ದಿನದ ಕೆಲಸ ಮುಗಿಸಿ ಜಗದ ಚಿಂತೆ ಮರೆತು ಆ ರಾತ್ರಿ ಉಂಡು ಮಲಗುವುದರಲ್ಲಿದ್ದ ಬದುಕೂರಿನ ಜನ ತಳವಾರನ ಡಣ್ ಡಣ್ ಡಂಗುರದಿಂದ ಎಚ್ಚರಗೊಂಡು ಕಿವಿ ನೆಟ್ಟಗಾಗಿಸಿದರು. ಎಲೆಡಕೆ ರೊಜ್ಜು ಎಲ್ಲಿ ಉಗುಳಬೇಕು ಅನ್ನೋ ತರಾತುರಿಯಲ್ಲಿದ್ದ ಹಿರಿಕರು, ಉಂಡ ಪಾತ್ರೆ ಮುಂಜಾನೆ ತೊಳೆಯಲೋ ಈಗ ತೊಳೆಯಲೋ ಎಂದು ಬೇಸರಿಸುತ್ತಿದ್ದ ಹೆಂಗಸರು, ಹಾಸಿಗೆಯಲಿ ಕುಳಿತು ಹೆಂಡತಿಯ ಬರುವಿಕೆಗಾಗಿ ಹಸಿವಿನಿಂದ ಕಾಯುತ್ತಿದ್ದ ಗಂಡಂದಿರು, ಅದಾಗಲೆ ಹಾಸಿಗೆಯಲ್ಲಿ ಬಿದ್ದುಕೊಂಡು ಕನಸಿನಲ್ಲಿ ತನ್ನನಿಯರ ಬರಮಾಡಿಕೊಳ್ಳಲು ಹಾತೊರೆಯುತ್ತಿದ್ದ ಹುಡುಗಿಯರು, ಓದಲಾರದೆ ಬೇಸರಿಸಿಕೊಳ್ಳುತ್ತಿದ್ದ ಸಾಲಿ ಹೈಕಳು ಇತ್ಯಾದಿಯವರಿಗೆಲ್ಲ ತಮ್ಮ ಕೆಲಸಕ್ಕೆ ಎಳ್ಳುನೀರು ಬೀಡಲು ಈ ಒಂದು ಡಂಗುರ ನೆಪವಾಯಿತಷ್ಟೆ. ಆ ದಿವ್ಯ ಮೌನದಲ್ಲಿ `ಕೇಳ್ರೆಪೋ ಕೇಳ್ರಿ, ನಾಳೆ ಎಮ್ಮೆಲ್ಲೆ ಬರತಾರಂತ. ಪ್ಯಾಕ್ಟರಿ ಕಟ್ಟಾಕ ಹೊಲ ಕೊಡತಿನಿ ಅನ್ನೋರು ಗುಡಿ ಮುಂದ ಮೀಟಿಂಗ್ ಸೇರಬೇಕಂತಪೆÇೀ' ಎಂಬ ವಾಕ್ಯಗಳು ಕೆಲವರಲ್ಲಿ ವಿಷಾದವನ್ನು, ಹಲವರಲ್ಲಿ ಆಸೆಯ ಮಿಂಚೊಂದನ್ನು ಹುಟ್ಟಿಸಿ ಆ ಕಗ್ಗತ್ತಲ ರಾತ್ರಿಯೆಲ್ಲ ಹೆಮ್ಮರದಂತೆ ಬೆಳೆಸತೊಡಗಿತು.
