿದ್ದರಾಮಯ್ಯ ವಿಧಾನಸಭೆ ಪ್ರವೇಶಿಸಿದರು. ಭಾರತೀಯ ಲೋಕ ದಳ ಅಭ್ಯರ್ಥಿಯಾಗಿ (ಚಾಮುಂಡೇಶ್ವರಿ ಕ್ಷೇತ್ರ) ಅವರು ಮೊದಲ ಚುನಾವಣೆ ಎದುರಿಸಿದರು.
* * *
ಜನತಾ ಪಾರ್ಟಿ ಸೇರುವ ಮೂಲಕ ಮೊದಲ ರಾಜಕೀಯ ಹೆಜ್ಜೆಯಲ್ಲೇ ಪಕ್ಷಾಂತರಕ್ಕೆ ತೆರಕೊಂಡವರು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಆಗ ಗಮನ ಸೆಳೆದರು.
1985ರ ಮಧ್ಯಂತರ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿಯಿಂದಲೇ ಮತ್ತೆ ಆಯ್ಕೆಯಾದರು. ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ಪಶುಸಂಗೋಪನಾ ಖಾತೆ ಸಚಿವರಾದರು. ಸಾರಿಗೆ, ರೇಷ್ಮೆ ಖಾತೆಗಳನ್ನೂ ನಿರ್ವಹಿಸಿದವರು.
1989ರಲ್ಲಿ ಕಾಂಗ್ರೆಸ್ ನ ರಾಜಶೇಖರ ಮೂರ್ತಿ ಎದುರು ಸೋತರು. ಇದು ಅವರ ಮೊದಲ ಸೋಲು.
* * *
ಈ ಜನತಾ ಪಕ್ಷ ರಾಷ್ಟ್ರಮಟ್ಟದಲ್ಲಿ ರೂಪುಗೊಂಡಿದ್ದರಿಂದ ಆದದ್ದೇನು? ಒಬ್ಬ ನೀಲಿಕಣ್ಣಿನ ಬ್ರಾಹ್ಮಣ ರಾಜಕಾರಣಿ ಮುರಾರ್ಜಿ ದೇಸಾಯಿ ಪ್ರಧಾನಿ ಆದರು. ಕರ್ನಾಟಕದಲ್ಲಿ ಬ್ರಾಹ್ಮಣ ರಾಜಕಾರಣಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆದರು. ಮುರಾರ್ಜಿ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ಇಂದಿರಾ ಗಾಂಧಿ ಪ್ರಧಾನಿ ಆಗಲು ಬಿಡುತ್ತಿದ್ದರೆ? ಹೀಗಾಗಿ ಜನತಾ ಪಕ್ಷದ ಮೂಲಕವೇ ಮುರಾರ್ಜಿ ಪ್ರಧಾನಿ ಪಟ್ಟಕ್ಕೇರಿದರು. ಇದಷ್ಟೇ ಜನತಾಪಕ್ಷದಿಂದ ಸಾಧ್ಯವಾಗಿದ್ದು. ಮುಂದೆ ಇದರಲ್ಲಿನ ಕೆಲವು ಮಹಾತ್ವಾಕಾಂಕ್ಷಿಗಳು ಬೇರೆ ರಾಜಕೀಯ ನೆಲೆಗಳಿಗೆ ಯತ್ನಿಸಿದರು. ಕೆಲವರು ತಕ್ಕಮಟ್ಟಿನ ಯಶಸ್ಸನ್ನೂ ಕಂಡರು.
* * *
ಜನತಾ ಪಕ್ಷದ ದರ್ಬಾರು ಮುಗಿದು ಹೋಯಿತು. ಜನತಾದಳ ರೂಪುಗೊಂಡಿತು.
1992ರಲ್ಲಿ ಸಿದ್ದರಾಮಯ್ಯ ಜನತಾದಳದ ಪ್ರಧಾನ ಕಾರ್ಯದರ್ಶಿಗಳಾದರು. ಹೆಗಡೆ-ದೇವೇಗೌಡ ಪರಸ್ಪರ ಕೈಜೋಡಿಸಿದ್ದರಿಂದ ಜನತಾದಳ ಭರ್ಜರಿಯಾಗೇ ಹೊಸ ರಾಜಕೀಯ ಮನ್ವಂತರಕ್ಕಿಳಿದಿತ್ತು.
ಜನತಾದಳ ಕೂಡ ಇಬ್ಭಾಗವಾಯಿತು. ಹೆಗಡೆ-ಗೌಡ ಬೇರೆಯಾದರು. ದೇವೇಗೌಡ ನೇತೃತ್ವದಲ್ಲಿ ಜನತಾದಳ (ಎಸ್) ರೂಪುಗೊಂಡಿತು.
* * *
1994 ರಲ್ಲಿ ಸಿದ್ದರಾಮಯ್ಯ ಜನತಾದಳದಿಂದ ಸ್ಪರ್ಧಿಸಿ ವಿಧಾನಸಭೆಗೆ ಮತ್ತೆ ಆಯ್ಕೆಯಾದರು. ದೇವೇಗೌಡರ ನೇತೃತ್ವದ ಜನತಾದಳ ಸರ್ಕಾರ ರಾಜ್ಯದಲ್ಲಿ ರೂಪುಗೊಂಡಿತು.
1996ರಲ್ಲಿ ಕಾಂಗ್ರೆಸ್ ಗೆ ಭಾರಿ ಏಟು ನೀಡಿದ ಜನತಾದಳ ಲೋಕಸಭೆಗೆ ದೊಡ್ಡ ಸಂಖ್ಯೆಯಲ್ಲಿ ಲಗ್ಗೆ ಇಟ್ಟಿತು. ಅನಿರೀಕ್ಷಿತ ಬೆಳೆವಣಿಗೆಯಲ್ಲಿ ದೇವೇಗೌಡ ಪ್ರಧಾನಿ ಪಟ್ಟಕ್ಕೇರಿದರು. ರಾಜ್ಯದ ಚುಕ್ಕಾಣಿಯನ್ನು ಜೆ.ಎಚ್. ಪಟೇಲ್ ಅವರಿಗೆ ವಹಿಸಿಕೊಟ್ಟರು. ಪಟೇಲ್ ನೇತೃತ್ವದ ಸರ್ಕಾರದಲ್ಲಿ ಸಿದ್ದು ಉಪಮುಖ್ಯಮಂತ್ರಿಯಾದರು. ಆಗಲೇ ಅವರಿಗೆ ಸಿಎಂ ಕುರ್ಚಿಯ ಗರಂ ಹವಾ ಬಡಿಯತೊಡಗಿತ್ತು. ದೇವೇಗೌಡರ ಮೇಲೆ ಗರಂ ಆಗಲು ಆರಂಭಿಸಿದ್ದು ಆಗಲೇ.
ಪಟೇಲ್-ಗೌಡ ಮುಸುಕಿನ ಗುದ್ದಾಟವೂ ನಡೆಯಿತು. ಹೆಗಡೆ-ಗೌಡ ಇರಿಸು ಮುರಿಸುಗಳ ಜಮಾನಾ ತಾರಕಕ್ಕೇರಿದ ಸಂದರ್ಭವೂ ಅದಾಗಿತ್ತು. ಗೌಡರು ಪ್ರಧಾನಿಯಾಗಲು ಪ್ರಮುಖ ಬೆಂಬಲವಾಗಿದ್ದ ಕಾಂಗ್ರೆಸ್ ಇದ್ದಕ್ಕಿದ್ದಂತೆ ಬೆಂಬಲ ವಾಪಸ್ ಪಡೆದುಕೊಂಡಿತು. ಪ್ರಧಾನಿ ಗದ್ದುಗೆಯನ್ನು ಗುಜ್ರಾಲ್ ಗೆ ಕಳಕೊಂಡ ಗೌಡರು ನಿರಾಶರಾಗಿದ್ದರು. ಕಾಂಗ್ರೆಸ್ ವಿರುದ್ಧ ಗೌಡರು ಕತ್ತಿ ಮಸೆಯಲು ಶುರುವಿಟ್ಟುಕೊಂಡರು. ಇಬ್ರಾಹಿಂ, ಸಿದ್ದು ಗೌಡರ ಜತೆಯಲ್ಲೇ ಇದ್ದರು.
1999ರಲ್ಲಿ ಜನತಾದಳ ಕೂಡ ಇಬ್ಭಾಗವಾಯಿತು. ಪಟೇಲ್ ಪಾಳೆಯದವರು ಆಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎನ್.ಡಿ.ಎ ಪರ ನಿಂತು ಜನತಾದಳ (ಯು) ಆದರೆ, ಇತ್ತ ದೇವೇಗೌಡರು ಸೆಕ್ಯುಲರ್ ಕಾರ್ಡ್ ಇಟ್ಟುಕೊಂಡು ಜನತಾದಳ (ಎಸ್) ರೂಪಿಸಿದರು. ಸಿದ್ದರಾಮಯ್ಯ ರಾಜ್ಯ ಘಟಕದ ಅಧ್ಯಕ್ಷರಾದರು. ಗೌಡರ ರಾಜಕೀಯದ ಗುರಿ, ಕಾಂಗ್ರೆಸ್ ನ ಸೆಕ್ಯುಲರ್ ಕಾರ್ಡ್ ತಳಪಾಯವನ್ನು ಅಲುಗಾಡಿಸಿ ತನ್ನತ್ತ ಸೆಳೆದುಕೊಳ್ಳುವುದಾಗಿತ್ತು.
1999ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋತರು.
2004ರಲ್ಲಿ ಮತ್ತೆ ಗೆಲುವು ಕಂಡರು.
2004ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿ ರೂಪಿಸಿದ ಧರ್ಮಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಉಪಮುಖ್ಯಮಂತ್ರಿ ಪಟ್ಟಕ್ಕೇರಿದರು. ಅದಾಗಲೇ ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಪ್ರಭಾವ ಶುರುವಾಗಿತ್ತು. ಇದು ಇಬ್ರಾಹಿಂ, ಸಿದ್ದರಾಮಯ್ಯ ಅವರನ್ನು ಕಂಗೆಡಿಸಿತ್ತು. ಸಿದ್ದರಾಮಯ್ಯ ಕೋಪಿಸಿಕೊಳ್ಳುವುದೂ ನಡೆದಿತ್ತು.ಇಬ್ರಾಹಿಂ ಹವಾ ಹಾಕಿ ಸಿದ್ದು ಅವರನ್ನು ಜೆಡಿಎಸ್ ನಿಂದ ಹೊರತಂದರು.
ಇದೇ ಸಂದರ್ಭದಲ್ಲಿ ಎಸ್. ಬಂಗಾರಪ್ಪ ಬಿಜೆಪಿ ಸೇರಿಕೊಂಡಿದ್ದರಿಂದ ಬಿಜೆಪಿ ರಾಜ್ಯದಲ್ಲಿ ದೊಡ್ಡ ಶಕ್ತಿ ಪಡಕೊಂಡಿತ್ತು.
* * *
2006 ಚುನಾವಣೆ ಕರ್ನಾಟಕದ ಮಟ್ಟಿಗೆ ಅತ್ಯಂತ ಮಹತ್ವದ ಚುನಾವಣೆಯಾಗಿತ್ತು. ದಕ್ಷಿಣದಲ್ಲಿ ಕಣ್ಣು ತೆರೆಯುವದಕ್ಕೇ ಕಷ್ಟಪಡುತ್ತಿದ್ದ ಬಿಜೆಪಿ ತುಂಬ ಬೆಳೆದು ನಿಂತಿತ್ತು. ಫಲಿತಾಶ ಅತಂತ್ರ ಸ್ಥಿತಿಗೆ ನೂಕಿತ್ತು. ಜೆಡಿಎಸ್ ಸರ್ಕಾರ ರೂಪಿಸುವುದಕ್ಕೆ ಏನೆಲ್ಲ ಕಸರತ್ತುಗಳನ್ನು ನಡೆಸಿತ್ತು. ದಿಢೀರನೇ ಆದ ಬೆಳವಣಿಗೆಯಲ್ಲಿ "20:20 ಫಾರ್ಮುಲಾ" ಮೊತ್ತ ಮೊದಲ ಬಾರಿಗೆ ರಾಜ್ಯ ರಾಜಕಾರಣಕ್ಕೆ ಪರಿಚಯಗೊಂಡಿತು. ಇದರ ರೂವಾರಿಗಳಾದ ಕುಮಾರಸ್ವಾಮಿ-ಯಡಿಯೂರಪ್ಪ ಅಧಿಕಾರ ಹಂಚಿಕೆಯ ಷರತ್ತಿನೊಂದಿಗೆ ಸಮ್ಮಿಶ್ರ ಸರ್ಕಾರ ರೂಪಿಸಿಕೊಂಡರು. 20ರ ಇನಿಂಗ್ಸ್ ಮುಗಿಸಿದ ಕುಮಾರಸ್ವಾಮಿ ಮುಂದಿನ ಇನಿಂಗ್ಸ್ ಅನ್ನು ಯಡಿಯೂರಪ್ಪಗೆ ಬಿಟ್ಟಕೊಡಲಿಲ್ಲ. ರಾಜಕೀಯವಾಗಿ ಇದೊಂದು ಪಾಲಿಟಿಕಲಿ ಕರೆಕ್ಟ್ ಅನಿಸಿದರೂ "ವಚನಭ್ರಷ್ಟ" ಎನಿಸಿಕೊಂಡರು. ಸರ್ಕಾರ ಪತನಗೊಂಡಿತು.
ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟು ಕುಳಿತಿದ್ದ ಸಿದ್ದರಾಮಯ್ಯ ವಿಪರೀತ ಮುನಿಸಿಕೊಂಡಿದ್ದರು. ಸಿಎಂ ಖುರ್ಚಿ ಗರಂ ಹವಾ ಹಂಬಲ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನಿಂದ ಹೊರ ಹೋಗುವಂತೆ ಮಾಡಿತು.
2008 ಯಡಿಯೂರಪ್ಪ ಅನುಕಂಪದ ಅಲೆಯಿಂದ ಬಿಜೆಪಿ ಮೊತ್ತಮೊದಲ ಬಾರಿಗೆ ದಕ್ಷಿಣದಲ್ಲಿ ಅಧಿಕಾರದ ಕಾತೆ ತೆರೆಯಿತು.
* * *
ಸಿದ್ದರಾಮಯ್ಯ ಕಾಂಗ್ರೆಸ್ ಕೆರಿಯರ್ (2006-2013)

2006ರಲ್ಲಿ ಸಿದ್ದರಾಮಯ್ಯ ಜೆಡಿಎಸ್ ತೊರೆದರು. ಕಾಂಗ್ರೆಸ್ ಸೇರಿ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಗೆದ್ದರು.
2008 ಕುಮಾರಸ್ವಾಮಿ ವಚನಭ್ರಷ್ಟ ವಿರೋಧಿ ಚಳವಳಿಯ ಮೂಲಕ ಯಡಿಯೂರಪ್ಪ ಬಿಜೆಪಿಗೆ ಮೊದಲ ಬಾರಿಗೆ ಮೂರಂಕಿ ದರ್ಶನ ಮಾಡಿಸಿದರು. ಆಪರೇಷನ್ ಕಮಲ ಇತ್ಯಾದಿ ಮೂಲಕ ಸರ್ಕಾರ ರೂಪಿಸಿಕೊಂಡರು. ಹಗರಣಗಳ ಮೇಲೆ ಹಗರಣ, ಗಣಿ ಉಪಟಳದ ನಡುವೆಯೂ ಮೂರು ವರ್ಷ ಅಧಿಕಾರ ನಡೆಸಿದರು.
ಇದೇ ಸಂದರ್ಭದಲ್ಲಿ ಅಹಿಂದ ಚಳವಳಿ ಪರಾಕಾಷ್ಠೆಗೆ ತಲುಪಿತ್ತು. ಸಿದ್ದರಾಮಯ್ಯ ಇದರ ರಿಯಲ್ ಹೀರೋ ಆಗಿ ಹೊರಹೊಮ್ಮಿದರು.
ರಾಜ್ಯದಲ್ಲಿ ಮೊದಲು ಜನತಾಪಕ್ಷ ಆನಂತರದಲ್ಲಿ ಜನತಾದಳ ಮತ್ತೀಗ ಬಿಜೆಪಿ ನೀಡಿದ ಏಟುಗಳಿಂದ ಕಾಂಗ್ರೆಸ್ ಬೇಸತ್ತುಕೊಂಡಿತ್ತು. ಈ ಎಲ್ಲ ಏಟುಗಳ ಹಿಂದೆ ದೇವೇಗೌಡರ ಸೆಕ್ಯುಲರ್ ರಾಜಕಾರಣದ ಕರಾಮತ್ತು ಎದ್ದು ಕಾಣಿಸುತ್ತಿತ್ತು. ಬಿಜೆಪಿ ಬೆಳೆಯುವುದಕ್ಕೂ ಕುಮಾರಸ್ವಾಮಿ ಮೂಲಕ ದೇವೇಗೌಡ ಪರೋಕ್ಷ ಕಾರಣ ಎನ್ನುವ ಅಂಶ ಕಾಂಗ್ರೆಸ್ ಗೂ ಮನವರಿಕೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ವಿರೋಧಿ ಫ್ಯಾಕ್ಟರ್ ಅನ್ನು ಹತ್ತಿಕ್ಕಲು ಕಾಂಗ್ರೆಸ್ ಗೆ ಒಂದು ಅಸ್ತ್ರ ತಕ್ಷಣಕ್ಕೆ ಬೇಕಿತ್ತು. ಆಗ ತಾನಾಗೇ ಕೈಗೆ ಸಿಕ್ಕಿದ್ದು ಸಿದ್ದರಾಮಯ್ಯ. ಅದೂ ವಿರೋಧಿ ಪಾಳೆಯದ ನೆಲೆಯಿಂದಲೇ. ಅವರ ಹೆಗಲ ಮೇಲೆ ಅಹಿಂದ ಅಸ್ತ್ರವನ್ನಿಟ್ಟು ಕಾಂಗ್ರೆಸ್ ತನ್ನ ಕೆಲಸವನ್ನು ಪೂರೈಸಿಕೊಂಡಿತು. ಜನಾರ್ಧನ ರೆಡ್ಡಿ ಎನ್ನುವ ದೊಡ್ಡ ವಿಕೇಟ್ ಹಾಕುವ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿಗೆ ದೊಡ್ಡ ಶಾಕ್ ನೀಡಿತ್ತು. ಇಂಥ ನಿರ್ಣಾಯಕ ಹೋರಾಟದ ಸಂದರ್ಭದಲ್ಲಿ ಪ್ರತಿಪಕ್ಷದ ಹೊಣೆಯನ್ನು ಸಿದ್ದರಾಮಯ್ಯಗೆ ನೀಡುವ ಮೂಲಕ ಬಿಜೆಪಿ ಮತ್ತು ಜೆಡಿಎಸ್ ಅನ್ನು ಏಕಕಾಲಕ್ಕೆ ಹಣಿಯುವ ತಂತ್ರವನ್ನು ಕಾಂಗ್ರೆಸ್ ಯಶಸ್ವಿಯಾಗೇ ನಿರ್ವಹಿಸಿತು.