ಇನ್ನೂರಾ ಹನ್ನೊಂದು ಮನೆಗಳಿರುವ ಬದುಕೂರಿನ ಜನ ಹೆಚ್ಚಾಗಿ ಒಕ್ಕಲುತನ ಅವಲಂಭಿಸಿದವರು. ಊರು ಹಿಂದೆ ದನಕರುಗಳಿಗೆ ಆಶ್ರಯವಾಗಿ ಮುಳ್ಳುಪೆÇದೆಗಳ ಗುಡ್ಡವಿದ್ದರೆ, ಊರ ಮುಂದೆ ಜನರಿಗೆ ಕೆಮ್ಮಣ್ಣಿನ ಮಸಾರಿ ಕಣ್ಣೋಟದುದ್ದಕ್ಕೂ ಮಲಗಿಕೊಂಡಿದೆ. ತನ್ನ ಬೆನ್ನ ಮೇಲೆ ನೂರಾರು ತರಹದ ಕಾಳುಕಡಿ ಬೆಳೆಸಿಕೊಂಡು ಸಹಸ್ರ ವರ್ಷಗಳಿಂದ ಬದುಕೂರಿನ ಜನರಿಗೆ ಊಟ ಹಾಕುತ ಬಂದಿದ್ದ ಈ ವiಸಾರಿಯನ್ನೆ ಎಮ್ಮೆಲ್ಲೆ ವಿಕಾಸಪ್ಪನೋರು ಪ್ಯಾಕ್ಟರಿ ಕಟ್ಟಿಸೋರಿಗೆ ಮಾರಿಸಿ ರೈತರಿಗೆ ಟ್ರಂಕ್ ತುಂಬಾ ರೊಕ್ಕ ಕೊಡಿಸುವುದಾಗಿ ಹತ್ತಾರು ವರ್ಷಗಳ ಹಿಂದೆಯೇ ಹೇಳಕೋತ ಬಂದಿದ್ರು. ಯಾವತ್ತೋ ಬರಲಿರುವ ಗುಮ್ಮನಿಗಾಗಿ ಯಾಕೆ ತಲೆ ಕೆಡಿಸಿಕೊಳ್ಳಬೇಕೆಂದು ತಮ್ಮ ನಿತ್ಯ ಜಂಜಾಟದಲ್ಲಿಯೇ ರೈತ ಜನ ಮೈ ಮರೆತಿದ್ದರು. ಆ ಗುಮ್ಮ ನಾಳೆ ಒಕ್ಕರಿಸುವುದೆಂಬ ಡಂಗುರ ಕೇಳಿ ಕೆಲವರು ಕೈ ತುಂಬಾ ದುಡ್ಡು ಎನಿಸುವ ಕಾತರದಲ್ಲಿ ಕನಸು ಕಾಣತೊಡಗಿದರೆ, ಹಲವರು ಬದುಕೆ ಆಗಿರುವ ಹೊಲ ಕಳೆದುಕೊಳ್ಳುವ ದುಗುಡದಲ್ಲಿ ಹಾಸಿಗೆಯಲ್ಲಿ ಬಿದ್ದು ಹೊರಳಾಡುತ್ತಾ ನಿದ್ದೆ ಇಲ್ಲದೆ ಅವತ್ತಿನ ರಾತ್ರಿ ಕಳೆದರು.
*
ತಮ್ಮ ಮನಿತನವೂ ಅಡಿವ್ಯಾಗ ಅಂಗೈ ಅಗಲ ಹೊಲ ಇರುವಂಥದೂ ಆಗಬೇಕು ಅಂತ ಕಲ್ಯಾನ ತಾತ ಮುತ್ತಾತರೆಲ್ಲ ಕನಸು ಕಾಣಕೋತನ ಮಣ್ಣಾಗ ಹೋಗಿದ್ರು. ಆದ್ರ ಕಲ್ಯಾನ ಅಪ್ಪ ಯಮುನ್ಯಾ ಮಾತ್ರ ಹ್ಯಾಂಗಾರೂ ಮಾಡಿ ಊರ ಭೂಮ್ಯಾಗ ಒಂದಿಟ ಜಮೀನು ಗಳಿಸಬೇಕು ಅಂತ ದನ್ಯಾರ ಮನ್ಯಾಗ ಮನಿ ಮಗನ್ಹಂಗ ಹಗಲು ರಾತ್ರಿ ದುಡಿತಿದ್ದ. `ದಣ್ಯಾರ್ರ, ತಾಮ್ರ ದುಡ್ಡು ತಂದಿ ಮಕ್ಕಳ ಸಂಬಂಧ ಕೆಡಿಸಿತಂತ, ನನಗ ನೀವು ರೊಕ್ಕ ರುಪೈ ಕೊಡಬ್ಯಾಡ್ರಿ. ನನ್ನ ಹೆಸರಿಲೆ ನಿಮಗ ಏಟು ತಿಳಿತೈತಿ ಅಟ ಜಮೀನು ಹಚ್ರಿ' ಅಂತ ಯಾವಾಗಲೂ ದಣ್ಯಾರಿಗೆ ಹೇಳಕೋತನ ಇದ್ದ. ಉದಾರಿಗಳಾಗಿದ್ದ ದಣ್ಯಾರು ಸೈತ ಹೊಲ ಹಚ್ಚತೇನಂತ ಹೆಳಕೋತನ ಬಂದಿದ್ದರು.