ದೊಡ್ಡ ಕನಸು: ನಿರ್ಣಾಯಕ ಚುನಾವಣೆ
2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತೆ ಗೆದ್ದರು. ವರುಣಾ ಕ್ಷೇತ್ರದ ಜನತೆಗೆ ಸಿಎಂ ಅಭ್ಯರ್ಥಿಯೊಬ್ಬರನ್ನು ಆಯ್ಕೆ ಮಾಡುತ್ತಿರುವ ವಿಷಯ ಪಕ್ಕಾ ಆಗಿತ್ತೇನೋ. ಬಾರಿ ಮತಗಳಿಂದ ಸಿದ್ದರಾಮಯ್ಯ ಅವರನ್ನು ಅಲ್ಲಿನ ಜನ ಗೆಲ್ಲಿಸಿದರು.
ಸಿದ್ದು ನಾಯಕತ್ವ ಬೆಳೆಯುವುದಕ್ಕೆ ಪೂರಕವಾದ ಅಂಶಗಳು:
ಸಿದ್ದರಾಮಯ್ಯ ಅವರ ಮೂಲಕ ದೇವೇಗೌಡರನ್ನು ನಿಯಂತ್ರಿಸುವ ಕಾಂಗ್ರೆಸ್ ತಂತ್ರ ಆರಂಭದಿಂದಲೇ ಮಿಶ್ರಫಲ ಕೊಡುತ್ತಾ ಸಾಗಿತ್ತು. ಆದರೆ ಜೆಡಿಎಸ್ ಸ್ವಂತ ಬಲದಿಂದ ಸರ್ಕಾರ ರಚಿಸುವ ಸಂಕಲ್ಪದೊಂದಿಗೆ ಎದುರಿಸಿದ 2004 ಮತ್ತು 2008ರ ಚುನಾವಣೆಗಳು ಪಕ್ಷವನ್ನು ನಿರಾಶೆಗೊಳಿಸಿದವು. ಆದರೆ 2008ರಲ್ಲಿ ಗಣಿ ಧಣಿಗಳ ವಿರುದ್ಧ ನಡೆಸಿದ ಸಮರದಲ್ಲಿ ಅಹಿಂದದ ನಡಿಗೆ ಕೆಲಸ ಮಾಡಿತು. ಅದು ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಬಲಗೊಳಿಸಿತು. ಹಿಂದುಳಿದ ವರ್ಗಗಳ ಪ್ರಭಾವದ ಅಹಿಂದ ಸಿದ್ದು ಗೆ ದೊಡ್ಡ ಸಾಥ್ ಕೊಟ್ಟಿತು. ಅವರು ರಿಯಲ್ ಹೀರೋ ಆಗಿ ಬೆಳೆದು ನಿಂತರು. ಗೌಡರನ್ನು ಮಣಿಸುವ ಬಹುತೇಕ ತಂತ್ರಗಳನ್ನು ಸಿದ್ದು ಮೂಲಕ ಸಾಧಿಸಿದ್ದು ಕಾಂಗ್ರೆಸ್ ನ ಬಹುಮುಖ್ಯ ರಣತಂತ್ರಗಳಲ್ಲೊಂದು.
ಸಿದ್ದು ನಾಯಕತ್ವ ಬೆಳೆಸುವುದಕ್ಕೆಂದೇ ಎನ್ನುವಂತೆ ರಾಜ್ಯ ಅಖಾಡಾದಿಂದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಕೇಂದ್ರಕ್ಕೆ ಕರೆಸಿಕೊಂಡಿತು. ಕ್ಯಾಬಿನೆಟ್ ಹುದ್ದೆಯನ್ನೂ ನೀಡಿ ಕಟ್ಟಿಹಾಕಿತು. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಮಾನ್ಯತೆ ತಂದು ಆ ಭಾಗದಲ್ಲಿ ಭರ್ಜರಿ ಗೆಲುವು ತಂದುಕೊಟ್ಟವರು ಖರ್ಗೆ. ಎದುರಿಸಿದ ಎಲ್ಲ ಚುನಾವಣೆಗಳನ್ನು ಬಹುತೇಕ ಗೆದ್ದ ಖರ್ಗೆ ಯಾವತ್ತೂ ಪಕ್ಷಾಂತರ ಮಾಡಿದವರಲ್ಲ. ಕಟ್ಟಾ ಕಾಂಗ್ರೆಸ್ಸಿಗರಾಗಿ ಪಕ್ಷದಲ್ಲೇ ಉಳಿದವರು. ಮಂತ್ರಿಯಾಗಿ ಗೃಹ ಖಾತೆ ಸೇರಿ ಹಲವು ಪ್ರಮುಖ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು. ವೈಯಕ್ತಿಕ ವರ್ಚಸ್ಸು ಲೆಕ್ಕಿಸದೇ 40 ವರ್ಷಗಳ ಕಾಲ ಸತತ ಕಾಂಗ್ರೆಸ್ ಯಶಸ್ವಿಗೆ ಶ್ರಮಿಸಿದವರು. ಆದರೆ ಇದೆಲ್ಲ ಖರ್ಗೆ ಸಿಎಂ ಹಾದಿಗೆ ಸಾಕಾಗಲಿಲ್ಲ. ಸಿದ್ದು ಸ್ಟಾರ್ ಗಿರಿ ಎಲ್ಲವನ್ನೂ ಮಂಕಾಗಿಸಿತು.
ಸಿದ್ದು ಅದೃಷ್ಟವೋ ಏನೋ ಈ ಸಲ ಅಲ್ಪಸಂಖ್ಯಾತ ವರ್ಗದ ಯಾವ ಪ್ರಬಾವಿ ನಾಯಕರೂ ಮಿಂಚಲಿಲ್ಲ. ಮುಖ್ಯಮಂತ್ರಿ ಹುದ್ದೆಗೆ ಹೇಳಿ ಮಾಡಿಸಿದಂತಿದ್ದ ಜಾಫರ್ ಷರೀಫ್ ಎನ್ನುವ ಹಳೆಯ ಹುಲಿ ತನ್ನ ಸಂಬಂಧಿಗಳ ಎರಡು ಸೀಟ್ ತರಲಾಗಲಿಲ್ಲ. ಅಥವಾ ಅವೆರಡು ಸೀಟುಗಳು ಬರದಂತೆ ಕೆಲ ಶಕ್ತಿಗಳು ನೋಡಿಕೊಂಡವೋ? ಕೊರಟಗೆರೆಯಲ್ಲಿ ಸಿಎಂ ಆಕಾಂಕ್ಷಿ ಅಭ್ಯರ್ಥಿ ಸೋಲು ಕಾಣಬೇಕಾಯಿತೆಂದರೆ ಏನರ್ಥವೋ? ಇದು ರಾಜಕೀಯ. ಕೋಟೆ ಕುಸಿದರೆ ಒಳಗಿನಿಂದಲೇ ಕುಸಿಯಬೇಕಲ್ಲವೇ? ಇನ್ನು ಆಸ್ಕರ್ ಫರ್ನಾಂಡಿಸ್ ಕೇಂದ್ರದಲ್ಲಿ ಪ್ರಭಾವವಿದ್ದರೂ ಕಾಂಗ್ರೆಸ್ ಅವರತ್ತ ಮನಸು ಮಾಡಲಿಲ್ಲ. ಖರ್ಗೆ ಬಿಟ್ಟರೆ ಸಿದ್ದುಗೆ ಬೇರೆ ಪ್ರತಿಸ್ಪರ್ಧಿಗಳೇ ಇರಲಿಲ್ಲ.

Thursday, 9 May 2013

ಕಾಂಕ್ರೀಟ್ ಹಕ್ಕಿಯ ಮೊಟ್ಟೆಗಳು (ಕಥೆ)


ದಿನದ ಕೆಲಸ ಮುಗಿಸಿ ಜಗದ ಚಿಂತೆ ಮರೆತು ಆ ರಾತ್ರಿ ಉಂಡು ಮಲಗುವುದರಲ್ಲಿದ್ದ ಬದುಕೂರಿನ ಜನ ತಳವಾರನ ಡಣ್ ಡಣ್ ಡಂಗುರದಿಂದ ಎಚ್ಚರಗೊಂಡು ಕಿವಿ ನೆಟ್ಟಗಾಗಿಸಿದರು. ಎಲೆಡಕೆ ರೊಜ್ಜು ಎಲ್ಲಿ ಉಗುಳಬೇಕು ಅನ್ನೋ ತರಾತುರಿಯಲ್ಲಿದ್ದ ಹಿರಿಕರು, ಉಂಡ ಪಾತ್ರೆ ಮುಂಜಾನೆ ತೊಳೆಯಲೋ ಈಗ ತೊಳೆಯಲೋ ಎಂದು ಬೇಸರಿಸುತ್ತಿದ್ದ ಹೆಂಗಸರು, ಹಾಸಿಗೆಯಲಿ ಕುಳಿತು ಹೆಂಡತಿಯ ಬರುವಿಕೆಗಾಗಿ ಹಸಿವಿನಿಂದ ಕಾಯುತ್ತಿದ್ದ ಗಂಡಂದಿರು, ಅದಾಗಲೆ ಹಾಸಿಗೆಯಲ್ಲಿ ಬಿದ್ದುಕೊಂಡು ಕನಸಿನಲ್ಲಿ ತನ್ನನಿಯರ ಬರಮಾಡಿಕೊಳ್ಳಲು ಹಾತೊರೆಯುತ್ತಿದ್ದ ಹುಡುಗಿಯರು, ಓದಲಾರದೆ ಬೇಸರಿಸಿಕೊಳ್ಳುತ್ತಿದ್ದ ಸಾಲಿ ಹೈಕಳು ಇತ್ಯಾದಿಯವರಿಗೆಲ್ಲ ತಮ್ಮ ಕೆಲಸಕ್ಕೆ ಎಳ್ಳುನೀರು ಬೀಡಲು ಈ ಒಂದು ಡಂಗುರ ನೆಪವಾಯಿತಷ್ಟೆ. ಆ ದಿವ್ಯ ಮೌನದಲ್ಲಿ `ಕೇಳ್ರೆಪೋ  ಕೇಳ್ರಿ, ನಾಳೆ ಎಮ್ಮೆಲ್ಲೆ ಬರತಾರಂತ. ಪ್ಯಾಕ್ಟರಿ ಕಟ್ಟಾಕ ಹೊಲ ಕೊಡತಿನಿ ಅನ್ನೋರು ಗುಡಿ ಮುಂದ ಮೀಟಿಂಗ್ ಸೇರಬೇಕಂತಪೆÇೀ' ಎಂಬ ವಾಕ್ಯಗಳು ಕೆಲವರಲ್ಲಿ ವಿಷಾದವನ್ನು, ಹಲವರಲ್ಲಿ ಆಸೆಯ ಮಿಂಚೊಂದನ್ನು ಹುಟ್ಟಿಸಿ ಆ ಕಗ್ಗತ್ತಲ ರಾತ್ರಿಯೆಲ್ಲ ಹೆಮ್ಮರದಂತೆ ಬೆಳೆಸತೊಡಗಿತು.
ಇನ್ನೂರಾ ಹನ್ನೊಂದು ಮನೆಗಳಿರುವ ಬದುಕೂರಿನ ಜನ ಹೆಚ್ಚಾಗಿ ಒಕ್ಕಲುತನ ಅವಲಂಭಿಸಿದವರು. ಊರು ಹಿಂದೆ ದನಕರುಗಳಿಗೆ ಆಶ್ರಯವಾಗಿ ಮುಳ್ಳುಪೆÇದೆಗಳ ಗುಡ್ಡವಿದ್ದರೆ, ಊರ ಮುಂದೆ ಜನರಿಗೆ ಕೆಮ್ಮಣ್ಣಿನ ಮಸಾರಿ ಕಣ್ಣೋಟದುದ್ದಕ್ಕೂ ಮಲಗಿಕೊಂಡಿದೆ. ತನ್ನ ಬೆನ್ನ ಮೇಲೆ ನೂರಾರು ತರಹದ ಕಾಳುಕಡಿ ಬೆಳೆಸಿಕೊಂಡು ಸಹಸ್ರ ವರ್ಷಗಳಿಂದ ಬದುಕೂರಿನ ಜನರಿಗೆ ಊಟ ಹಾಕುತ ಬಂದಿದ್ದ ಈ ವiಸಾರಿಯನ್ನೆ ಎಮ್ಮೆಲ್ಲೆ ವಿಕಾಸಪ್ಪನೋರು ಪ್ಯಾಕ್ಟರಿ ಕಟ್ಟಿಸೋರಿಗೆ ಮಾರಿಸಿ ರೈತರಿಗೆ ಟ್ರಂಕ್ ತುಂಬಾ ರೊಕ್ಕ ಕೊಡಿಸುವುದಾಗಿ ಹತ್ತಾರು ವರ್ಷಗಳ ಹಿಂದೆಯೇ ಹೇಳಕೋತ ಬಂದಿದ್ರು. ಯಾವತ್ತೋ ಬರಲಿರುವ ಗುಮ್ಮನಿಗಾಗಿ ಯಾಕೆ ತಲೆ ಕೆಡಿಸಿಕೊಳ್ಳಬೇಕೆಂದು ತಮ್ಮ ನಿತ್ಯ ಜಂಜಾಟದಲ್ಲಿಯೇ ರೈತ ಜನ ಮೈ ಮರೆತಿದ್ದರು. ಆ ಗುಮ್ಮ ನಾಳೆ ಒಕ್ಕರಿಸುವುದೆಂಬ ಡಂಗುರ ಕೇಳಿ ಕೆಲವರು ಕೈ ತುಂಬಾ ದುಡ್ಡು ಎನಿಸುವ ಕಾತರದಲ್ಲಿ ಕನಸು ಕಾಣತೊಡಗಿದರೆ, ಹಲವರು ಬದುಕೆ ಆಗಿರುವ ಹೊಲ ಕಳೆದುಕೊಳ್ಳುವ ದುಗುಡದಲ್ಲಿ ಹಾಸಿಗೆಯಲ್ಲಿ ಬಿದ್ದು ಹೊರಳಾಡುತ್ತಾ ನಿದ್ದೆ ಇಲ್ಲದೆ ಅವತ್ತಿನ ರಾತ್ರಿ ಕಳೆದರು.
 *
 ತಮ್ಮ ಮನಿತನವೂ ಅಡಿವ್ಯಾಗ ಅಂಗೈ ಅಗಲ ಹೊಲ ಇರುವಂಥದೂ ಆಗಬೇಕು ಅಂತ ಕಲ್ಯಾನ ತಾತ ಮುತ್ತಾತರೆಲ್ಲ ಕನಸು ಕಾಣಕೋತನ ಮಣ್ಣಾಗ ಹೋಗಿದ್ರು. ಆದ್ರ ಕಲ್ಯಾನ ಅಪ್ಪ ಯಮುನ್ಯಾ ಮಾತ್ರ ಹ್ಯಾಂಗಾರೂ ಮಾಡಿ ಊರ ಭೂಮ್ಯಾಗ ಒಂದಿಟ ಜಮೀನು ಗಳಿಸಬೇಕು ಅಂತ ದನ್ಯಾರ ಮನ್ಯಾಗ ಮನಿ ಮಗನ್ಹಂಗ ಹಗಲು ರಾತ್ರಿ ದುಡಿತಿದ್ದ. `ದಣ್ಯಾರ್ರ, ತಾಮ್ರ ದುಡ್ಡು ತಂದಿ ಮಕ್ಕಳ ಸಂಬಂಧ ಕೆಡಿಸಿತಂತ, ನನಗ ನೀವು ರೊಕ್ಕ ರುಪೈ ಕೊಡಬ್ಯಾಡ್ರಿ. ನನ್ನ ಹೆಸರಿಲೆ ನಿಮಗ ಏಟು ತಿಳಿತೈತಿ ಅಟ ಜಮೀನು ಹಚ್ರಿ' ಅಂತ ಯಾವಾಗಲೂ ದಣ್ಯಾರಿಗೆ ಹೇಳಕೋತನ ಇದ್ದ. ಉದಾರಿಗಳಾಗಿದ್ದ ದಣ್ಯಾರು ಸೈತ ಹೊಲ ಹಚ್ಚತೇನಂತ ಹೆಳಕೋತನ ಬಂದಿದ್ದರು.
ಆದ್ರ ಒಂದಿನ ಧಣ್ಯಾರು ಹಾವು ಮುಟ್ಟಿದ ನೆಪ ಮಾಡಕೊಂಡು ಹೊಲದಿಂದ ಮನೆಗೆ ಸತ್ತ ಹೆಣ ಆಗಿಯೇ ಬಂದರು. ಮುಂದನೂ ಅದ ಮನ್ಯಾನ ಯಮುನ್ಯಾ ಹತ್ತಾರು ವರ್ಷ ದುಡಿದ ಖರೆ. ಆದರ ಗೌಡ್ರ ಮಗ ಅಂದ್ರ ಈಗಿನ ವಿಜ್ಯಪ್ಪನೋರು ತಮ್ಮ ರಾಜಕಾರಣದ ಗಮ್ಮತ್ತಿನ್ಯಾಗ ಹೊಲ ಹಚ್ಚೋ ಸುದ್ದಿನ ತೆಗಿಲಿಲ್ಲ. ಆದ್ರ ವರ್ಷಕ್ಕ ಎರಡ ಜೊತೆ ವಲ್ಲಿ, ಮಂಡಂಗಿ, ರಬ್ಬಲ್ ಕಾಲ್ಮರಿ, ಅರಕಳಿ ಚೀಲ ಜ್ವಾಳ, ಖರ್ಚಿಗೆ ನೂರಿಪ್ಪತ್ತು ರೂಪೈ ಕೊಡುದು ತಪ್ಪಿಸಿರಲಿಲ್ಲ.