ಆದ್ರ ಒಂದಿನ ಧಣ್ಯಾರು ಹಾವು ಮುಟ್ಟಿದ ನೆಪ ಮಾಡಕೊಂಡು ಹೊಲದಿಂದ ಮನೆಗೆ ಸತ್ತ ಹೆಣ ಆಗಿಯೇ ಬಂದರು. ಮುಂದನೂ ಅದ ಮನ್ಯಾನ ಯಮುನ್ಯಾ ಹತ್ತಾರು ವರ್ಷ ದುಡಿದ ಖರೆ. ಆದರ ಗೌಡ್ರ ಮಗ ಅಂದ್ರ ಈಗಿನ ವಿಜ್ಯಪ್ಪನೋರು ತಮ್ಮ ರಾಜಕಾರಣದ ಗಮ್ಮತ್ತಿನ್ಯಾಗ ಹೊಲ ಹಚ್ಚೋ ಸುದ್ದಿನ ತೆಗಿಲಿಲ್ಲ. ಆದ್ರ ವರ್ಷಕ್ಕ ಎರಡ ಜೊತೆ ವಲ್ಲಿ, ಮಂಡಂಗಿ, ರಬ್ಬಲ್ ಕಾಲ್ಮರಿ, ಅರಕಳಿ ಚೀಲ ಜ್ವಾಳ, ಖರ್ಚಿಗೆ ನೂರಿಪ್ಪತ್ತು ರೂಪೈ ಕೊಡುದು ತಪ್ಪಿಸಿರಲಿಲ್ಲ.
ಹ್ಯಾಂಗಾರು ಮಾಡಿ ಹೊಲ ತೊಗೋಬೇಕೆಂದ್ದಿದ್ದ ಯಮುನ್ಯಾ ಈ ನೂರಿಪ್ಪತ್ತು ರೂ. ಕೂಡಿಡಾಕ ಒಂದು ಪಿಲಾನು ಮಾಡಿದ್ದ. ಸಂತಿಯಿಂದ ತಂದ ಕೈಳತಿ ಗಡಗಿಯೊಳಗ ಈ ನೂರಿಪ್ಪತ್ತು ರೂ.ಇಟ್ಟು, ಮ್ಯಾಲ ಪಾಡತಂಗ ಅರಬಿ ಕಟ್ಟಿ ಮನಿ ಹಿಂದಿನ ತಿಪ್ಪಿಯೊಳಗ ಅಮಾಸಿ ರಾತ್ರಿಯೊಳಗ ಹುಗಿದಿಡುವುದೆ ಆ ಪಿಲಾನು ಆಗಿತ್ತು. ಈ ಗಡಿಗಿ ಪ್ರತಿ ವರ್ಷ ಉಗಾದಿ ಹಬ್ಬದಾಗ ಮಾತ್ರ ತಿಪ್ಪಿಯಿಂದ ಮ್ಯಾಲ ಬರತಿತ್ತು. ತನ್ನ ಮನಿ ಜಗಲ್ಯಾಗಿನ ಲಕ್ಷ್ಮವ್ವಗ ಮಾಡುವಷ್ಟ ದೇಖರೆಕಿಯನ್ನು ಯಮುನ್ಯಾ ಆ ಗಡಿಗಿಗೂ ಮಾಡತಿದ್ದ. ಅದರ ಹೊರಮೈಗೆ ಸುಣ್ಣ ಬಣ್ಣ ಹಚ್ಚಿ ಅಕ್ಕಡಿ ಕಾಳಿನ ಮಂಡಲ ಮಾಡಿ ಅದ್ರ ಮಾಲ್ಯ ಇಟ್ಟು ಪೂಜಿ ಮಾಡುತ್ತಿದ್ದ. ಆ ವರ್ಷ ಗೌಡರು ಕೊಟ್ಟ ನೂರಿಪ್ಪತ್ತು ರೂಪೈ ಅದಕ್ಕೆ ಸೇರಿಸಿ ರಾತ್ರಿ ಒಯ್ದು ಮತ್ತೆ ತಿಪ್ಯಾಗ ಹುಗದು ಬರತಿದ್ದ. ಹಿಂಗ ಪ್ರತಿ ವರ್ಷನೂ ಕೂಡಿಸಿಟ್ಟು ಸಾವಿರಾರು ರೂಪೈ ಆಗಿದ್ವೋ ಎನೋ. ಆದ್ರ ಹೊಲ ತುಗೊಳ್ಳಾಕ ಎಷ್ಟ ರೊಕ್ಕ ಬೇಕಾಗತಾವು, ಅವನ್ನು ತುಗೊಂಡು ಹೋಗಿ ಹೊಲದ ವ್ಯಾಪಾರ ಹ್ಯಾಂಗ ಮಾಡಬೇಕು ಅಂತ ಅನ್ನೊ ಪರಿಜ್ಞಾನವೇ ಯಮುನ್ಯಾಗ ಇರಲಿಲ್ಲ.
ಯಮುನ್ಯಾನ ಹೆಂಡತಿ ತುಳಸವ್ವ ಸೈತ ಸುಮ್ಮನಿರೋ ಜಾತಿಯಾಕಿ ಅಲ್ಲ. ಸುಮ್ಮನಿದ್ರ ಆಕಿಗೆ ಉಂಡು ಕೂಳು ಕರಗತಿರಲಿಲ್ಲೋ ಎನೋ. ದಿನಾಲು ವಿಜ್ಜಪ್ಪ ದನಿ ತೋಟಕ್ಕ ಕೆಲಸಕ್ಕೆ ಹೊಕ್ಕಿದ್ಲು. ತಾನಷ್ಟೆ ಹೋಗಲಾರದೆ ತನ್ನಿಬ್ಬರು ಮಕ್ಕಳನ್ನು ಕರಕೊಂಡು ಹೊಕ್ಕಿದ್ಲು. ಹಿರೆ ಮಗಳು ಅವ್ವನ ಕೂಡ ಕಸ ತೆಗದರ ಕಿರಿಮಗ ಕಲ್ಯಾ ವಿಜ್ಜಪ್ಪನೊರ ತೊಟದ ಬದುವಿನ್ಯಾಗ ಎರಡು ಕುರಿ ಮರಿ ಮೇಯಿಸತಿದ್ದ. ಊರಾಗ ಯಾವ ಹಬ್ಬ ಹುಣ್ಣಿವಿ ಇದ್ರೂ ಇವರ ಈ ಕಾಯಕ ತಪ್ಪತಿರಲಿಲ್ಲ.
ಬರಬರುತ್ತಾ ಕಲ್ಯಾ ದೊಡ್ಡಾಂವ ಆದಾಂಗ ಕುರಿ ಮರಿಗಳು ಕುರಿಯಾಗಿ ಮರಿ ಹಾಕಿ ಮೊಮ್ಮಕ್ಕಳನ್ನು ಕಂಡಿದ್ದವು. ಕಲ್ಯಾ ಈಗ ದೊಡ್ಡ ಕುರಿ ಹಿಂಡಿನ ಒಡಿತನ ಗಳಿಸಿದ್ದ. ಯಮುನ್ಯಾ ಈಗ ತಿಪ್ಪಿಗುಂಡ್ಯಾಗಿನ ಗಡಿಗ್ಯಾಗ ನೋಟುಗಳ ಕಟ್ಟನ್ನೆ ಮುದ್ದೆ ಮುದ್ದೆಯಾಗಿ ತುರುಕುತ್ತಿದ್ದ.