ಹ್ಯಾಂಗಾರು ಮಾಡಿ ಹೊಲ ತೊಗೋಬೇಕೆಂದ್ದಿದ್ದ ಯಮುನ್ಯಾ ಈ ನೂರಿಪ್ಪತ್ತು ರೂ. ಕೂಡಿಡಾಕ ಒಂದು ಪಿಲಾನು ಮಾಡಿದ್ದ. ಸಂತಿಯಿಂದ ತಂದ ಕೈಳತಿ ಗಡಗಿಯೊಳಗ ಈ ನೂರಿಪ್ಪತ್ತು ರೂ.ಇಟ್ಟು, ಮ್ಯಾಲ ಪಾಡತಂಗ ಅರಬಿ ಕಟ್ಟಿ ಮನಿ ಹಿಂದಿನ ತಿಪ್ಪಿಯೊಳಗ ಅಮಾಸಿ ರಾತ್ರಿಯೊಳಗ ಹುಗಿದಿಡುವುದೆ ಆ ಪಿಲಾನು ಆಗಿತ್ತು. ಈ ಗಡಿಗಿ ಪ್ರತಿ ವರ್ಷ ಉಗಾದಿ ಹಬ್ಬದಾಗ ಮಾತ್ರ ತಿಪ್ಪಿಯಿಂದ ಮ್ಯಾಲ ಬರತಿತ್ತು. ತನ್ನ ಮನಿ ಜಗಲ್ಯಾಗಿನ ಲಕ್ಷ್ಮವ್ವಗ ಮಾಡುವಷ್ಟ ದೇಖರೆಕಿಯನ್ನು ಯಮುನ್ಯಾ ಆ ಗಡಿಗಿಗೂ ಮಾಡತಿದ್ದ. ಅದರ ಹೊರಮೈಗೆ ಸುಣ್ಣ ಬಣ್ಣ ಹಚ್ಚಿ ಅಕ್ಕಡಿ ಕಾಳಿನ ಮಂಡಲ ಮಾಡಿ ಅದ್ರ ಮಾಲ್ಯ ಇಟ್ಟು ಪೂಜಿ ಮಾಡುತ್ತಿದ್ದ. ಆ ವರ್ಷ ಗೌಡರು ಕೊಟ್ಟ ನೂರಿಪ್ಪತ್ತು ರೂಪೈ ಅದಕ್ಕೆ ಸೇರಿಸಿ ರಾತ್ರಿ ಒಯ್ದು ಮತ್ತೆ ತಿಪ್ಯಾಗ ಹುಗದು ಬರತಿದ್ದ. ಹಿಂಗ ಪ್ರತಿ ವರ್ಷನೂ ಕೂಡಿಸಿಟ್ಟು ಸಾವಿರಾರು ರೂಪೈ ಆಗಿದ್ವೋ ಎನೋ. ಆದ್ರ ಹೊಲ ತುಗೊಳ್ಳಾಕ ಎಷ್ಟ ರೊಕ್ಕ ಬೇಕಾಗತಾವು, ಅವನ್ನು ತುಗೊಂಡು ಹೋಗಿ ಹೊಲದ ವ್ಯಾಪಾರ ಹ್ಯಾಂಗ ಮಾಡಬೇಕು ಅಂತ ಅನ್ನೊ ಪರಿಜ್ಞಾನವೇ ಯಮುನ್ಯಾಗ ಇರಲಿಲ್ಲ.
ಯಮುನ್ಯಾನ ಹೆಂಡತಿ ತುಳಸವ್ವ ಸೈತ ಸುಮ್ಮನಿರೋ ಜಾತಿಯಾಕಿ ಅಲ್ಲ. ಸುಮ್ಮನಿದ್ರ ಆಕಿಗೆ ಉಂಡು ಕೂಳು ಕರಗತಿರಲಿಲ್ಲೋ ಎನೋ. ದಿನಾಲು ವಿಜ್ಜಪ್ಪ ದನಿ ತೋಟಕ್ಕ ಕೆಲಸಕ್ಕೆ ಹೊಕ್ಕಿದ್ಲು. ತಾನಷ್ಟೆ ಹೋಗಲಾರದೆ ತನ್ನಿಬ್ಬರು ಮಕ್ಕಳನ್ನು ಕರಕೊಂಡು ಹೊಕ್ಕಿದ್ಲು. ಹಿರೆ ಮಗಳು ಅವ್ವನ ಕೂಡ ಕಸ ತೆಗದರ ಕಿರಿಮಗ ಕಲ್ಯಾ ವಿಜ್ಜಪ್ಪನೊರ ತೊಟದ ಬದುವಿನ್ಯಾಗ ಎರಡು ಕುರಿ ಮರಿ ಮೇಯಿಸತಿದ್ದ. ಊರಾಗ ಯಾವ ಹಬ್ಬ ಹುಣ್ಣಿವಿ ಇದ್ರೂ ಇವರ ಈ ಕಾಯಕ ತಪ್ಪತಿರಲಿಲ್ಲ.
ಬರಬರುತ್ತಾ ಕಲ್ಯಾ ದೊಡ್ಡಾಂವ ಆದಾಂಗ ಕುರಿ ಮರಿಗಳು ಕುರಿಯಾಗಿ ಮರಿ ಹಾಕಿ ಮೊಮ್ಮಕ್ಕಳನ್ನು ಕಂಡಿದ್ದವು. ಕಲ್ಯಾ ಈಗ ದೊಡ್ಡ ಕುರಿ ಹಿಂಡಿನ ಒಡಿತನ ಗಳಿಸಿದ್ದ. ಯಮುನ್ಯಾ ಈಗ ತಿಪ್ಪಿಗುಂಡ್ಯಾಗಿನ ಗಡಿಗ್ಯಾಗ ನೋಟುಗಳ ಕಟ್ಟನ್ನೆ ಮುದ್ದೆ ಮುದ್ದೆಯಾಗಿ ತುರುಕುತ್ತಿದ್ದ.
ಮುಂದೊಂದು ಸುದಿನ ಪೂಜಿ ಮಾಡಿ ಗಡಿಗೆ ಒಡೆದು ಅರಬಿಯೊಳಗಿನ ಗಂಟು ತೆಗೆದುನೋಡಿದಾಗ ಅಲ್ಲಿನ ನೊಟುಗಳ ಮಿಂಚಿಗೆ ಮುಗ್ಗಿನ ವಾಸನಿಗೆ ಅಂವ ಮುರ್ಚೆ ಹೋಗುದಷ್ಟ ಬಾಕಿ ಇತ್ತು. ಅಷ್ಟೊತ್ತಿಗೆ ಮಗ ಲೋಕಾನುಭವ ಪಡೆದುಕೊಂಡು ಹೊಲ ಕೊಳ್ಳುವ ಅಪ್ಪನ ಹೆಬ್ಬಯಕೆಗೆ ಬೆನ್ನೆಲುಬಾಗಿ ನಿಂತಿದ್ದ. ಅವನಿಗೆ ದುಡಿಮೆಯಲ್ಲಿ ಸರಿಸಾಟಿಯಗುವ ಇದ್ದೂರಿನ ರತ್ನಳನ್ನು ಲಗ್ನ ಮಾಡಲಾಗಿತ್ತು. ರತ್ನಾ ಬಂದ ಮೇಲೆ ಅವರ ದುಡಿಯೋ ರಟ್ಟೆಗೆ ಮತ್ತಷ್ಟು ಸಗ್ತಿ ಬಂದಾಂಗಾಗಿತ್ತು.
 ತಂದಿ ಮಗ ಇಬ್ಬರು ಒಲ್ಲಿ ಚುಂಗಿನ್ಯಾಗ ರೊಕ್ಕ ಕಟಗೊಂಡು ಹಗಲು ರಾತ್ರಿ ಹೊಲಕ್ಕಾಗಿ ಅಡ್ಡಾಡತೊಡಗಿದ್ದರು. ಅವರ ಓಡಾಟಕ್ಕೆ ಮನಿದ ಶಿವ ಊರ ಬಗಲಲ್ಲೆ ಇದ್ದ ಬಳ್ಳಾರಿ ಜಾಲಿ ಬೆಳೆದು ಬೀಳು ಬಿದ್ದಿದ್ದ ಒಂದೆರಡಕೆರೆ ಹೊಲ ಸಿಗುವಂತೆ ವರ ಕರುಣಿಸಿ ಕತಾರ್ಥನಾದ. ತಂದಿ-ಮಗ ಹಗಲು ರಾತ್ರಿ ಹೊಲದೊಳಗ ಕಾಲೂರಿ ಸ್ವಚ್ಚಮಾಡಿ ಹಂಗೂ ಹಿಂಗೂ ಮಾಡಿ ಹೊಲ ಬಿತ್ತುವಂಗ ಮಾಡೆಬಿಟ್ಟರು.
 ಯಮನ್ಯಾ ಮತ್ತು ತುಳಸವ್ವ ಸಾಯುವಾಗ ಸೈತ ತಮ್ಮ ಮೊಮ್ಮಕ್ಕಳಾದರೂ ಜಮೀನು ಅನುಭವಿಸುವಂಗ ಆತಲ್ಲಾ ಅಂತ ಖುಷಿಯಿಂದ ಕಣ್ಮುಚಿದ್ರು. ಹೊಲದ ಮ್ಯಾಲ ಅವರಿಟ್ಟಿದ್ದ ಜೀವದ ಕುರುಹಿಗಾಗಿ ಅವರನ್ನ ಹೊಲದ ಬನ್ನಿ ಗಿಡದ ಕೆಳಗ ಮಣ್ಣು ಮಾಡಿ ಮ್ಯಾಲೊಂದು ಚಂದದ ಸಮಾಧಿ ಕಟ್ಟಿದ ಕಲ್ಯಾ, ಪ್ರತಿ ಅಮಾಸಿ ದಿನವೂ ಆ ಸಮಾಧಿಗಳಿಗೆ ಪೂಜೆ ಮಾಡತಿದ್ದ. ಬೆಳದಿಂಗಳ ರಾತ್ರಿಯಲ್ಲಿ ಹೊಲದ ಆಗು ಹೋಗುಗಳನ್ನು ಆ ಗೋರಿಗಳ ಮುಂದೆ ಮನವರಿಕೆ ಮಾಡಿಕೊಳ್ಳುತ್ತಿದ್ದ. ಇತ್ತಿತ್ತಲಾಗಂತೂ ಹೊಲದೊಳಗ ಗುಡಿಸಲಾ ಹಾಕ್ಕೊಂಡು ಪಕ್ಕದ ತೋಟದಿಂದ ನೀರು ಬಾಡಿಗೆಗೆ ತುಗೊಂಡು ತರಕಾರಿ ಬೆಳೆಯುತ್ತ ಕಲ್ಯಾ ಶ್ರೀಮಂತನಾಗತೊಡಗಿದ್ದ. ಹೀಗೆ ತನ್ನ ಬದುಕೇ ಆಗಿದ್ದ ಹೊಲ ಮಾರೋದಂದ್ರ ಹ್ಯಾಂಗ ಆದಿತು ಅಂತ ಅಂವ ಚಿಂತೆಗೆ ಬಿದ್ದಿದ್ದ. ನನ್ನ ಜೀವ ಹೋದರೂ ಸೈತ ನಾನು ಹೊಲ ಮಾರೂದಿಲ್ಲ ಅಂತ ಶಪತ ಮಾಡಿಕೊಂಡ ನಂತರವೇ ಅವನಿಗೆ ಅವತ್ತು  ನಿದ್ರಾದೇವಿ ಅವನ ಕಣ್ಣು ತುಂಬಿದ್ದಳು.
*
ಅಂಬಾ ಅನ್ನೋ ಎತ್ತಿನ ದ್ವನಿ ಕೇಳಿ ಕಲ್ಲಜ್ಜಗ ಎಚ್ಚರಾತು. ಎದ್ದು ಕುಂತು ಬಾಯಿ ಮುಕ್ಕಳಿಸಿ ಎಲಡಿಕೆ ಹಾಕ್ಕೊಂಡ. ಇವನನ್ನು ನೋಡಿ ಎತ್ತುಗಳು ಒಂದೆ ಸವನ ಕಣ್ಣಿ ಹರಕೊಂಡಂಗ ಮಾಡಾಕ ಹತ್ತಿದವು. `ತಡಕೋರೋ ಭೀಮ್ಯಾ ಯಾಕ ಒದರತಿ ಬರತಿನಿ' ಅಂತ ದೋತರ ಲಂಗಟಾ ಸರಿ ಮಾಡಕೋತ ಮ್ಯಾಲೆದ್ದ. ಎರಡು ಸಿವುಡು ಬಿಳಿ ಜ್ವಾಳ ಮೇವು ಎತ್ತುಗೊಳ ಮುಂದ ಹಾಕಿ ಅಕ್ಕರೆಯಿಂದ ಅವುಗಳ ದುಬ್ಬ ಸವರಿ ಬಾಲ ನೀಟಿದ. ಎತ್ತುಗಳು ಕೊರಳ ಅಳ್ಳಾಡಿಸಿಕೋತ ಮೇವು ತಿನ್ನೋದನ್ನು ಪ್ರೀತಿಯಿಂದ ನೋಡಿ ದಂದ ಮನಿಯಿಂದ ಹೊರ ಬಂದ. ಸಣ್ಣ ಮಗ ರಮೇಶ ಅಸ್ತವ್ಯಸ್ತವಾಗಿ ಮನಿ ಮುಂದಲ ಕಟ್ಟಿಮ್ಯಾಲ ಇನ್ನು ಮಲಕೊಂಡಿದ್ದ. `ಏನ್ ಮಕ್ಕಳೋ ಏನೋ, ಸೂರ ಉದಯ ಆದ್ರು ಇನ್ನು ಏಳಾಕವಲ್ರು. ನಮ್ಮ ಕಾಲದಾಗ ಹಿಂಗಾಗಿದ್ರ ನಮ್ಮಪ್ಪ ಚರ್ಮ ಸುಲಿತಿದ್ದ' ಅನಕೋತ ಅವನ್ನ `ರಾಮಣ್ಣ ಎಳಪಾ' ಅಂತ ಎಬ್ಬಿಸಲು ನೋಡಿದ.
ನಿದ್ದಿಗಣ್ಣಾಗಿದ್ದ ಮಗ 'ಹೂಂ ಎಳಿತಿನಿ ತಡಿ’ ಅನಕೋತ ಮತ್ತೆ ದಬ್ಬಾದ. ಎನು ಮಾಡಿದರೂ ಅಂವ ಇಷ್ಟ ಜಲ್ದಿ ಏಳೂದಿಲ್ಲ ಅಂತ ಗೊತ್ತಾಗಿ ಚರಗಿ ತುಗುಂಡು ಹೊರಕಡಿಗೆ ಹೊರಟ. ನನ್ನ ಮಕ್ಕಳು ನನ್ನಂಗ ಆಗಬಾರದು ಅಂತ ಕಲ್ಲಜ್ಜ ಇಬ್ಬರನ್ನು ಸಾಲಿಗೆ ಹಾಕಿದ್ದ. ಅರ್ದಂಬರ್ಧ ಸಾಲಿ ಕಲಿತ ಇಬ್ಬರು ಮಕ್ಕಳು ಖರೆವಂದ್ರು ಕಲ್ಲಜ್ಜ ಬಯಸಿದಂಗ ಅವನಂಗ ಆಗಲೆ ಇಲ್ಲ. ಆದ್ದರಿಂದಲೇ ಮಕ್ಕಳು ಎದೆಯುದ್ದ ಬೆಳೆದಿದ್ದರೂ ಮುದುಕನಿಗೆ ಇನ್ನು ಹೊಲದಲ್ಲಿ ಏಗುವುದು ತಪ್ಪಿರಲಿಲ್ಲ.
ಹಿರೆ ಮಗ ಬಿಎ ಮಟ ಓದಿ ತಾನಿಷ್ಟ ಪಟ್ಟವಳೊಡನೆ ಲಗ್ನ ಮಾಡಕೊಂಡು ಬೆಂಗಳೂರಿನೊಳಗ ನೌಕರಿ ಮಾಡತಿದ್ದ. ಅಂವ ವರ್ಷಕ್ಕ ಎರಡು ಸಲ ಊರಕಡೆ ಮುಖ ಮಾಡಿದರೆ ಅದೆ ಪುಣ್ಯ. ಸಣ್ಣಂವಗ ಸರಸೋತಿ ಒಲಿಲಿಲ್ಲಂತ ಕಾಣತದ. ಹತ್ತನೆತ್ತೆ ಎರಡು ಸಲ ಡುಮ್ಕಿ ಹೊಡದ ಮ್ಯಾಲ ಬಾಗಲಕೋಟ್ಯಾಗ ಇದ್ದುಕೊಂಡು ಶ್ರೀಮಂತ ವ್ಯಾಪಾರಿಯೊಬ್ಬನ ಕಾರು ಒಡಿಸುತ್ತಿದ್ದ. ತನ್ನ ಮನಸ್ಸ ತಿಳಿದಾಗೊಮ್ಮೆ ಊರಕಡೆ ಬರತಿದ್ದಂವ ನಿನ್ನೆ ರಾತ್ರಿ ಬಂದಿದ್ದ. ಇಬ್ಬರು ಮಕ್ಕಳು ಹೊಲದ ಕೆಲಸ ಮಾಡುವುದು ಅವಮಾನವೆಂದುಕೊಂಡೋ ಅಥವಾ ಪಟ್ಟಣದ ಮೋಹಕ್ಕೆ ಬಿದ್ದೋ ಒಟ್ಟಿನೊಳಗ ಹೊಲದಕಡಿಕ ಸುಳಿತಿರಲಿಲ್ಲ.
*
ಹೇಲಮಡ್ಯಾಗ ದಿನಾಲೂ ದೂರ ದೂರ ಕುತಗೆಂಡು ಆರಾಮಸಿರಿ ಹೊರಕಡಿ ಮಾಡುತ್ತಿದ್ದ ಜನ ಇವತ್ಯಾಕೋ ಗುಂಪು ಗುಂಪಾಗಿ ಕುಳಿತುಕೊಂಡು ಗಹನವಾದ ಚರ್ಚೆಯಲ್ಲಿ ತೊಡಗಿಕೊಂಡೆ ತಮ್ಮ ನಿತ್ಯದ ಪ್ರಾರ್ಥವಿಧಿಗಾಗಿ ಪರದಾಡುತ್ತಿದ್ದರು. ಹಲವರು ಬಾರದಕ್ಕೆ ತಿಣುಕುತ್ತಾ, ಕೆಲವರು ತಮ್ಮ ಅಂಡಿಗೆ ನೀರು ಮುಟ್ಟಿಸುತ್ತಾ, ಇನ್ ಕೆಲವರು ತಮ್ಮ ದೋತರದ ಲಂಗಟ ಕಟ್ಟಿಕೊಳ್ಳುತ್ತಾ ಮಾತಿನಲ್ಲಿ ಮೈ ಮರೆತಿದ್ದರು. ಎಲ್ಲರ ನಾಲಿಗೆಲೂ ಹೊಲದ ಸುದ್ದಿಯೇ ಹೊರಳಾಡುತ್ತಿತ್ತು. ಸ್ವಲ್ಪ ಮಂದಿ ಹೊಲ ಮಾರಿ ಪ್ಯಾಟಿಯೊಳಗ ಸೆಟಲ್ ಆಗೋ ಬಗ್ಗೆ ಹೇಳಿಕೊಳ್ಳುತ್ತಿದ್ದರೆ, ಇನ್ನಷ್ಟ ಮಂದಿ ಹೊಲ ಮಾರಿ ನಾವೆಲ್ಲಿಗೆ ಹೊಗೋನು ಅಂತ ಸಿಟ್ಟಿನಿಂದ ಪೆಚಾಡುತ್ತಿದ್ದರು.