ಮುಂದೊಂದು ಸುದಿನ ಪೂಜಿ ಮಾಡಿ ಗಡಿಗೆ ಒಡೆದು ಅರಬಿಯೊಳಗಿನ ಗಂಟು ತೆಗೆದುನೋಡಿದಾಗ ಅಲ್ಲಿನ ನೊಟುಗಳ ಮಿಂಚಿಗೆ ಮುಗ್ಗಿನ ವಾಸನಿಗೆ ಅಂವ ಮುರ್ಚೆ ಹೋಗುದಷ್ಟ ಬಾಕಿ ಇತ್ತು. ಅಷ್ಟೊತ್ತಿಗೆ ಮಗ ಲೋಕಾನುಭವ ಪಡೆದುಕೊಂಡು ಹೊಲ ಕೊಳ್ಳುವ ಅಪ್ಪನ ಹೆಬ್ಬಯಕೆಗೆ ಬೆನ್ನೆಲುಬಾಗಿ ನಿಂತಿದ್ದ. ಅವನಿಗೆ ದುಡಿಮೆಯಲ್ಲಿ ಸರಿಸಾಟಿಯಗುವ ಇದ್ದೂರಿನ ರತ್ನಳನ್ನು ಲಗ್ನ ಮಾಡಲಾಗಿತ್ತು. ರತ್ನಾ ಬಂದ ಮೇಲೆ ಅವರ ದುಡಿಯೋ ರಟ್ಟೆಗೆ ಮತ್ತಷ್ಟು ಸಗ್ತಿ ಬಂದಾಂಗಾಗಿತ್ತು.
ತಂದಿ ಮಗ ಇಬ್ಬರು ಒಲ್ಲಿ ಚುಂಗಿನ್ಯಾಗ ರೊಕ್ಕ ಕಟಗೊಂಡು ಹಗಲು ರಾತ್ರಿ ಹೊಲಕ್ಕಾಗಿ ಅಡ್ಡಾಡತೊಡಗಿದ್ದರು. ಅವರ ಓಡಾಟಕ್ಕೆ ಮನಿದ ಶಿವ ಊರ ಬಗಲಲ್ಲೆ ಇದ್ದ ಬಳ್ಳಾರಿ ಜಾಲಿ ಬೆಳೆದು ಬೀಳು ಬಿದ್ದಿದ್ದ ಒಂದೆರಡಕೆರೆ ಹೊಲ ಸಿಗುವಂತೆ ವರ ಕರುಣಿಸಿ ಕತಾರ್ಥನಾದ. ತಂದಿ-ಮಗ ಹಗಲು ರಾತ್ರಿ ಹೊಲದೊಳಗ ಕಾಲೂರಿ ಸ್ವಚ್ಚಮಾಡಿ ಹಂಗೂ ಹಿಂಗೂ ಮಾಡಿ ಹೊಲ ಬಿತ್ತುವಂಗ ಮಾಡೆಬಿಟ್ಟರು.
ಯಮನ್ಯಾ ಮತ್ತು ತುಳಸವ್ವ ಸಾಯುವಾಗ ಸೈತ ತಮ್ಮ ಮೊಮ್ಮಕ್ಕಳಾದರೂ ಜಮೀನು ಅನುಭವಿಸುವಂಗ ಆತಲ್ಲಾ ಅಂತ ಖುಷಿಯಿಂದ ಕಣ್ಮುಚಿದ್ರು. ಹೊಲದ ಮ್ಯಾಲ ಅವರಿಟ್ಟಿದ್ದ ಜೀವದ ಕುರುಹಿಗಾಗಿ ಅವರನ್ನ ಹೊಲದ ಬನ್ನಿ ಗಿಡದ ಕೆಳಗ ಮಣ್ಣು ಮಾಡಿ ಮ್ಯಾಲೊಂದು ಚಂದದ ಸಮಾಧಿ ಕಟ್ಟಿದ ಕಲ್ಯಾ, ಪ್ರತಿ ಅಮಾಸಿ ದಿನವೂ ಆ ಸಮಾಧಿಗಳಿಗೆ ಪೂಜೆ ಮಾಡತಿದ್ದ. ಬೆಳದಿಂಗಳ ರಾತ್ರಿಯಲ್ಲಿ ಹೊಲದ ಆಗು ಹೋಗುಗಳನ್ನು ಆ ಗೋರಿಗಳ ಮುಂದೆ ಮನವರಿಕೆ ಮಾಡಿಕೊಳ್ಳುತ್ತಿದ್ದ. ಇತ್ತಿತ್ತಲಾಗಂತೂ ಹೊಲದೊಳಗ ಗುಡಿಸಲಾ ಹಾಕ್ಕೊಂಡು ಪಕ್ಕದ ತೋಟದಿಂದ ನೀರು ಬಾಡಿಗೆಗೆ ತುಗೊಂಡು ತರಕಾರಿ ಬೆಳೆಯುತ್ತ ಕಲ್ಯಾ ಶ್ರೀಮಂತನಾಗತೊಡಗಿದ್ದ. ಹೀಗೆ ತನ್ನ ಬದುಕೇ ಆಗಿದ್ದ ಹೊಲ ಮಾರೋದಂದ್ರ ಹ್ಯಾಂಗ ಆದಿತು ಅಂತ ಅಂವ ಚಿಂತೆಗೆ ಬಿದ್ದಿದ್ದ. ನನ್ನ ಜೀವ ಹೋದರೂ ಸೈತ ನಾನು ಹೊಲ ಮಾರೂದಿಲ್ಲ ಅಂತ ಶಪತ ಮಾಡಿಕೊಂಡ ನಂತರವೇ ಅವನಿಗೆ ಅವತ್ತು ನಿದ್ರಾದೇವಿ ಅವನ ಕಣ್ಣು ತುಂಬಿದ್ದಳು.
*
ಅಂಬಾ ಅನ್ನೋ ಎತ್ತಿನ ದ್ವನಿ ಕೇಳಿ ಕಲ್ಲಜ್ಜಗ ಎಚ್ಚರಾತು. ಎದ್ದು ಕುಂತು ಬಾಯಿ ಮುಕ್ಕಳಿಸಿ ಎಲಡಿಕೆ ಹಾಕ್ಕೊಂಡ. ಇವನನ್ನು ನೋಡಿ ಎತ್ತುಗಳು ಒಂದೆ ಸವನ ಕಣ್ಣಿ ಹರಕೊಂಡಂಗ ಮಾಡಾಕ ಹತ್ತಿದವು. `ತಡಕೋರೋ ಭೀಮ್ಯಾ ಯಾಕ ಒದರತಿ ಬರತಿನಿ' ಅಂತ ದೋತರ ಲಂಗಟಾ ಸರಿ ಮಾಡಕೋತ ಮ್ಯಾಲೆದ್ದ. ಎರಡು ಸಿವುಡು ಬಿಳಿ ಜ್ವಾಳ ಮೇವು ಎತ್ತುಗೊಳ ಮುಂದ ಹಾಕಿ ಅಕ್ಕರೆಯಿಂದ ಅವುಗಳ ದುಬ್ಬ ಸವರಿ ಬಾಲ ನೀಟಿದ. ಎತ್ತುಗಳು ಕೊರಳ ಅಳ್ಳಾಡಿಸಿಕೋತ ಮೇವು ತಿನ್ನೋದನ್ನು ಪ್ರೀತಿಯಿಂದ ನೋಡಿ ದಂದ ಮನಿಯಿಂದ ಹೊರ ಬಂದ. ಸಣ್ಣ ಮಗ ರಮೇಶ ಅಸ್ತವ್ಯಸ್ತವಾಗಿ ಮನಿ ಮುಂದಲ ಕಟ್ಟಿಮ್ಯಾಲ ಇನ್ನು ಮಲಕೊಂಡಿದ್ದ. `ಏನ್ ಮಕ್ಕಳೋ ಏನೋ, ಸೂರ ಉದಯ ಆದ್ರು ಇನ್ನು ಏಳಾಕವಲ್ರು. ನಮ್ಮ ಕಾಲದಾಗ ಹಿಂಗಾಗಿದ್ರ ನಮ್ಮಪ್ಪ ಚರ್ಮ ಸುಲಿತಿದ್ದ' ಅನಕೋತ ಅವನ್ನ `ರಾಮಣ್ಣ ಎಳಪಾ' ಅಂತ ಎಬ್ಬಿಸಲು ನೋಡಿದ.