ಕಲ್ಲಪ್ಪಜ್ಜ ಹೇಲುವುದನ್ನು ಮರೆತು ಹತ್ತಿರದ ಗುಂಪಿನ ಕಡೆ ಹೋಗಿ ಕಿವಿಯಾದ. ಅಜ್ಜನನ್ನು ನೋಡಿದ ವಾಲಿಕಾರ ಮಲ್ಲ, ‘ಚಾನ್ಸ್ ಹೊಡಿದೆಲ್ಲೋ ಮಾವಾ, ಯಾಡ ಎಕ್ರೆಗೆ ಯಾಡ ಲಕ್ಷ ರೊಕ್ಕ ಬರತಾವು' ಅಂತ ಚರ್ಚೆಯನ್ನು ಕಲ್ಲಜ್ಜನ ಸುತ್ತಲೂ ಕೇಂದ್ರಿಕರಿಸಿದ.
ಕಲ್ಲಜ್ಜಗ ಮೈಯೆಲ್ಲ ಉರಿದಂಗಾತು, ಆದ್ರೂ ಹುಡುಗ ನಕಲಿ ಮಾಡ್ತಾನ ಅನಕೊಂಡು, `ಯಾವನಲೇ ನೀನು, ನೀನ ಬೇಕಾದ್ರ ನಿನ್ನ ಹೊಲ ಕೊಡು, ನನ್ನ ಹೊಲದ ಸುದ್ದಿಗೆ ಮಾತಾಡಾಕ ನೀನ್ಯಾವ' ಅಂತ ಹುಸಿ ಮುನಿಸಿಕೊಂಡ.
ಸಿಟ್ಟಿಗೆ ಬರಬೇಡೋ ಮಾವಾ, ನಿಂದೇನ್ ಯಾಡ ಎಕರೆ ಐತಿ. ಮುಪ್ಪಿನ ಕಾಲದಾಗ ಅಟ ಹೊಲ ಇಟಗೊಂಡಾದ್ರೂ ಏನು ಮಾಡಾಂವ. ಹ್ಯಾಂಗೂ ಹಿರಿ ಮಗ ಬೆಂಗಳೂರಿನ್ಯಾಗ ನೌಕರಿ ಮಾಡತಾನ. ಹೊಲ ಮಾರಿ ಬಂದಟ ದುಡ್ಡು ತುಗೊಂಡು ನೀನು ಬೆಂಗಳೂರು ಬಸ್ ಹತ್ತೊದು ಚಲೋ' ಎಂದು ಹುಬ್ಬು ಹಾರಿಸಿದ.
`ನೋಡಪಾ, ಅದ ಎರಡೆಕ್ರೆ ಹೊಲ ತುಗೋಳಾಕ ಎಷ್ಟ ಕಷ್ಟ ಪಟ್ಟಿವಿ ಅಂತ ನಮಗ ಮಾತ್ರ ಗೊತ್ತು. ಯಾರ್ರ ಬೇಕಾದವರ ಬರಲಿ ನಾನ್ ಮಾತ್ರ  ಹೊಲ ಕೊಡಂಗಿಲ್ಲ'
`ನೀನು ಕೊಡಲ್ಲ ಅಂದ್ರ ಸರಕಾರದೋರು ಕೇಳಬೇಕಲ್ಲೋ ಮಾವಾ. ನೀನು ಎಷ್ಟ್ ಹಾರಾಡಿದರೂ ಸರಕಾರ ಒಮ್ಮಿ ಮನಸ್ಸು ಮಾಡಿತು ಅಂದ್ರ ಮುಗಿತು.
ಯಾವ ಸರಕಾರ. ನನಗೆನ್ ಸರಕಾರದವರು ಬಂದು ಹೊಲ ಕೊಡಿಸಿಲ್ಲ. ಸ್ವಂತ ರಟ್ಟಿ ಮ್ಯಾಲ ದುಡುದು ಹೊಲ ಗಳಿಸೇನಿ. ಸರಕಾರಕ್ಕೂ ನಮಗೂ ಏನು ಸಂಬಂಧ ಇಲ್ಲ' ಬಂದ ಬಿಟ್ಟ ಹೇಳಾಕ ದೊಡ್ಡ ಮಂತ್ರಿ ಮಗನಂಗ'
ನೀ ಎಷ್ಟ್ ಬೇಕಾದಷ್ಟು ಕಿಸಿದ್ಯಾಡೋ ಮಾವಾ. ನಿನ್ನ ಹೊಲ ಸರಕಾರದೊರು ತುಗೊಂಡ ತುಗೊಂತಾರ, ಏನ್ ಸರ್ತ ಕಟ್ಟಿತಿ ಹೇಳ'
 ಈ ಸಲ ಅಜ್ಜನ ಪಿತ್ಥ ನೆತ್ತಗೇರಿತು. `ನಿಂದೆಟ್ ಐತಿ ಅಟ್ಟ ಮಾಡು ಅಂದ್ರ ಮತ್ತ ನನಗ ಬುದ್ಧಿ ಹೇಳಾಕ ಬರತಿಯಲ್ಲಲೇ ಕಿಸಬಾಯಿ. ತುತ್ತ ಏನ್ ಹಿಂಬರಕಿ ಉಂತಿಯೇನ' ಅಂತ ಜೋರಾಗಿ ಚೀರಕೋತ ಮಲ್ಲನ ಮೈಮೇಲೆ ಹೋಗತೊಡಗಿದ.
ವಾಲಿಕಾರ ಭೀಮನಿಗೆ ಏನು ಮಾಡಬೇಕು ಗೊತ್ತಾಗದೆ ಮಂಗ್ಯಾನ ಮುಖ ಮಾಡಕೊಂಡು ಪೆಪ್ಪೆಪ್ಪೆ ಅನ್ನತೊಡಗಿದ. ಸುತ್ತಲಿನವರು  ಅಜ್ಜನನ್ನು ಸಮಾಧಾನಿಸಿ ಪರಿಸ್ಥಿತಿ ತಹಬದಿಗೆ ಬರುವಂಗ ಮಾಡಿದರು.
*
ಊರ ತುಂಬಾ ಹೊಲz್ದÉೀ ಸುದ್ದಿ. ಕೆಲವರು ಈಗಾಗಲೇ ಹೊಲ ಮಾರಿ ಏನೇನ್ ತುಗೋಬೇಕು ಯಾವ ಊರಿಗೆ ಹೋಗಿ ಸೆಟಲ್ ಆಗಬೇಕು. ಬಂದ ಹಣದಲ್ಲಿ ಯಾರ್ಯಾರಿಗೆ ಎಷ್ಟೇಷ್ಟು ಕೊಡಬೇಕು ಅಂತ ಕನಸು ಕಾಣುತ್ತಿದ್ದರು. ಹೊಲ ವ್ಯಾಪಾರ ಮಾಡಿಸುವುದಕಾಗಿಯೇ ಕೆಲವರು ದಿಡೀರ್ ದಲ್ಲಾಳಿಗಳಾಗಿ ಚಿಗಿತುಕೊಂಡರು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎಕ್ರೆಗೆ ಏನು ರೇಟು, ಒಂದು ಏಕರೆಗೆ ನಾವೆಷ್ಟ್ ಕಮೀಶನ್ ತುಗೋಬೇಕು. ಯಾವತ್ತು ಸರಕಾರದಿಂದ ಹೊಲ ಅಳಿಯಾಕ ಕರಸೋದು ಅಂತ ಕನಸ ಕಾಣ್ಕೋತ ಗಡಿಬಿಡಿಯಿಂದ ಓಡಾಡುತ್ತಿದ್ದರು.
ಇನ್ನು ಹೊಲ ಕೊಡಲಿಕ್ಕೆ ಮನಸ್ಸಿಲ್ಲದವರು ಹೊಲ ಮಾರಾಟ ಆಗದಂಗ ಏನು ಪತ್ರಿತಂತ್ರ ರೂಪಿಸೋದು. ಪೇಪರ್ನವರಿಗೆ ತಿಳಿಸಬೇಕು. ಕಮ್ಯುನಿಸ್ಟ್ ಪಕ್ಷಗಳಿಗೆ, ಪ್ರಗತಿಪರ ಸಂಘಟನೆಗಳಿಗೆ ತಿಳಿಸಿ ದೊಡ್ಡ ಹೋರಾಟ ರೂಪಿಸಬೇಕು. ಏನೆ ಆದ್ರೂ ಹೊಲ ಕೊಡಬಾರದು. ಪರಿಸ್ಥಿತಿ ವಿಕೋಪಕ್ಕ ಹೋದ್ರ ಗಾಂಧಿ ತಾತ ಬಳಸಿದ ಉಪವಾಸ ಸತ್ಯಾಗ್ರಹವನ್ನು ಬಳಸೋನು ಅಂತ ಗಟ್ಟಿಮಟ್ಟಾದರು.
ಎರಡು ಗುಂಪುಗಳ ಮುಖಂಡರು ಪಕ್ಕದ ಜಿಲ್ಲಾ ಕೇಂದ್ರಕ್ಕೆ ಹೋಗಿ ತಮಗೆ ಬೇಕಾದವರನ್ನು ಕಂಡು ತಂತ್ರ ಪ್ರತಿತಂತ್ರವನ್ನು ರೂಪಿಸತೊಡಗಿದರು. ಇಡಿ ಹಳ್ಳಿ ಗೊಂದಲದ ಗೂಡಾಗಿತ್ತು. ರಾಜ್ಯದ ಹಿರಿಕಿರಿಯ ಪತ್ರಕತರೆಲ್ಲ ಹಳ್ಳಿಯಲ್ಲಿ ನೆರೆದು ಗೊಂದಲ ಮತ್ತಷ್ಟು ಹೆಚ್ಚಾಗಿತ್ತು. ದಿನಾಲೂ ಜನಪ್ರಿಯ ರಾಜಕಾರಣಿಗಳ ಮುಖಗಳ ಮುಂದೆ ಲೋಗೋ ಹಿಡಿದು ರೂಡಿಮಾಡಿಕೊಂಡಿದ್ದ ಪತ್ರಕರ್ತರು ಈ ಹಾಳು ಹಳ್ಳಿಯಲ್ಲಿ ಯಾರನ್ನು ಮಾತಾಡಿಸಬೇಕೆಂದು ಗೊತ್ತಾಗದೆ ತಲೆ ಕೆರೆದುಕೊಳ್ಳತೊಡಗಿದರು. ಇದರ ಮಧ್ಯೆ ಯಾವಾಗಲೂ ತಮ್ಮ ಮನೆಲಿನ ಟಿವಿ ಪೆಟ್ಟಿಗೆಯಲ್ಲಿ ಇನ್ನೊಬ್ಬರ ಮುಖ ನೊಡಿ ಬೇಸತ್ತಿದ್ದ ಕೆಲವು ಊರಿನ ತಾತ್ಕಾಲಿಕ ಹಿರಿಕರು, ಕೊರಳಪಟ್ಟಿ ಸರಿ ಮಾಡಿಕೊಂಡು ತಾವೇ ಮುಂದೆ ಮಾತನಾಡಲು ಪಾಳಿ ಹಚ್ಚಿದರು.
*
ಯಾವದ್ಯಾವದೋ ಊರವರು ಬದುಕೂರಿನಲ್ಲಿ ಒಕ್ಕರಿಸಿಕೊಂಡರು. ತಾಲೂಕು-ಜಿಲ್ಲಾ ಕೇಂದ್ರಗಳ ಕೆಲ ಪರಮನೆಂಟ್ ಹೋರಾಟಗಾರರಂತೂ ಬದುಕೂರಿನ ಎದೆಯ ಮೇಲೆ ತಮ್ಮ ಝಂಡಾ ಊರಿದ್ದರು. ಊರೆಲ್ಲ ಒಂದು ರೌಂಡು ಜಾಥಾ ಮುಗಿಸಿಕೊಂಡು ಬಂದು ನಂತರ ಬದುಕೂರಿನ ಹಿರಿಯ ಸ್ವಾತಂತ್ರ ಹೋರಾಟಗಾರ ಗೂದ್ಲೆಪ್ಪಜ್ಜನ ಸರ್ಕಲ್ ಹತ್ತಿರ ಹಾಕಿದ್ದ ಸಣ್ಣ ಪೆಂಡಾಲ್‍ನಲ್ಲಿ ಗಿಜಗುಡತೊಡಗಿದರು. ಪೆಂಡಾಲ್‍ನ ಒಂದು ಮೂಲೆಯ ಕುರ್ಚಿಯಲ್ಲಿನ ಫೋಟೋದ ಕಟ್ಟಿನೊಳಗೆ ಬಂಧಿಯಾಗಿದ್ದ ಗಾಂಧೆಪ್ಪ ಮುತ್ಯಾ ಸೋಡಾ ಬುಡ್ಡಿ ಚಸ್ಮಾದೊಳಗಿಂದ ಬಿಡುಗಡೆಗಾಗಿ ಪಿಳಿ ಪಿಳಿ ಕಣ್ಣು ಬೀಡುತ್ತಿದ್ದ.
ಅವನ ಮುಂದೆ ಒಂದಿಷ್ಟು ಮಂದಿ `ಬೇಕೆ ಬೇಕು ನ್ಯಾಯ ಬೇಕು' ಎಂದೋ, `ಬೇಡ ಬೇಡ ಪ್ಯಾಕ್ಟರಿ ಬೇಡ' ಎಂದೋ ಗಂಟಲು ಹರಿದುಕೊಳ್ಳುತ್ತಿದ್ದರು. ಪೆಂಡಾಲ್‍ನ ಹಿಂದೆ ನಿರಂತರವಾಗಿ ಚಾ-ಚುಡಾ ಸರಬರಾಜು ನಡೆಯುತ್ತಿತ್ತು. ಸತ್ತವರ ಮನೆಗೆ ಸಂಬಂಧಿಕರು ಬಂದಾಗ ಹೆಚ್ಚಾಗುವ ರೋಧನದಂತೆ ಆಗಾಗ ಬರುತ್ತಿದ್ದ ಟಿವಿಯವರಿಗಾಗಿ ಘೋಷಣೆಗಳ ಚೀರಾಟದಿಂದ ವಾತಾವರಣ ಮತ್ತಷ್ಟು ಭಯಾನಕವಾಗುತ್ತಿತ್ತು. ಟಿವಿಯವರು ಸಹ ಭಯಾನಕವಾಗಿ ಚೀರುತ್ತಿದ್ದವರನ್ನೆ ಕೇಂದ್ರಿಕರಿಸಿ ಅವರಿಗೆ ಮತ್ತಷ್ಟು ಬೊಬ್ಬಿರಿಯುವತೆ ಪೆÇ್ರತ್ಸಾಹ ನೀಡುತ್ತಿದ್ದರು. ಟಿವಿಯವರು ಹೋದ ನಂತರ ನೀರು ಕುಡಿದು ದನಿವಾರಿಸಿಕೊಳ್ಳುತ್ತಿದ್ದ ಪ್ರತಿಭಟನಾಕಾರರು ಮುಂದಿನ ಟಿವಿಯವರು ಬರುವಿಕೆಗಾಗಿ ತಯಾರಾಗಿ ಕೂಡ್ರುತ್ತಿದ್ದರು.
ಕೆಲವು ಜನ ಊರಿನ ರೈತರ ಮನವೊಲಿಸಿ ಪೆಂಡಾಲಿಗೆ ಕರೆತರುವಲ್ಲಿ ನಿರತರಾಗಿದ್ದರೆ, ಹಲವರು ಹೊಲ ಮಾರಲಿಚ್ಚಿಸುವ ರೈತರನ್ನು ವಿಕಾಸಪ್ಪನವರ ಮನೆಗೆ ಕರೆದುಕೊಂಡು ಹೋಗುವ ಕಳ್ಳಯತ್ನ ನಡೆಸಿದ್ದರು. ವಿಕಾಸಪ್ಪನ ಮನೆಯಲ್ಲಿ ಹೊಲದ ಸರ್ವೆ ನಂ ಬರೆದುಕೊಂಡು ಖರ್ಚಿಗೆ ಅಡ್ವಾನ್ಸ್ ಕೊಟ್ಟು ಕಳಿಸಲಾಗುತ್ತಿತ್ತು.
ವಿರೋಧ ಪಕ್ಷದ ಮುಖಂಡರು ಪೆಂಡಾಲ್‍ನಲ್ಲಿ ಬಂದು ಕುಳಿತು ಪ್ರತಿಭಟನೆ ಬೆಂಬಲ ಸೂಚಿಸಿದ್ದರಾದರೂ ಒಳಗೊಳಗೆ ಹೊಲ ಮಾರುವ ಹುನ್ನಾರಕ್ಕೆ ಚಾವಿ ಕೊಟ್ಟಿದ್ದರು. ಯಾವಯಾವದೋ ಸಂಘಟನೆಗಳ ರಾಷ್ಟ್ರೀಯ ಮುಖಂಡರುಗಳು ಬಂದು ಮಾತನಾಡಿಸಿ ಟಿವಿ ಮುಂದೆ ಮಾತನಾಡಿ ಕಾರು ಹತ್ತುತ್ತಿದ್ದರು. ವಾರಾನುಗಟ್ಟಲೆ ನಡೆದ ಪ್ರತಿಭಟನೆಯಲ್ಲಿ ನಿಧಾನಕ್ಕೆ ರೈತರೆಲ್ಲ ಕಡಿಮೆಯಾಗುತ್ತಿದ್ದರೇ, ವಿಕಾಸಪ್ಪನ ಮನೆಯಲ್ಲಿ ರೈತರ ಹಾಜರಿ ಹೆಚ್ಚುತ್ತಲೇ ಇತ್ತು. ಪ್ರತಿಭಟನೆಯಲ್ಲಿ ನಿರತರಾಗಿದ್ದ ಕೆಲವು ರೈತರ ಸಂಬಂಧಿಕರು ಪ್ರತಿಭಟನಾ ನಿರತರನ್ನು ಚಾ ಕುಡಿಯಕ್ಕೆಂದು ಹೊರಗಡೆ ಕರೆದುಕೊಂಡು ಹೋದರೆ ಅವರು ಮತ್ತೆ ಪೆಂಡಾಲ್‍ನತ್ತ ತಿರುಗಿ ನೊಡುತ್ತಿರಲಿಲ್ಲ. `ಇದು ಪ್ರಜಾಪ್ರಭುತ್ವದ ಸೋಲು' ಎಂಬ ದೊಡ್ಡ ಹೆಸರನ್ನು ಕೊಟ್ಟ ಪ್ರಗತಿಪರ ಸಂಘಟನೆಗಳ ಮುಖಂಡರು ಒಂದಿನ ಪಂಡಾಲ್ ಕಿತ್ತುಕೊಂಡು ಪಟ್ಟಣದ ಹಾದಿ ಹಿಡಿದರು.
*
ಮರುದಿನ ಕಲ್ಲಜ್ಜ ಪ್ರತಿಭಟನಾ ಸ್ಥಳಕ್ಕೆ ಹೋದರೆ ಅಲ್ಲೇನಿದೆ ಮಣ್ಣು. ವಾರಗಟ್ಟಲೆ ತಿಂದು ಎಸೆದಿದ್ದ ಪೇಪರ್ ಮುದ್ದಿಗಳು ಮಡಿಚಿದ ಪ್ಲಾಸ್ಟಿಕ್ ಗ್ಲಾಸ್‍ಗಳು ಕಲ್ಲಜ್ಜನನ್ನು ಅಣಕಿಸುವಂತೆ ಬಿದ್ದುಕೊಂಡಿದ್ದವು. ಸರ್ಕಲ್ಲಿನ ಮುಂದೆ ಸೈಕಲ್ ಮೇಲೆ ಹೋಗುತ್ತಿದ ವಾಲಿಕಾರ ಭೀಮನ ಮುಖದಲ್ಲೂ ಅಣಕು ನಗೆ. ಅವತ್ತ ಎಷ್ಟೊಂದು ಎಗರ್ಯಾಡಿದಿ. ಈಗೇನು ಕಿಸಿತಿಯೋ ಕಿಸಿ' ಅನ್ನೋ ಸವಾಲು ಅವನ ನಗುವಿನಲ್ಲಿದ್ದಂಗಿತ್ತು.
ಮಹಾರಾಷ್ಟ್ರದಾಗ ಅಣ್ಣಾ ಎಂಬ ಚೂಪು ಟೊಪಗಿ ಮುತ್ಯಾ ಒಬ್ಬ ಅನ್ಯಾಯ ಆದಾಗೆಲ್ಲ ಸರ್ಕಲ್‍ಗಳಲ್ಲಿ ಕುಳಿತು ಪ್ರತಿಭಟಿಸೋದನ್ನು ಯಾವಾಗೋ ಟಿವಿಯಲ್ಲಿ ನೊಡಿದ್ದೋ ಈಗ ಕಲ್ಲಜ್ಜನ ನೆನಪಿನಲ್ಲಿ ಸುಳಿದುಹೋಯಿತು. ತನಗ ನ್ಯಾಯ ಸಿಗೋವರೆಗೋ ಇಲ್ಲಿಂದ ಎಳಬಾರದು ಅಂತ ಶಪತ ಮಾಡಿಕೊಂಡು ಮುದುಕ ಅಲ್ಲೆ ಕುಸಿದು ಕುಳಿತ.
ಮುಂಜಾನಿಂದ ಸಂಜಿಮಟ ಅಲ್ಲೆ ಕುಂತ, ಮಲಕೊಂಡ, ಎದ್ದ. ಮತ್ತೆ ಮಲಕೊಂಡ. ಮಗ ರಮೇಶ ಬಂದು ಊಟಕ್ಕೆ ಕರೆದಾಗಲೆ ಅವನು ಪ್ರತಿಭಟನೆ ಮಾಡುತ್ತಿದ್ದಾನೆ ಎಂದು ಊರ ಜನಕ್ಕೆ ಗೊತ್ತಾಗಿದ್ದು.
`ಎಪ್ಪ ನಡಿ ಊಟಕ್ಕ, ಮನಿ ಇಲ್ಲೆನ ಮಾಡಾಕ ಹತ್ತಿ'
`ಇಲ್ಲಪ್ಪಾ, ವಿಕಾಸಪ್ಪ ಗೌಡ್ರು ನಮ್ಮ ಹೊಲ ತುಗಳುದಿಲ್ಲಾ ಅಂತ ಮಾತ ಕೊಡುವರೆಗೂ ಈ ಜಾಗ ಬಿಟ್ಟು ಕದಲಂಗಿಲ್ಲ.'
`ಅಲ್ಲೋ ಎಪ್ಪಾ, ನೀ ಒಬ್ಬನ ಇಲ್ಲಿ ಕುಂತ್ರ ಏನು ಸಾಧಿಸಿದಂಗಾಕ್ಕೆತಿ. ಹೊಲದ ಬಗ್ಗೆ ಗೌಡ್ರ ಮನಿಗೆ ಹೋಗೆ ಮಾತಾಡೂನು. ನೀ ಮನಿಗೆ ಬಾ' ಅಂತ ಮಗಾ ಒಂದೆ ಸಮನ ಕರಿಯಾಕ ಹತ್ತಿದ.
ಕಲ್ಲಜ್ಜ ಅವನಿಗೆ ಕೇರ್ ಮಾಡದೆ ಸುಮ್ಮನ ಅವನ ಕಡೆ ಮುಕುಳಿ ತಿರುವಿ ಗುದ್ಲೆಪ್ಪಜ್ಜನ ಕಲ್ಲ ಮೂರ್ತಿ ನೋಡಕೊಂತ ಕುಂತಬಿಟ್ಟ.
 ಈ ವಿಷಯಾನ ವಿಕಾಸಪ್ಪಗೌಡರೊಂದಿಗೆ ಮಾತಾಡೋದು ಒಳಿತು ಅಂತ ಮಗ ರಮೇಶ್ ಗೌಡರ ವಾಡೆಯ ದಾರಿ ಹಿಡಿದ. ಒಟ್ಟು ಎಷ್ಟು ಎಕರೆ ಭೂಮಿ ಸಿಗುತ್ತೆ, ತಮಗೆ ಸಿಗುವ ಕಮೀಶನ್ ಎಷ್ಟು ಎಂದು ಲೆಕ್ಕ ಹಾಕುತ್ತಾ ಕುಳಿತಿದ್ದ ಗೌಡರು,  ರಮೇಶನ್ನ ನೋಡಿ `ನಿಮ್ಮ ಹೊಲದ್ದು ಉತಾರ ಯಾವತ್ತು ತರತಿಯೋ' ಅಂತ ಅಧಿಕಾರದಿಂದೆಂಬಂತೆ ಜೋರಿನಿಂದ ಕೇಳಿದರು.
`ನಮ್ಮಪ್ಪ ಹೊಲ ಕೊಡೂದಿಲ್ಲಾ ಅಂತಾನ್ರಿ'
`ಅಲ್ಲೊ ನಿಮ್ಮಪ್ಪಗ ಹುಚ್ಚ ಗಿಚ್ಚ ಹಿಡದೈತೇನ. ಸುತ್ತಲಿರೋರು ಎಲ್ಲ ಹೊಲ ಕೊಟ್ಟಾರ. ನಿಮ್ಮದೊಂದು ನಡುವು ಬಿಟ್ಟು ಸುತ್ತಲೂ ಪ್ಯಾಕ್ಟರಿ ಕಟ್ಟಾಕ ಹೆಂಗ ಬರತೈತಿ. ನಿಮ್ಮ ಅಪ್ಪ ಏನ್ ಬಿನ್ ಲಾಡೆನ್ ತುಂಡನ. ಅದೆಲ್ಲ ಆಗಂಗಿಲ್ಲ. ನಿಮ್ಮ ಹೊಲ ತುಗೊಂಡ ನಾವೇನು ನಮ್ಮ ಹೆಸರಿಗೆ ಬರಸÀಕೊಳ್ಳಾಕ ಹತ್ತಿಲ್ಲ. ಸರಕಾರದೊರ ಆದೇಶ ಐತಿ. ನೀವು ಕೊಡೂದಿಲ್ಲ ಅಂದ್ರೂ ಸರಕಾರದೋರು  ಕೇಳತಾರೇನ್. ಇವತ್ತಲ್ಲಾ ನಾಳೆ ತಮ್ಮ ಕಬ್ಜಾಕ್ಕ ತೊಗೋತಾರ' ಎಂದು ಗೌಡರು ಇದ್ದ ಹಕ್ಕಿಕತಾವನ್ನು ಹೇಳಿ ತಮ್ಮ ಒಳ್ಳೆತನವನ್ನು ಪ್ರದರ್ಶಿಸಿದರು.
‘ನೀವು ಹೇಳೂದು ನನಗೆಲ್ಲ ಅರ್ಥ ಆಕ್ಕೆತ್ರಿ ದನ್ಯಾರ. ಆದ್ರ, ಮುದಿಯಾ ನಮ್ಮಪ್ಪಗ ಅರ್ಥ ಆಗೊಲ್ಲದು. ಎರಡು ದಿನದಿಂದ ಅಂವ ಮನಿಗೆ ಬಂದಿಲ್ರಿ. ನೀವು ಬಂದು ನಮ್ಮ ಹೊಲ ತುಗೊಂಬುದಿಲ್ಲ ಅಂತ ಹೇಳುವರೆಗೂ ಆ ಜಾಗ ಬಿಟ್ಟು ಕದಲೋದಿಲ್ಲ ಅಂತ ಹಟಾ ಹಿಡಿದಾನ. ನೀವು ಸ್ವಲ್ಪ ಅಲ್ಲಿವರೆಗೆ ಬಂದು ಅಂವಗ ಬುದ್ಧಿ ಹೇಳಿದ್ರ ಉಪಕಾರ ಆಕೈತ್ರಿ ದನ್ಯಾರ.’
‘ನಮ್ಮ ನೋರೆಂಟು ಜಂಜಾಟದಾಗ ಎಲ್ಲಿ ಆಕ್ಕೆತಲೆ ಅದು. ನೋಡು ಒಂದು ಕೆಲಸ ಮಾಡು. ಇವತ್ತೊಂದಿನ ಮುದಕ ಆ ಪೆಂಡಾಲದಾಗ ಬಿದ್ದಿರಲಿ. ನೀನು ಈಗಿಂದ ಈಗ ನಿಮ್ಮಣ್ಣ ತಿಮ್ಮೇಶಿಗೆ ಫೆÇೀನು ಮಾಡಿ ಅಂವಂಗ ಬರಾಕ ಹೇಳು. ಮೊದಲು ನೀವು ಇಬ್ಬರು ಅಣ್ಣ ತಮ್ಮ ಮಾತಾಡಕೋರಿ. ಮುದುಕಂದೂ ಎಲ್ಲ ಆಗೇತಿ ಹೋಗೆತಿ. ನೀವು ಹೊಲ ಮಾರಬೇಕಂತ ಮಾಡಿದ್ರ ನಿಮ್ಮಪ್ಪನ ಆಟ ನಡಿಲಾರದಂಗ ಮಾಡಬಹುದು. ನಾನು ನಿಮ್ಮಣ್ಣನ ಕೂಡ ಫೆÇನಿನೊಳಗ ಮಾತಾಡತೇನಿ. ನೀನು ಹೋಗಿ ಫೆÇನು ಮಾಡು' ಎಂದು ಸಿಗರೇಟ್ ಹಚ್ಚಿದ ಗೌಡರು ಮತ್ತೆ ಲೆಕ್ಕದಲ್ಲಿ ಮುಳುಗಿದರು.
 ಕೊನೆಗೆ ಗೌಡ್ರ ನಿರ್ಧಾರವೇ ಗೆದ್ದಿತು. ಬೆಂಗಳೂರಿನಿಂದ ಬಂದ ಹಿರಿಮಗ ತಿಮ್ಮೇಶಿ ಮೊದಲು ವಿಕಾಸಪ್ಪನೊಡನೆ ದೀರ್ಘ ಚರ್ಚೆ ನಡೆಸಿದ. ನಂತರ ಗುದ್ಲೆಪ್ಪಜ್ಜನ ಸರ್ಕಲ್‍ಗೆ ಹೋಗಿ ನಿತ್ರಾಣಗೊಂಡು ಮಲಗಿದ್ದ ಕಲ್ಲಜ್ಜನನ್ನು ಕೂಡಿಸಿ `ನೀ ಮುದುಕಾದಿ. ಹೊಲ ತುಗೊಂಡು ಏನು ಮಾಡಿತಿ. ಹೊಲ ಬೇಕು ಬೇಡ ಅಂತ ನಾವು ತಿರ್ಮಾನ ಮಾಡತೆವಿ. ನಮಗ ಹೊಲ ಮಾಡೂದು ನೀಗಲಾರದಕ್ಕ ಬ್ಯಾರೆ ಕಡೆ ಕೆಲಸಕ್ಕ ಹೊಂಟೆವಿ.  ನೀ ಇಲ್ಲಿ ಇಲ್ಲದ ಉಸಾಬರಿ ಮಾಡಕೊಂಡು ದಣ್ಯಾರ ಕೂಡ ಮುಖ ಕೆಡಿಸಿಕೊಂಡ ಕುಂತಿ. ಹೊಲ ಮಾರಿದ ಮ್ಯಾಲ ನೀನು ಬಂದು ಬೆಂಗಳೂರಿಗೆ ಬರುವಂತಿ. ಈಗ ಮನಿಗೆ ನಡಿ' ಎಂದು ಬೈಯ್ದು ಬುದ್ಧಿ ಹೇಳಿ ಮನೆಗೆ ಕರಕೊಂಡು ಬಂದ.
*
ಇದೆಲ್ಲ ನಡೆದು ಮೂರ್ನಾಲ್ಕು ವರ್ಷಗಳ ಗತಿಸಿವೆ. ತಿಮ್ಮೇಶಿ ತಾನು ಕೊಟ್ಟ ಮಾತಿನಂತೆ ಹೆತ್ತೊಡಲುಗಳನ್ನು ಬೆಂಗಳೂರಿಗೆ ಕರಕೊಂಡು ಹೋದ. ಜಮೀನು ಮಾರಿ ಬಂದ ದುಡ್ಡಿನಲ್ಲಿ ಒಂದು ಚಿಕ್ಕಮನೆಯನ್ನು ಲೀಜ್‍ಗೆ ಹಾಕಿಸಿಕೊಂಡು ಬದುಕಿನ ಬಂಡಿ ನೂಕುವುದಕ್ಕೆ ಹೆಣಗಾಡತೊಡಗಿದ. ಮನೆ ಅಂದ್ರೆ ಅದೊಂದು ಚಿಕ್ಕ ರೂಮು. ಅದರ ನಡುವೆ ಆಳೆತ್ತರದ ಗೊಡೆ ಎದ್ದು ಅಡುಗೆ ಮನೆ ವಿಭಾಗಿಸಿರುವಂಥದ್ದು. ಆ ಚಿಕ್ಕ ಮನೆಯಲ್ಲಿ ಮಗ, ಸೊಸೆ, ಇಬ್ಬರು ಮಕ್ಕಳು ಮತ್ತು ಕಲ್ಲಜ್ಜನೆಂಬ ಹೊಸ ಸದಸ್ಯ. ಸೊಸೆ ದಿನ ರಾತ್ರಿ ಹೂ ಪೆÇೀಣಿಸಿ ಸಂಸಾರ ಬಂಡಿಗೆ ಹೆಗಲು ಕೊಡುತ್ತಿದ್ದಳು. ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಮಗ ಬೆಳಗಿನ ಜಾವ ಮನೆ ಬಿಟ್ಟು, ಡ್ಯೂಟಿ ಮ್ಯಾಲ ಓಟಿ ಮಾಡಿ ತಡರಾತ್ರಿ ಮನೆಗೆ ಬರುತ್ತಿದ್ದ.
ಯಾವಾಗಲೂ ಬಯಲು ಹೊಲದಲ್ಲಿ, ಮರಗಿಡಗಳ ನೆರಳಲ್ಲಿ ಬದುಕು ಸಾಗಿಸಿದ್ದ ಮುದುಕರಿಗೆ ಬೆಂಗಳೂರು ಜೀವನ ಹೇಗೆ ಒಗ್ಗಲು ಸಾಧ್ಯ. ಆದರೂ ದಿನ ನೂಕಬೇಕು ಹಿರಿಯ ಜೀವಗಳೆರಡು ದಿನಗಳೆದಂತೆ ಮೂಕವಾಗುತ್ತಾ ಹೋದವು. ರತ್ನವಜ್ಜಿ ಒಂದು ದಿನ ಬಚ್ಚಲಿನಲ್ಲಿ ಬಿದ್ದ ನೆಪದಿಂದ ಚಪ್ಪೆ ಮುರಿದುಕೊಂಡವಳು ಅದೆ ನೆಪದಲ್ಲಿ ಹಾಸಿಗೆ ಹಿಡಿದುಬಿಟ್ಟಳು. ಗಾರ್ಮೇಂಟ್ಸ್‍ನಲ್ಲಿ ನಾಲ್ಕಂಕಿಯ ಸಂಬಳ ಪಡೆಯುತ್ತಿದ್ದ ತಿಮ್ಮೇಶಿ ಕೆಲವು ದಿನ ಸರಕಾರಿ ಆಸ್ಪತ್ರೆಗೆ ಅಲೆದಾಡಿದಂತೆ ಮಾಡಿ ಆಮೇಲೆ ಮೌನವಾಗಿಬಿಟ್ಟ. ದಿನಗಳೆದಂತೆ ಮುದುಕಿಯ ಮೈ ಕರಗತೊಡಗಿದ್ದನ್ನು ನೋಡಿ  ರತ್ನವಜ್ಜಿ ಕೈ ಬೀಡುವುದು ಯಮುನಜ್ಜನಿಗೆ ಖಾತ್ರಿಯಾಯಿತು. ಇನ್ನು ಇಲ್ಲೆ ಇದ್ದರೆ ಗತಿಗೆಡುತ್ತದೆ ಎಂದು ಮುದುಕಿನ ಹೆಂಗಾರ ಮÀiÁಡಿ ಊರಿಗೆ  ಕರೆದೊಯ್ಯಿ ಎಂದು ಕಲ್ಲಜ್ಜ ತಿಮ್ಮೇಶಿಗೆ ದುಂಬಾಲು ಬಿದ್ದ. ಆದರೆ, ಈಗಾಗಲೆ ಸಾವಿರಾರು ರೂ.ಆಸ್ಪತ್ರೆಗಗಿ ಕೈ ಬಿಟ್ಟಿದ್ದರಿಂದ ತಿಮ್ಮೇಶಿ ಹೂಂ ಅಥವಾ ಉಹುಂ ಎನ್ನಲಿಕ್ಕಾಗದೆ ಕಣ್ಣೀರು ಬರಿಸಿಕೊಂಡು ತಂದೆಯ ಮುಖ ನೋಡಿದ. ಸುಕ್ಕುಗಟ್ಟಿದ ಅಜ್ಜನ ಗಲ್ಲದ ಮೇಲೂ ಕಣ್ಣ ಹನಿ ದುಂಡುಗಟ್ಟಿತ್ತು.
ಅಂದು ಅಪರಾತ್ರಿಯೇ ಮುದುಕಿ ಜೀವ ಕಲ್ಲಜ್ಜನ ತೊಡೆಯ ಮೇಲೆ ಜೀವ ಬಿಟ್ಟಳು. ತಿಮ್ಮೇಶಿ ಏನೂ ಮಾಡುವುದು ಗೊತ್ತಾಗದೆ ಹೆಣ ಸಾಗಿಸೋ ಟಿಂಪೆÇೀಗಾಗಿ ನಗರಪಾಲಿಕೆಗೆ ಫೆÇೀನು ಮಾಡಿದ. ಆ ಕಡೆಯಿಂದ `ಬೆಳಗ್ಗೆವರೆಗೆ ಕಾಯಿರಿ' ಅನ್ನೋ ಉತ್ತರದಿಂದ ಅಲ್ಲೆ ಕುಸಿದು ಕುಳಿತ. ಅಳಲಿಕ್ಕೂ ಆಗದ, ನೆಮ್ಮದಿಯಿಂದ ಮಲಗಲಿಕ್ಕೂ ಆಗದ ಸೊಸೆ ಮಕ್ಕಳೊಂದಿಗೆ ಹೆಣಕ್ಕೆ ಸ್ವಲ್ಪ ದೂರದಲ್ಲಿಯೇ ನಿದ್ರೆಯಿಲ್ಲದೆ ಹೊರಳಾಡಿದಳು. ಬೆಳಗ್ಗೆವರೆಗೆ ಕಲ್ಲಜ್ಜನ ಕಣ್ಣುಗಳು ರತ್ನವ್ವಜ್ಜಿಯ ಮುಖದ ಮೇಲೆ ತೊಟ್ಟು ತೊಟ್ಟಾಗಿ ಕಣ್ಣ ಹನಿ ಚಲ್ಲುತ್ತಲೇ ಇದ್ದವು.
ಬೆಳಗ್ಗೆ ತಿಮ್ಮೇಶಿ ನಾಲ್ಕಾರು ಜನ ಗೆಳೆಯರಿಗೆ ಫೆÇೀನು ಮಾಡಿ ಅವ್ವ ಸತ್ತಿದ್ದನ್ನು ತಿಳಿಸಿದ. ಒಂದಿಬ್ಬರು ಪೆÇೀನಿನಲ್ಲಿಯೇ ಸಂತಾಪ ಸೂಚಿಸಿದರೆ, ಮತ್ತಿಬ್ಬರು ಹೆಣ ಎತ್ತುವ ಸಮಯಕ್ಕೆ ತಮ್ಮ ಬೈಕುಗಳಲ್ಲಿ ಮನೆಯ ಮುಂದೆ ಹಾಜರಾದರು. ನಾಗರಪಾಲಿಕೆಯ ಟೆಂಪೂ ಎಂಬ ಗೂಡಿನಲ್ಲಿ ರತ್ನವ್ವಜ್ಜಿಯ ಕೊನೆಯ ಯಾತ್ರೆ ಸಾಗಿದ್ದನ್ನು ಕಂಡು ಕಲ್ಲಜ್ಜ ಮತ್ತಷ್ಟು ಗೋಳಾಡತೊಡಗಿದ. ಮುದುಕಿ ಒಂದು ವೇಳೆ ಬದುಕೂರಿನಲ್ಲಿ ಜೀವ ಬಿಟ್ಟಿದ್ದರೆ, ಬಾಳೆಗೊನೆಯ ಮಂಟಪದಲ್ಲಿ ಮೈಮುಚ್ಚುವಷ್ಟು ಹೂ-ಹಾರಗಳಿಂದ ಅಲಂಕೃತಗೊಂಡು ಕಿ.ಮೀ.ಗಟ್ಟಲೆ ನೆರೆದ ಜನಜಾತ್ರೆಯ ಮಧ್ಯೆ ಮುದಕಿಯ ಕೊನೆಯ ಯಾತ್ರೆ ಸಾಗಬಹುದಾದ ಚಿತ್ರ ಅಜ್ಜನ ಕಣ್ಣಗುಬ್ಬೆ ಮೇಲೆ ಬಂದು ಏನೆಯಾದರೂ ಜೀವ ಮಾತ್ರ ಬೆಂಗಳೂರಿನಲ್ಲಿ ಬೀಡಬಾರದು ಅಂತ ಯಮುನಜ್ಜ ಅವತ್ತೆ ಸಂಕಲ್ಪ ಮಾಡಿಕೊಂಡ.
ಹರಿಶ್ಚಂದ್ರ ಘಾಟಿನ ವಿದ್ಯುತ್ ಚಿತಾಗಾರದ ಎದುರು ನಳದ ಮುಂದೆ ಕೊಡಪಾನ ಪಾಳಿಗಿಟ್ಟಂಗ ತರಾವರಿ ಹೆಣಗಳನ್ನು ಪಾಳಿಗಿಟ್ಟು ಅವುಗಳ ಸಂಬಂಧಿಕರು ಅಲ್ಲೆ ಕಲ್ಲುಬೆಂಚಿನ ಮುಂದೆ ಹರಟೆ ಹೊಡಕೋತ ಕಾಯುತ್ತಾ ಕುಳಿತಿದ್ದರು. ದೇವರಂತೆ ಸಿಂಗಾರಗೊಂಡಿದ್ದ ಹೆಣಗಳ ಬಾಡಿಯೊಳಗೆ ನೋಣಗಳು ಪ್ರವಾಸ ಕೈಗೊಂಡಿದ್ದವು.
ಜೀವ ಇದ್ದಾಗಲೂ, ಇಲ್ಲದಾಗಲೂ ಮನುಷ್ಯನಿಗೆ ಬೆಲೆಯೆ ಇಲ್ಲದ ಈ ನಗರಗಳಲ್ಲಿ ಮನುಷ್ಯರ ಬದುಕು ಮೃಗ- ಯಂತ್ರಗಳಿಗಿಂತಲೂ ಕಡೆ ಎಂಬ ಯೋಚನೆಗೆ ಬಿದ್ದ ಕಲ್ಲಜ್ಜ ತನಗೆ ಹುಚ್ಚು ಹಿಡಿಯುವ ಮುನ್ನ ರತ್ನವ್ವನ ಅಂತಿಮ ಕ್ರಿಯೆ ನಡೆದುಬಿಡಲಿ ಎಂದು ಸಿಡಿಯುತ್ತಿರುವ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕಾಯುತ್ತ ಕೂತ.
ರತ್ನಜ್ಜಿ ಹೆಣದ ಪಾಳಿ ಬಂದುದು ಗೊತ್ತಾಗಿ ಕಲ್ಲಜ್ಜ ಎದ್ದು ಬಂದ ಯಾಂತ್ರಿಕವಾಗಿ ಪೂಜೆ ಮುಗಿಸಿದ. ಹೆಣ ಯಂತ್ರದ ಬಾಯಾಗ ಕೊಟ್ಟು ಅಂಗಡಿ ಶೆಟರ್ ಎಳೆದಂತೆ ಅದರ ಬಾಗಿಲು ಮುಚ್ಚಿ ಕ್ಷಣದ ನಂತರ ತೆರೆದರೆ ಅಲ್ಲೆನಿದೆ? ನಿಗಿ ನಿಗಿ ಕೆಂಡದಲ್ಲಿ  ಮುದುಕಿ ಮಾಯವಾಗಿದ್ದಳು. ಜೀವವೂ ಕ್ಷಣಿಕ, ದೇಹವೂ ಕ್ಷಣಿಕ.
 ಮುದುಕಿ ಹೋದ ಮೇಲೆ ಯಮುನಜ್ಜನಿಗೆ ಬೆಂಗಳೂರಿನಿಂದ ಯಾವಾಗ ಬಿಡುಗಡೆ ಹೊಂದೆನೋ ಅನ್ನೊ ಚಡಪಡಿಕೆ ಶುರುವಾತು. ಮೊಮ್ಮಕ್ಕಳೊಂದಿಗಿನ ಆಟ, ಸೊಸೆಯ ಪ್ರೀತಿ, ಮಗನ ಗದರಿಕೆ ಎಲ್ಲದರಿಂದ ಕೊಸರಿಕೊಂಡು ಆತ ಮೂರ್ನಾಲ್ಕು ವರ್ಷಗಳ ನಂತರ ಹಟ ಹಿಡಿದು ಮತ್ತೆ ಹಳ್ಳಿ ಕಡೆ ಬಸ್ ಹತ್ತಿದ. ಅಜ್ಜನ ದಣಿದ ಮೈಮನಸ್ಸುಗಳಿಗೆ ಹಳೆಯ ನೆನಪುಗಳು ಕಾಡಿಸಿ ಆಗಷ್ಟೆ ನಿದ್ರೆಗೆ ದೂಡಿದ್ದವು.
ಆಕಾಶವೇ ತುಂಬಿಕೊಂಡಂತಿರುವ ಕಾಂಕ್ರೀಟ್ ಬಣ್ಣದ ಪಕ್ಷಿಯೊಂದು ಬದಕೂರಿನ ಅಗಸಿ ಬಾಗಿಲ ಮೇಲೆ ಕುಳಿತಿದೆ. ಅದು ತನ್ನ ಭಾರೀ ಗಾತ್ರದ ರೆಕ್ಕೆಗಳನ್ನು ಪಟಪಟನೆ ಬಡಕೊತ ಬದಕೂರಿನ ಸಣ್ಣ ಸಣ್ಣ ಮಣ್ಣಿನ ಮನೆಗಳನ್ನು ಕುಕ್ಕಿ ಕುಕ್ಕಿ ತಿನ್ನುತ್ತಿದೆ. ಇಡೀ ಬದುಕೂರೆಂಬ ಬದುಕೂರೆ ಖಾಲಿಯಾದಾಗ ರೆಕ್ಕೆಯ ಚುಂಗಿನಿಂದ ಚುಂಚನ್ನು ಒರೆಸಿಕೊಂಡ ಹಕ್ಕಿ ಅಳಿದುಳಿದ ಮಣ್ಣಿನ ಮನೆಗಳ ಅವಶೇಷಗಳ ಮೇಲೆಯೇ ನೆಮ್ಮದಿಯಿಂದ ದೊಡ್ಡ ದೊಡ್ಡ ಮೊಟ್ಟೆಗಳನ್ನು ಇಡುತ್ತಿದೆ. ಆ ಮೊಟ್ಟೆಗಳೋ ಕ್ಷಣಾರ್ಧದಲ್ಲಿ ನಳನಳಿಸುವ ಕಾಂಕ್ರೀಟ್ ಕಟ್ಟಡಗಳಾಗಿ ಬದಲಾಗುತ್ತಿವೆ. ಕಲ್ಲಜ್ಜ ಊರ ಮುಂದಿನ ಹೊಲದಲ್ಲಿನ ತನ್ನಪ್ಪ ಯಮುನಜ್ಜನ ಗೋರಿಯ ಸಮೀಪ ಕುಳಿತು ದಿಗ್ಮೂಡನಾಗಿ ಈ ವಿಸ್ಮಯ ನೋಡುತ್ತಿದ್ದಾನೆ. ಮೊಟ್ಟೆಯಿಟ್ಟಾದ ಮೇಲೆ ನಿಸೂರಾಗಿ ಉಸಿರುಬಿಟ್ಟು ರೆಕ್ಕೆ ಪಟಪಟಿಸಿದ ಹಕ್ಕಿ, ಮತ್ತೆ ತಿನ್ನಲು ಹುಡುಕಾಡುತ್ತಾ ಯಮುನಜ್ಜನ ಗೋರಿಯತ್ತಲೆ ಕತ್ತು ಕೊಂಕಿಸಿ ಮುಂದಡಿಯಿಡತೊಡಿಗಿದೆ. ಸತ್ನೋ ಕೆಟ್ನೋ ಎಂದು ಒಮ್ಮೆಲೆ ಎದ್ದು ಬಂದು ಗೋರಿಯ ಮೇಲೆ ಉದ್ದಕ್ಕೆ ಮಲಗಿಕೊಂಡ ಕಲ್ಲಜ್ಜ, ತಿನ್ನುವುದಾದರೆ ನನ್ನ ತಿನ್ನು ಎಂದು ಹಕ್ಕಿಯ ಮುಂದೆ ಪರಿಪರಿಯಾಗಿ ಗೋಳಾಡತೊಡಗಿದ.
ಬಸ್ಸಿನಲ್ಲಿದ್ದ ಜನ ಎಲ್ಲ ಒಮ್ಮೆಲೆ ಗಾಬರಿಯಾಗಿ ಚೀರುತ್ತಾ ಬಸ್ ನಿಲ್ಲಿಸುವಲ್ಲಿ ಯಶಸ್ವಿಯಾದರು. ಸೀಟುಗಳ ಮಧ್ಯ ಉದ್ದಕ್ಕೆ ಮಲಗಿಸಿದ ಕಲ್ಲಜ್ಜನನ್ನು ಎಬ್ಬಿಸಿ ಮುಖಕ್ಕೆ ನೀರು ಚಿಮುಕಿಸಿ ಉಪಚರಿಸಿ ಮತ್ತೆ ಸೀಟಿಗೆ ಕೂಡ್ರಿಸಿದರು. ನುಂಗಲು ಬಂದ ಹಕ್ಕಿ ಕನಸಿನಲ್ಲಿ ಎಂದು ಕಲ್ಲಜ್ಜನಿಗೆ ಮನವರಿಕೆಯಾಗುವಷ್ಟರಲ್ಲಿ ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರ ಕಣ್ಣಲ್ಲಿ ಆತ ಅರೆಹುಚ್ಚನಾಗಿಬಿಟ್ಟಿದ್ದ.
*
ತಾನು ಬದುಕೂರಿಗೆ ಬಂದೆನೋ ಅಥವಾ ಅಪ್ಪಿ ತಪ್ಪಿ ಬೆಂಗಳೂರಿನಲ್ಲಿಯೇ ಇಳಿದುಬಿಟ್ಟೆನೋ ಅನ್ನೊ ಅನುಮಾನ ಅಜ್ಜನಿಗೆ ಒಂದು ಕ್ಷಣ ಬಂದು ಹೋಯಿತು. ಹಳ್ಳಿಯಲ್ಲ ಅದಲು ಬದಲು. ಮರಗಿಡಗಳ ಗವುಗನ್ನು ಬೃಹದ್‍ಗಾತ್ರದ ಕಾಂಕ್ರೀಟ್ ಕಟ್ಟಡಗಳು ಆವರಿಸಿಕೊಂಡಿವೆ. ಊರ ಸುತ್ತಲಿನ ಎಲ್ಲ ಜಮೀನನ್ನು ಪ್ಯಾಕ್ಟರಿಯ ಆಳೆತ್ತರದ ಕಂಪೌಂಡು ಆವರಿಸಿ ಮುಚ್ಚಿ ಹಾಕಿದೆ. ಅಜ್ಜನ ಎರೆಡೇಕ್ರೆಯಂತೂ ಪತ್ತೆಯೇ ಆಗೂದಿಲ್ಲ. ಬ್ಯಾಂಗಲೋರ್ ಎಂಬ ರಣಹದ್ದು ಎಲ್ಲ ಬದುಕೂರಿನಂಥ ಚಿಲಿಪಿಲಿ ಹಕ್ಕಿಗಳನ್ನು ನುಂಗಿ ತನ್ನ ಬೃಹತ್ ಕಾಂಕ್ರೀಟ್ ಮೊಟ್ಟೆಗಳನ್ನೆ ಇಡುತ್ತಾ ಹೊರಟಿರುವಂತಿದೆ ಎಂದು ಅಜ್ಜ ಚಿಂತೆಗೆ ಬಿದ್ದ.
ಬಸ್ ನಿಲ್ದಾಣದಲ್ಲಿ ಎಂಥೆಂಥದೋ ಕಾಂಪ್ಲೆಕ್ಸಗಳು, ಊರಲ್ಲಿ ನಳನಳಿಸುತ್ತಿದ್ದ ಗಿಡಮರಗಳ ಜಾಗದಲ್ಲಿ ಈಗ ಟಿವಿ ಎಂಟೇನಾಗಳು, ಮೊಬೈಲ್ ಟವರ್‍ಗಳು ತಮ್ಮ ಸಾಮ್ರಾಜ್ಯದ ಕುರುಹನ್ನು ಸಾರುತ್ತಿವೆ. ಹುಡುಗರೆಲ್ಲ ಹಿಂದೆ ಹಿಪ್ಪಿ, ಮುಂದೆ ಹೋತದ ಗಡ್ಡ ಬಿಟ್ಟುಕೊಂಡು ಕುಂಡಿ ಕೆಳಗಿನ ಜೀನ್ಸ್ ಮೇಲೆಳೆದುಕೊಳ್ಳತ್ತಾ, ಕಬ್ಬಡ್ಡಿ, ಕುಸ್ತಿ ಮರೆತು ಕ್ರಿಕೇಟ್ ಆಡುವಲ್ಲಿ ಮಗ್ನರಾಗಿದ್ದಾರೆ. ತಡರಾತ್ರಿವರೆಗೆ ಪ್ಯಾಕ್ಟರಿಯಲ್ಲಿ ದುಡಿದು ಬರುವ ಹೆಂಗಸರು ತಮ್ಮ ಬದುಕಿನ ಕಹಿ ಸತ್ಯಗಳನ್ನು ಮರೆಯಲು ಮಾಯಾವಿ ಟಿವಿಯೊಳಿಗಿನ ದಾರಾವಾಹಿಗಳಿಗೆ ಮೊರೆ ಹೋಗಿದ್ದಾರೆ.
ಅಳಿದುಳಿದ ಬದುಕು ಪೊರೆಯುವುದಕ್ಕಾಗಿ ಅಜ್ಜ ಪ್ಯಾಕ್ಟರಿಯ ಗೇಟ್ ಕಡೆ ಹೆಜ್ಜೆ ಹಾಕಿದ. ಇಡಿ ಬದುಕು ಸವೆಸಿದ್ದ ಬದುಕೂರಿನಲ್ಲಿಯೇ ಅಜ್ಜನನ್ನು ಪ್ಯಾಕ್ಟರಿಯ ಸೆಕ್ಯೂರಿಟಿ ಗಾರ್ಡ್ ‘ಯಾರು’ ಎಂದು ಕೇಳಿ ಬೆಚ್ಚಿ ಬೀಳಿಸಿದ.
ವಿಧಿಯಿಲ್ಲದೆ ಅಜ್ಜ `ನಾ. ಇದ ಊರಾಂವ್ರಿ. ಈ ಪ್ಯಾಕ್ಟರಿಗೆ ಜಮೀನು ಮಾರಿನ್ರಿ. ನನಗ ಯಾವುದಾದರೂ ಕೆಲಸ ಕೊಟ್ಟು ಪುಣ್ಯ ಕಟ್ಟಕೊಳ್ರಿ' ಎಂದು ತನ್ನ ಹಳ್ಳಿ ಶೈಲಿನಲ್ಲಿ ಬೆಪ್ಪನಂತೆ ಕೇಳಿದ. ಸೆಕ್ಯೂರಿಟಿಗೆ ಇವನ ಮಾತುಗಳು ಅರ್ಥವಾಗದೆ ಅಲ್ಲೆ ಅಡ್ಡಾಡುತಿದ್ದ ಕುತ್ತಿಗೆಗೆ ಟೈ ಕಟ್ಟಿದವನೊಬ್ಬನನ್ನು ಕರೆದು ಇವನ ಸಮಸ್ಯೆ ಹೇಳಿದ. ಅಜ್ಜ ಇವನ ಮುಂದೆಯೂ ಮೊದಲಿನ ಬೆಪ್ಪುತನ ರಿಪೀಟ್ ಮಾಡಿದ.
ಅಜ್ಜನಿಗೆ ಏನು ಹೇಳಬೇಕೆಂದು ಗೊತ್ತಾಗದೆ ಟೈದಾರ ‘ಎಲ್ಲಿ, ನಿನ್ನ ರೆಜ್ಯುಮ್ ತೋರಿಸು’ ಎಂದು ತನ್ನ ಟೈ ಸರಿಪಡಿಸಿಕೊಂಡ. ಅಜ್ಜ ರೆಜ್ಯುಮ್ ಎಂದರೆ ಎನೆಂದು ಗೊತ್ತಾಗದೆ ಕಂಗಾಲಾಗಿ ತಲೆ ಕರೆದುಕೊಳ್ಳುತ್ತಾ ಮುಗಿಲ ಸೂರ್ಯನೆಡೆಗೆ ನೋಡಿದ. ಬದಕೂರಿನ ಸೂರ್ಯ ಮಾಯಾವಿ ಕಾಂಕ್ರೀಟ್ ಹಕ್ಕಿಯ ರೆಕ್ಕೆಯಡಿ ಸಿಕ್ಕು ಅಸ್ತಗಂತನಾಗಿದ್ದ.

* * *

ಸೆರಗಿನಲ್ಲಿ ಕೆಂಗುಲಾಬಿಯ ಕೆಂಡ ಕಟ್ಟಿಕೊಂಡು ( ಕೆಂಗುಲಾಬಿ ಹುಟ್ಟಿ ಬೆಳೆದ ಬಗೆ)

ಕೆಂಗುಲಾಬಿಯ ಆತ್ಮ  ನನ್ನ ಮಸ್ತಕದ ಗರ್ಭದಲ್ಲಿ ಮೊಳಕೆ ಮೂಡಿ ಬೆಳೆಯುತ್ತಿರುವಾಗಲೆಲ್ಲಾ ನಾನು ತಳಮಳಕ್ಕೆ ಈಡಾಗುತ್ತ ಖಿನ್ನನಾಗುತ್ತಿದ್ದೆ. ಇದನ್ನು ಬರೆಯಬೇಕಾ ಬೇಡವಾ ಎಂದು ತಾಕಲಾಟದಲ್ಲಿಯೆ ಬಹಳಷ್ಟು ದಿನಗಳನ್ನು ದೂಡಿದೆ. ನಾನು ಬರೆಸಿಕೊಂಡೆ ತೀರುತ್ತೇನೆ ಎಂದು ಇದು ಹಟ ಹಿಡಿದಂತೆಲ್ಲಾ ನಾನು ಸೋಲುತ್ತ ಹಿಂದೆ ಸರಿಯುತ್ತಲೆ ಇದ್ದೆ.
ನನ್ನೊಡನೆ, ಶಾಲಿಗೆ ಬರುತ್ತಿದ್ದ, ರಜೆಯಲ್ಲಿ ಬಾಗಲಕೋಟೆಯ ನವನಗರ ನಿರ್ಮಾಣಕ್ಕೆ ಮಣ್ಣು ಹೊರಲು ಹಾಗೂ ಕಾಂಕ್ರೀಟ್ ಬಿಲ್ಡಿಂಗ್‌ಗಳಿಗೆ ನೀರು ಹೊಡೆಯಲು ಬರುತ್ತಿದ್ದ ದಟ್ಟಗೂದಲಿನ ನಿಳಜಡೆಯ ಯಮುನಾ ಇದ್ದಕಿದ್ದಂತೆ ಮಾಯವಾದಾಗ ನಾನು ದಿಗಿಲುಗೊಂಡು ನನ್ನೊಂದಿಗೆ ಕೆಲಸಕ್ಕೆ ಬರುತ್ತಿದ್ದ ನನ್ನ ಮಾವನನ್ನು ಕೇಳಿದ್ದೆ. ಮಾವ ನನ್ನಂಥ ಸಣ್ಣ  ಹುಡುಗನ ಮುಂದೆ ಹೆಚ್ಚು ಹೇಳಲಿಕ್ಕೆ ಹೋಗದೆ ಅಲ್ಲಿನೂ ಇದ ದಗದ ಮಾಡಾಕ ಹೋಗ್ಯಾರ ಅಂತ ನನ್ನ ಬಾಯಿ ಮುಚ್ಚಿಸಿದ್ದ. ಮಾವನ ವಾರಿಗೆಯ ಭರಮ್ಯಾ ವಿಚಿತ್ರವಾಗಿ ನಕ್ಕು ನನ್ನ ಕುತೂಹಲವನ್ನು ಮತ್ತಷ್ಟು ಕೆರಳುವಂತೆ ಮಾಡಿದ್ದ.
ಇಂತಿಪ್ಪ ಹುಡುಗಿ ಮುಂದೊಂದು ದಿನ ನಾಜೂಕಿನ ಮಿರ ಮಿರ ಮಿಂಚುಳ್ಳ ಬಟ್ಟೆ, ತುಟಿಗೆ ಗಾಡ ಬಣ್ಣ, ಕೆನ್ನೆಯ ಮೇಲೆ ಪುಟಿಯುವ ಮುಂಗುರುಳು ಬಿಟ್ಟುಕೊಂಡು ಹೈಹಿಲ್ಡ್ ಚಪ್ಪಲಿನೊಂದಿಗೆ ನಮ್ಮೂರ ಅಗಸಿ ಬಾಗಿಲು ಪ್ರವೇಶಿಸಿದಾಗ ನಾನು ನನ್ನ ಅದೇ ವಿಚಿತ್ರ ದಿಗಿಲಿನಲ್ಲಿ ಅವಳೆಡೆ ನೋಡುತ್ತ ನಿಂತಿದ್ದೆ. ಮುಖದಲ್ಲಿ ಮುಗುಳುನಗೆ ಹೊತ್ತಿದ್ದ ಹುಡುಗಿ ನನ್ನತ್ತ ಕುಡಿನೋಟವನ್ನು ಬೀರದೆ ಹಾಗೆ ಬಿರಬಿರನೆ ಮುಂದೆ ಹೋಗಿದ್ದಳು.
ನಾನು ಸಹ ಅವಳಂತೆ ದೂರ ದೇಶಕ್ಕೆ ಹೋಗಿ ದುಡಿಬೇಕು, ಅವಳಂಗೆ ಮಿರ ಮಿರ ಮಿಂಚುವ ಅಂಗಿ ಹಾಕ್ಕೊಂಡು ಬರಬೇಕು ಎಂದು ಚಿಂತಿಸುತ್ತಲೆ ಅವತ್ತಿನ ರಾತ್ರಿ ನಿದ್ರೆಯಿಲ್ಲದೆ ಉರುಳಾಡಿದ್ದೆ. ಬೆಳಗ್ಗೆ ನಾವು ಯಮುನಾಳಂತೆ ದುಡಿಯಲು ದೂರ ದೇಶಕ್ಕೆ ಹೋಗೋಣ ಎಂದು ಮಾವನ ಮನಗೆ ಹೋಗಿ ಹೇಳಿದರೆ, ಮಾವ ಕೆನ್ನೆಗೆ ಒಂದೆರಡು ಕೊಟ್ಟು  ಉರಿಯುವ ನೋಟ ಚೆಲ್ಲಿ ಬಿರಬಿರನೆ ಹೊರ ಹೋಗಿದ್ದ.
ಯಮುನಾ ವರ್ಷಕ್ಕೊಂದೆರಡು ಸಲ ಬಂದು ಹೋಗುವುದು ಮಾಡುತ್ತಿದ್ದಳು. ಆಕೆಯ ಮಾನಸಿಕ ದೈಹಿಕ ಬೆಳವಣಿಗೆ ವಿಚಿತ್ರ ವೇಗದಲ್ಲಿರುವುದು ನನ್ನನ್ನು ಅಚ್ಚರಿ ಮಾಡಿತ್ತು. ನಾನಿನ್ನು ಹೈಸ್ಕೂಲಿನಲ್ಲಿರುವಾಗಲೇ ಆಕೆ ಎರಡು ಮಕ್ಕಳ ತಾಯಿಯಾಗಿದ್ದಳು. ಊರಿಗೆ ಬಂದಾಗೊಮ್ಮೆ ಮಕ್ಕಳಿಗೆ ಚಂದದ ಬಟ್ಟೆ ತಂದು, ಉಣಿಸಿ ತಿನಿಸಿ ಮಾಡಿ ಮತ್ತೆ ತಿಂಗಳೊಪ್ಪತ್ತಿನಲ್ಲಿ ಮಾಯವಾಗುತ್ತಿದ್ದಳು.
ಮುಂದಿನ ಎಳೆಂಟು ವರ್ಷದ ನಂತರ ಮೈಯ್ಯಾಗ ಹುಷಾರಿಲ್ಲವೆಂದು ಊರಿಗೆ ಬಂದ ಯಮುನಾ ಊರಲ್ಲಿಯೆ ನೆಲೆಗೊಂಡು ದಿನದಿಂದ ದಿನಕ್ಕೆ ಕೃಶಳಾಗುತ್ತ ನಡೆದಳು. ಈಗೀಗಂತೂ ಅವಳು ಇವತ್ತೋ ನಾಳೆಯೋ ಎನ್ನುವಂತೆ ಮುಗ್ಗುಲು ನಾರುವ ಕೌದಿಯಲ್ಲಿ ಮಗ್ಗಲು ಬದಲಿಸುತ್ತಿದ್ದಾಳೆ. ಅವಳ ಮನೆಯ ದುಸ್ಥಿತಿ ಹೇಳತೀರದು. ಅವಳ ಆಸೆಯನ್ನು ಬಿಟ್ಟುಬಿಟ್ಟಿರುವ ಅವಳವ್ವ ಮೊಮ್ಮಗಳು ಚಿಮುನಾ ಬಲಿಯುವುದನ್ನೆ ಕಾಯುತ್ತಿದ್ದಾಳೆ. ಮತ್ತೊಂದು ಬಲಿ ಬೀಳುವುದಂತೂ ಗ್ಯಾರಂಟಿ.
ಇಂತಿಪ್ಪ ಊರಿನಲ್ಲಿ ದುಗುಡಗೊಳ್ಳುತ್ತಲೆ ಬೆಳೆದಿರುವ ನನಗೆ ಇಂತ ಯಮುನಾ ಚಿಮುನಾರು ಎಲ್ಲಿಗೆ ಹೊಕ್ಕಾರು ಏನು ಕೆಲಸ ಮಾಡತಾರು ಎನ್ನುವುದು ಒಗಟಾಗಿ ಕಾಡುತ್ತಲೆ ಇತ್ತು. ಉತ್ತರಗಳು ಸಿಕ್ಕರೂ ಅವುಗಳ ಸಂಕೀರ್ಣತೆ ನನ್ನನ್ನು ಬೆಚ್ಚವಂತೆ ಮಾಡುತ್ತಿತ್ತು. ಇದರ ಬಗ್ಗೆ ಬರೆಯಬೇಕೋ ಬೇಡವೊ ಎಂದು ಚಿಂತಿಸುತ್ತಲೆ ಇದ್ದೆ. ಯಮುನಾ-ಚೀಮುನಾರ ಆತ್ಮಗಳು ನನ್ನೊಳಗೆ ಗಾಯವಾಗಿ ಮೂಡಿ ಹುಣ್ಣಾಗಿ ಬಲಿತು ನನ್ನನ್ನೆ ನುಂಗುವಂತೆ ಬೆಳೆಯುತ್ತಲಿದ್ದವು.ಹುಣ್ಣಿನೊಳಗಿನ ಕೀವನ್ನು ಹೊರಗೆ ಹಾಕಲೇ ಬೇಕಿತ್ತು.
ನನ್ನೊಳಗಿದ್ದ ತಹತಹಿಕೆಯನ್ನು ಮೊದಲು 'ಕತ್ತಲಗರ್ಭದ ಮಿಂಚು' ಕಥೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿ ಆ ಕಥೆಯನ್ನು ಕರವೇ ನಲ್ನುಡಿ ಪತ್ರಿಕೆಯ ಕಥಾ ಸ್ಪರ್ಧೆಗೆ ಕಳುಹಿಸಿಕೊಟ್ಟಿದ್ದೆ. ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಆ ಕಥೆ ಪ್ರಕಟವೂ ಆಯಿತು. ಆಗ ರಾಜ್ಯಾದ್ಯಂತ ಈ ಕಥೆಯ ಬಗ್ಗೆ ಬಂದ ಪ್ರತಿಕ್ರಿಯೆಗಳು ನನ್ನನ್ನು ದಿಗ್ಮೂಡಗೊಳಿಸಿದವು. ಲೈಂಗಿಕ ವೃತ್ತಿಯಲ್ಲಿರುವ ನಾಲ್ಕಾರು ಮಹಿಳೆಯರೇ ನನ್ನೊಂದಿಗೆ ಮಾತನಾಡಿ 'ಸತ್ಯ ಬರೆದಿದ್ದೀರಿ' ಎಂದು ಅತ್ತು ಕರೆದು ಮಾಡಿದರು. ಈ ವೃತ್ತಿಯ ಬಗ್ಗೆ ನನ್ನೊಳಗಿದ್ದ ತಹತಹಿಕೆಯನ್ನು 'ಕತ್ತಲಗರ್ಭದ ಮಿಂಚು' ಕಥೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿ ಆ ಕಥೆಯನ್ನು ಕರವೇ ನಲ್ನುಡಿ ಪತ್ರಿಕೆಯ ಕಥಾ ಸ್ಪರ್ಧೆಗೆ ಕಳುಹಿಸಿಕೊಟ್ಟಿದ್ದೆ. ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಆ ಕಥೆ  ಪ್ರಕಟವೂ ಆಯಿತು. ಆಗ ರಾಜ್ಯಾದ್ಯಂತ ಈ ಕಥೆಯ ಬಗ್ಗೆ ಬಂದ ಪ್ರತಿಕ್ರಿಯೆಗಳು ನನ್ನನ್ನು ದಿಗ್ಮೂಡಗೊಳಿಸಿದವು. ಲೈಂಗಿಕ ವೃತ್ತಿಯಲ್ಲಿರುವ ನಾಲ್ಕಾರು ಮಹಿಳೆಯರೇ ನನ್ನೊಂದಿಗೆ ಮಾತನಾಡಿ 'ಸತ್ಯ ಬರೆದಿದ್ದೀರಿ' ಎಂದು ಅತ್ತು ಕರೆದು ಮಾಡಿದರು.
ಇದನ್ನು ವಿಸ್ತರಿಸಿ ಕಾದಂಬರಿಯ ಚೌಕಟ್ಟನ್ನು ತೊಡಿಸಬೇಕೆನಿಸಿತು. ಬರೆದು ಐದಾರು ತಿಂಗಳು ಗತಿಸಿದ್ದರೂ ಪ್ರಕಟಿಸಬೇಕೋ, ಬೇಡವೋ ಎಂಬ ಒಂದು ಬಗೆಯ ಕೀಳರಿಮೆಯ ಸಂಕೋಚದಲ್ಲಿ ಇದ್ದೆ. ಇದನ್ನು ಓದಿದ ಮಿತ್ರರು ಧೈರ್ಯ ತುಂಬಿದ್ದರಿಂದ ಈ ಕೃತಿ ಹೊರ ಬರುತ್ತಿದೆ. ದಿನದ ಕೆಲಸದ ಒತ್ತಡದ ನಡುವೆಯೂ ಎರಡ್ಮೂರು ತಿಂಗಳುಗಳಲ್ಲಿ ಬರೆದು ಮುಗಿಸಿದೆ. ಅದಾಗಿ ಐದಾರು ತಿಂಗಳು ಬರೆದದ್ದನ್ನು ಮುಚ್ಚಿಟ್ಟು ಸುಮ್ಮನಾಗಲು ಪ್ರಯತ್ನಿಸುತ್ತಿದ್ದೆ. ಅದು ಸಾಧ್ಯವಾಗದೆ ಮೂರ‍್ನಾಲ್ಕು ಗೆಳೆಯರಿಗೆ ಸುಮ್ಮನೆ ಮೇಯ್ಲ್ ಮಾಡಿದೆ. ಅದರಲ್ಲಿ ಮರುದಿವೇ ಪ್ರತಿಕ್ರಿಯಿಸಿದ್ದ ಕಾರ್ಪೇಂಟರ್ ಈ ಕೃತಿಯನ್ನು ಈ ವರ್ಷವೇ ತಂದು ಬಿಡೋಣ ಎಂದು ಬೆನ್ನಿಗೆ ಬಿದ್ದ. ಸರಿ ಅನ್ಕೊಂಡು ಕಷ್ಟಪಟ್ಟು ಕೊಂಡು ತಂದೆಬಿಟ್ಟೆವು.
ಅತ್ಯಂತ ಹೆಚ್ಚು ಲೈಂಗಿಕ ಕಾರ್ಯಕರ್ತರು, ದೇವದಾಸಿಯರನ್ನು  ಮತ್ತು ೧೭ ಸಾವಿರ ಎಚ್‌ಐವಿ ಮತ್ತು ಏಡ್ಸ್ ಪೀಡಿತರು (ರಾಜ್ಯ  ಮಹಿಳಾ ಮತ್ತು ಮಕ್ಕಳ ಆಯೋಗದ ಸಮೀಕ್ಷೆ ಪ್ರಕಾರ) ನಮ್ಮ ಬಾಗಲಕೋಟೆ ಜಿಲ್ಲೆಯಲ್ಲಿದ್ದಾರೆ. ಯಮುನಾಳಂತೆ ತಮ್ಮ ಹರೆಯದ ಕಾಲದಲ್ಲಿ ತಮ್ಮ ಮನೆ ಬಿಟ್ಟು ಮಾಯವಾಗುತ್ತಿದ್ದ ನನ್ನೂರು ಮತ್ತು ನೆರೆಯ ಹಳ್ಳಿಗಳ ಹುಡುಗಿಯರ ಬದುಕು ಎಲ್ಲಿ ಹೋಗಿ ದಡ ಸೇರುತ್ತಿತ್ತು ಎಂಬುದು ನನ್ನ ಬಾಲ್ಯದಲ್ಲಿ ಕಾಡಿಸುತ್ತಿದ್ದ ಬಹುಮುಖ್ಯ ಪ್ರಶ್ನೆಯಾಗಿತ್ತು. ಈ ಪ್ರಶ್ನೆಯೇ ಈ ಕಾದಂಬರಿಯುದ್ದಕ್ಕೂ ಹರಿದಾಡುತ್ತಾ ಓದುಗರಲ್ಲೂ ಬೆಳೆಯತೊಡಗುತ್ತದೆ. ಈ ಪ್ರಶ್ನೆಯ ಚುಂಗನ್ನು ಹಿಡಿದು ಎನ್‌ಜಿಓ ಸಹದ್ಯೋಗಿಗಳಿಗೆ ಅಂಗಲಾಚಿ, ಹುಬ್ಬಳ್ಳಿಯ ದಂಧೆ ಮನೆಗಳಿಗೆ, ಲೈಂಗಿಕ ಕಾರ್ಯಕರ್ತರ ಪ್ರತಿಭಟನಾ ಸ್ಥಳಗಳಿಗೆ ಅಲೆದಾಡಿದ್ದೇನೆ. ಬೆಂಗಳೂರಿನ ಸಂಗಮ ಕಚೇರಿಗೆ ಹೋಗಿ ಲೈಂಗಿಕ ಕಾರ್ಯಕರ್ತರೊಂದಿಗೆ ಸಂದರ್ಶನ ನಡಿಸಿದ್ದೇನೆ. ಹುಬ್ಬಳ್ಳಿಯ ಹಳೆ ಬಸ್ ನಿಲ್ದಾಣ ಮುಂಭಾಗದ ರಸ್ತೆ, ಬೆಂಗಳೂರಿನ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್‌ಗಳ ರಸ್ತೆಗಳಲ್ಲಿ ಸಂಕೋಚ ತೊರೆದು ಅಡ್ಡಾಡಿದ್ದೂ ಇದೆ.
ಇಲ್ಲಿ ನಾನು ಲೈಂಗಿಕವೃತ್ತಿ ಸರಿ ಅಥವಾ ತಪ್ಪು ಎಂದು ವಾದಿಸಲು ಹೋಗಿಲ್ಲ. ಈ ಕೃತಿ ಓದಿದ ನಂತರ ನಿಮ್ಮೊಳಗಡೆ ಮೂರ್ತಗೊಳ್ಳುವ ತೀರ್ಮಾನಕ್ಕೆ ನೀವೇ ಜವಾಬ್ದಾರರು! ಲೈಂಗಿಕ ವೃತ್ತಿಯ ಜಗತ್ತಿನಲ್ಲಿ ತುತ್ತು ಅನ್ನಕ್ಕಾಗಿ ಕಾರ್ಯಕರ್ತೆಯರು ನಡೆಸುವ ನಿರಂತರ ಹೋರಾಟದ ಬದುಕನ್ನು ವಿವರಿಸುವ ಕೆಲಸವನ್ನಷ್ಟೆ ಮಾಡಿದ್ದೇನೆ. ಇದು ಗರ್ಭಗಟ್ಟುವ ಸಮಯದಲ್ಲಿ ನನಗನ್ನಿಸಿದ್ದೇನೆಂದರೆ; ಪ್ರಕೃತಿಯ ಎಲ್ಲ ಜೀವಿಗಳಿಗೆ ಊಟ-ನೀರಡಿಕೆಯಷ್ಟೇ ಮೈಥುನವು ಪ್ರಾಥಮಿಕ ಅಗತ್ಯ ಮತ್ತು ನಿಸರ್ಗ ನಿಯಮ. ಅದನ್ನು ಬಂಸಲು ಹೋದಷ್ಟು ಅಪಾಯ ಹೆಚ್ಚು. ಬಂಸಿದ್ದರ ಪ್ರತಿರೋಧವಾಗಿ, ಈ ಅಮಾಯಕ ಹುಡುಗಿಯರು ಈ ವಿಷವರ್ತುಲದಲ್ಲಿ ಸಿಲುಕುತ್ತಿದ್ದಾರೆ. ಅವರು ನಮ್ಮಂಥವರ ತಾಯಿ, ಮಗಳು, ಹೆಂಡತಿ, ಅಕ್ಕ-ತಂಗಿಯರಾಗಬಹುದಿತ್ತು. ಇದೆಲ್ಲದಕ್ಕೂ ಅವಕಾಶವಾಗದೆ ಅವರು ಬೀದಿಗಿಳಿಯಬೇಕಾಗಿ ಬಂದದ್ದು ದುರಂತ ಸತ್ಯ.
ವೇಶ್ಯಾವೃತ್ತಿಯ ಬಗ್ಗೆ ಕನ್ನಡದಲ್ಲಿ ಇದೇ ಮೊದಲ ಕೃತಿಯೇನಲ್ಲ. ಈ ಮೊದಲು ಬಸವರಾಜ ಕಟ್ಟಿಮನಿಯವರ 'ಬೀದಿಗೆ ಬಿದ್ದವಳು', ಎಂ.ಕೆ.ಇಂದಿರಾ ಅವರ 'ಗೆಜ್ಜೆಪೂಜೆ', ತರಾಸು ಅವರ 'ಮಸಣದ ಹೂವು' ಸೇರಿದಂತೆ ಇನ್ನೂ ಹಲವಾರು ಕೃತಿಗಳು ಬಂದಿವೆ. ತನ್ನೊಳಗೆ ಸಾವಿರಾರು ಕಥಾ ವಸ್ತುಗಳನ್ನು ಸದಾ ಹುಟ್ಟಿಸುವ ಫಲವಂತಿಕೆಯ ಭೂಮಿ ಈ ವೇಶ್ಯಾ ಜಗತ್ತು. ಈ ಜಗತ್ತಿನ ವರ್ತಮಾನದ ತಲ್ಲಣಗಳಿಗೆ ಇಲ್ಲಿ ಕನ್ನಡಿ ಹಿಡಿಯಲಾಗಿದೆ ಅಷ್ಟೇ.
೨ನೆ ಮುದ್ರಣಕ್ಕೆ ಮುನ್ನ: 'ಕೆಂಗುಲಾಬಿ' ಬಿಡುಗಡೆಯಾದ ಮೂರ‍್ನಾಲ್ಕು ತಿಂಗಳುಗಳಲ್ಲಿಯೇ ಮೊದಲ ಮುದ್ರಣದ ಪ್ರತಿಗಳು ಖರ್ಚಾದುದರಿಂದ ಆಗಲೇ ಎರಡನೆ ಮುದ್ರಣವನ್ನು ತರಬೇಕಿತ್ತು. ಆದರೆ, ಮೊದಲ ಮುದ್ರಣದ 'ಕೆಂಗುಲಾಬಿ' ಹಲವೆಡೆ ಇನ್ನಿಲ್ಲದ ಚಲುವಿನಿಂದ, ಮತ್ತೇರಿದ ರಕ್ತಗೆಂಪಿನಿಂದ ಕಂಗೊಳಿಸಿದರೆ, ಕೆಲವೆಡೆ ಪತ್ರಿಕಾ ವರದಿಯಂತೆ ಸೊರಗಿರುವುದು ನನ್ನ ಕೃತಿಯ ಬಗ್ಗೆ ನಾನು ಒಪ್ಪಿಕೊಳ್ಳಲೇಬೇಕಾದ ಸತ್ಯ. ಪತ್ರಕರ್ತನಾಗಿ ದಿನದ ಒತ್ತಡದಲ್ಲಿ ಪ್ರತಿದಿನ ಸಿಗುವ ಒಂದೆರಡು ಗಂಟೆಯಲ್ಲಿ 'ಕೆಂಗುಲಾಬಿ' ರಚಿಸಿದ್ದರಿಂದ ಅದರ ಇತಿಮಿತಿಗಳು ನನಗೆ ಮೊದಲೇ ಮನವರಿಕೆಯಾಗಿದ್ದವು. ಆ ಇತಿಮಿತಿಗಳ ಮಧ್ಯೆಯೂ ನಾಡಿನಾಧ್ಯಂತ ಕನ್ನಡದ ಓದುಗರು ಕೆಂಗುಲಾಬಿಯ ಪರಿಮಳವನ್ನು ಇಷ್ಟಪಟ್ಟಿದ್ದು ದೊಡ್ಡ ಸಂಭ್ರಮ.
ಶಿವಮೊಗ್ಗದ ಕರ್ನಾಟಕ ಸಂಘವು ಈ ಕೃತಿಗೆ ನನ್ನ ನೆಚ್ಚಿನ ಸಾಹಿತ್ಯ ಕುವೆಂಪು ಹೆಸರಿನಲ್ಲಿ ಕಾದಂಬರಿ ಪ್ರಶಸ್ತಿ, ಬಾಗಲಕೋಟೆಯ ಜಿಲ್ಲಾ ಕಸಾಪ ಸಮೀರವಾಡಿ ದತ್ತಿ ಪ್ರಶಸ್ತಿ ಮತ್ತು ದಲಿತ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗಳು ಈ ಗುಲಾಬಿ ಪರಿಮಳದ ಕಂಪನ್ನು ಮತ್ತಷ್ಟು ಹೆಚ್ಚುವಂತೆ ಮಾಡಿವೆ.
ಬೆಂಗಳೂರಿನಲ್ಲಿ ಬಿಡುಗಡೆಯ ದಿನವೇ ಇನ್ನೂರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದವು. ನಮ್ಮ ಹಿರಿಯ ಮಿತ್ರ ಲಕ್ಷ್ಮಿ ನಾರಾಯಣ ನಾಗವಾರ್ ಅವರು ನನ್ನ ತವರು ಜಿಲ್ಲೆ ಬಗಾಲಕೋಟೆಯ ಬೀಳಗಿಯಲ್ಲಿ ಡಿಎಸ್‌ಎಸ್‌ನ ಕಾರ್ಯಾಗಾರದಲ್ಲಿ ಗದುಗಿನ ತೋಂಟದ ಶ್ರೀ ಗಳಿಂದ ಬಿಡುಗಡೆ ಮಾಡಿಸಿ ನೂರಕ್ಕೂ ಹೆಚ್ಚು ಪ್ರತಿಗಳು ಖರ್ಚು ಮಾಡಿಸಿದರು.
ಸೂಕ್ಷ್ಮ ಸಂವೇದನೆಯ ಕಥೆಗಾರ ಗೆಳೆಯ ಬಿ.ಶ್ರೀನಿವಾಸ್ ಅಲ್ಲಿನ ಜಿಲ್ಲಾ ಕಸಾಪ ಮತ್ತು ಓದುಗರ ವೇದಿಕೆಯ ಆಶ್ರಯದಲ್ಲಿ ಹಾವೇರಿಯಲ್ಲಿ ಕೆಂಗುಲಾಬಿ ಕುರಿತು ದೊಡ್ಡಮಟ್ಟದ ವಿಚಾರಸಂಕಿರಣ ಹಮ್ಮಿಕೊಂಡರು. ಕರ್ನಾಟಕ ಜನಶಕ್ತಿಯ ಪುಸ್ತಕ ಮನೆಯ ಗೆಳೆಯರಾದ ಮಲ್ಲಿಗೆ, ಡಾ.ವಾಸು, ನಾಗಮಂಗಲ ಕೃಷ್ಣಮೂರ್ತಿ ಮುಂತಾದವರು ಮಂಡ್ಯ ಜಿಲ್ಲೆಯಲ್ಲಿ ಮತ್ತು ಹಿರಿಯ ಕವಿ ರಾಮಲಿಂಗಪ್ಪ ಟಿ.ಬೇಗೂರು ಅವರ ನೇತೃತ್ವದಲ್ಲಿ ಕ್ರೀಯಾಶೀಲವಾಗಿರುವ ಪರಸ್ಪರ ಬಳಗವು ಬೆಂಗಳೂರಿನಲ್ಲಿ ಮಹಾರಾಣಿ ಕಾಲೇಜಿನಲ್ಲಿ ಅರ್ಥಪೂರ್ಣ ಸಂವಾದ ಕಾರ್ಯಕ್ರಮ ನಡೆಸುವ ಮೂಲಕ ಕೆಂಗುಲಾಬಿ ಪರಿಮಳ ಪಸರಿಸುವುದಕ್ಕೆ ನೆರವಾದರು.
ಹಿರಿಯರಾದ ಪ್ರೊ.ಶಿವರಾಮಯ್ಯ ರಚಿಸಿರುವ ವೇಶ್ಯಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ನಡೆದ ಬಂದ ದಾರಿ' ಕೃತಿ ಕನ್ನಡದಲ್ಲಿಯೇ ವಿಭಿನ್ನ ನೆಲೆಯ ಸಂಗ್ರಹಯೋಗ್ಯ ಕೃತಿ. ಆ ಕೃತಿಯಲ್ಲಿ 'ಕೆಂಗುಲಾಬಿ'ಯನ್ನೂ ವಿಶ್ಲೇಷಿಸಿ ಒಂದು ಅಧ್ಯಾಯ ಸೇರಿಸಿದ್ದಾರೆ. ಇನ್ನುಳಿದಂತೆ, ಉದಯವಾಣಿ, ವಿಜಯವಾಣಿ, ವಿಜಯ ಕರ್ನಾಟಕ, ಬೆಂಗಳೂರು ಮಿರರ್, ವಾರ್ತಾಭರತಿ, ಗೌರಿ ಲಂಕೇಶ್, ಅಗ್ನಿ, ಸಂವಾದ, ಹೊಸತು ಪತ್ರಿಕೆಗಳಲ್ಲಿ, ಅವ, ಕೆಂಡಸಂಪಿಗೆಯ ವೆಬ್ ಮ್ಯಾಗಜಿನ್‌ಗಳಲ್ಲಿ ಕೃತಿಯ ಪರಿಚಯಾತ್ಮಕ ಲೇಖನ ಹಾಗೂ ಕೃತಿಯ ಆಯ್ದ ಭಾಗದ ಲೇಖನಗಳು ಪ್ರಕಟಗೊಂಡು ಓದುಗರಿಗೆ ತಲಪಿಸುವ ಜವಾಬ್ದಾರಿ ನಿರ್ವಹಿಸಿವೆ.
ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಪಾಲು ದೊಡ್ಡದು. ಆ ಕಾರ್ಯಕ್ರಮದವು ಕೆಂಗುಲಾಬಿ ಕೃತಿಯನ್ನು ಪರಿಚಯಿಸಿದ್ದಲ್ಲದೆ ನನ್ನನ್ನೆ ಕರೆಸಿ ಕೃತಿ ಬಗ್ಗೆ ಮಾತಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.
ಪ್ರಥಮ ನಿರೂಪಣೆಯ ಅವಾಂತರ: ಕೃತಿಗೆ ಕಾದಂಬರಿ ಎಂದು ಹೆಸರಿಟ್ಟಿದ್ದರೂ ಕೂಡ ಅದು ನನ್ನದೆ ಆತ್ಮಕಥೆಯೆಂದೂ ತಪ್ಪಾಗಿ ಭವಿಸಿ ಕೆಲವು ಕರೆಗಳು ಬಂದವು ಒಂದು ವೇಳೆ ಇದು ಆತ್ಮಕಥೆಯಾಗಿದ್ರೆ ಈ ಕೃತಿಗೆ ಇನ್ನಷ್ಟು ತೂಕ, ಮತ್ತಷ್ಟು ಪ್ರಚಾರ ಸಿಗುತ್ತಿತ್ತು. ನಾನು ಮೊದಲನೆ ಕೃತಿಯಲ್ಲಿಯೇ ಹೇಳಿಕೊಂಡಂತೆ ನಮ್ಮ ಭಗದ ಎಳೆಯ ಹುಡುಗರು ಪತ್ತೆಯೇ ಇಲ್ಲದಂತೆ ಮಾಯವಾಗುತ್ತಿದ್ದುದರ ಹಿಂದಿನ ತಳಮಳ, ಎನ್‌ಜಿಓಗಳಲ್ಲಿ ಕೆಲಸ ಮಾಡುವಾಗಿನ ಜೀವಂತ ಶಾರಿಯರ ಅನುಭವಗಥೆಗಳು ಮತ್ತು ಓದುವುದರಿಂದ ದಕ್ಕಿದ ಒಳಸುಳಿಗಳನ್ನು 'ಶಾರಿ' ಎಂಬ ಒಂದೆ ಪಾತ್ರಕ್ಕೆ ಅಳವಡಿಸಿ ಈ ಕೃತಿ ರಚಿಸಿದ್ದೇನೆ.
ಚಂದನ ವಾಹಿನಿಯಲ್ಲಿ ಕೃತಿ ಪರಿಚಯ ಪ್ರಸಾರವಾದ ಮರುದಿನವಂತೂ ನೀವು ನಿಜವಾಗಲೂ ದೇವದಾಸಿ ಕುಟುಂಬದವರೇ ಎಂದು ಪ್ರಶ್ನಿಸುವ ಕರೆಗಳು ಬಂದವು. ನಾನು ಅವರಿಗೆ ಸ್ಪಷ್ಟನೆ ನೀಡಿ ಸಾಕಾಯಿತು. ಒಬ್ಬನಂತೂ ನಿಮ್ಮನ್ನು ದೇವದಾಸಿ ಮಗನೆಂದೂ ಪರಿಚಯಿಸಿದವರು ವಿರುದ್ಧ ಮಾನನಷ್ಟ ಮೊಖದ್ದಮೆ ಹೂಡಿ ಎಂದು ತನ್ನ ಅತಿ ಬುದ್ಧಿವಂತಿಕೆಯನ್ನು ತೋರಿಸಿದ. ನಾನು ನನ್ನ ಇರಿಸುಮುರಿಸುನ್ನು ಪ್ರಕಟಿಸುತ್ತಲೇ ನಾನು ಹಾಗೇನಾದರೂ ಮಾಡಿದರೆ ದೇವದಾಸಿಯ ಮಗನು ನ್ಯಾಯಯುತ ಬದುಕುವ ಹಕ್ಕಿಗೆ ಅವಮಾನ ಮಾಡಿದಂತಾಗುತ್ತದೆ. ಅದು ಗೊತ್ತಾಗದೆ ಘಟಿಸಿರುವಂಥದ್ದು ಎಂದು ಸ್ಪಷ್ಟಪಡಿಸಿದ ನಂತರ ಆತ ತೆಪ್ಪಗಾದ.
ನಾನು ಲಂಕೇಶ್ ಅವರ ಅಕ್ಕ, ಶಿವರಾಮ ಕಾರಂತರ ಮೈ ಮನಗಳ ಸುಳಿಯಲಿ ಬರುವ ಪಾತ್ರಗಳ ಪ್ರಥಮ ನಿರೂಪಣೆಯಿಂದ ಪ್ರೇರಿತನಾಗಿ ಬರೆದಿರುವಂಥದ್ದು. ಕಥೆಯ ಪಾತ್ರವೇ ನಾನಾಗಿ ಹೇಳಿದರೆ, ಗೆಳೆಯನೊಬ್ಬ ಪಕ್ಕದಲ್ಲಿ ಕುಳಿತು ತನ್ನ ಕಷ್ಟಸುಖಗಳನ್ನು ಹೇಳಿಕೊಳ್ಳುವಾಗಿನ ಆಪ್ತತೆ ಇರುತ್ತದೆ ಎಂದು ನಾನು ಈ ತಂತ್ರವನ್ನು ಅನುಸರಿಸಿದ್ದೇನೆ ಅಷ್ಟೆ. ಇಲ್ಲಿನ ಕೇಂದ್ರ ಪಾತ್ರಗಳೆಲ್ಲವೂ ತಮ್ಮ ಗತಿಸಿದ ಕಥೆ ತಾವೇ ಹೇಳುತ್ತಲೇ, ಹಳೆಯ ನೆನಪುಗಳನ್ನು ಕೆದಕುತ್ತಲೇ ಕಥೆಯನ್ನು ಬೆಳೆಸುತ್ತವೆ.