ನಿದ್ದಿಗಣ್ಣಾಗಿದ್ದ ಮಗ 'ಹೂಂ ಎಳಿತಿನಿ ತಡಿ’ ಅನಕೋತ ಮತ್ತೆ ದಬ್ಬಾದ. ಎನು ಮಾಡಿದರೂ ಅಂವ ಇಷ್ಟ ಜಲ್ದಿ ಏಳೂದಿಲ್ಲ ಅಂತ ಗೊತ್ತಾಗಿ ಚರಗಿ ತುಗುಂಡು ಹೊರಕಡಿಗೆ ಹೊರಟ. ನನ್ನ ಮಕ್ಕಳು ನನ್ನಂಗ ಆಗಬಾರದು ಅಂತ ಕಲ್ಲಜ್ಜ ಇಬ್ಬರನ್ನು ಸಾಲಿಗೆ ಹಾಕಿದ್ದ. ಅರ್ದಂಬರ್ಧ ಸಾಲಿ ಕಲಿತ ಇಬ್ಬರು ಮಕ್ಕಳು ಖರೆವಂದ್ರು ಕಲ್ಲಜ್ಜ ಬಯಸಿದಂಗ ಅವನಂಗ ಆಗಲೆ ಇಲ್ಲ. ಆದ್ದರಿಂದಲೇ ಮಕ್ಕಳು ಎದೆಯುದ್ದ ಬೆಳೆದಿದ್ದರೂ ಮುದುಕನಿಗೆ ಇನ್ನು ಹೊಲದಲ್ಲಿ ಏಗುವುದು ತಪ್ಪಿರಲಿಲ್ಲ.
ಹಿರೆ ಮಗ ಬಿಎ ಮಟ ಓದಿ ತಾನಿಷ್ಟ ಪಟ್ಟವಳೊಡನೆ ಲಗ್ನ ಮಾಡಕೊಂಡು ಬೆಂಗಳೂರಿನೊಳಗ ನೌಕರಿ ಮಾಡತಿದ್ದ. ಅಂವ ವರ್ಷಕ್ಕ ಎರಡು ಸಲ ಊರಕಡೆ ಮುಖ ಮಾಡಿದರೆ ಅದೆ ಪುಣ್ಯ. ಸಣ್ಣಂವಗ ಸರಸೋತಿ ಒಲಿಲಿಲ್ಲಂತ ಕಾಣತದ. ಹತ್ತನೆತ್ತೆ ಎರಡು ಸಲ ಡುಮ್ಕಿ ಹೊಡದ ಮ್ಯಾಲ ಬಾಗಲಕೋಟ್ಯಾಗ ಇದ್ದುಕೊಂಡು ಶ್ರೀಮಂತ ವ್ಯಾಪಾರಿಯೊಬ್ಬನ ಕಾರು ಒಡಿಸುತ್ತಿದ್ದ. ತನ್ನ ಮನಸ್ಸ ತಿಳಿದಾಗೊಮ್ಮೆ ಊರಕಡೆ ಬರತಿದ್ದಂವ ನಿನ್ನೆ ರಾತ್ರಿ ಬಂದಿದ್ದ. ಇಬ್ಬರು ಮಕ್ಕಳು ಹೊಲದ ಕೆಲಸ ಮಾಡುವುದು ಅವಮಾನವೆಂದುಕೊಂಡೋ ಅಥವಾ ಪಟ್ಟಣದ ಮೋಹಕ್ಕೆ ಬಿದ್ದೋ ಒಟ್ಟಿನೊಳಗ ಹೊಲದಕಡಿಕ ಸುಳಿತಿರಲಿಲ್ಲ.
*
ಹೇಲಮಡ್ಯಾಗ ದಿನಾಲೂ ದೂರ ದೂರ ಕುತಗೆಂಡು ಆರಾಮಸಿರಿ ಹೊರಕಡಿ ಮಾಡುತ್ತಿದ್ದ ಜನ ಇವತ್ಯಾಕೋ ಗುಂಪು ಗುಂಪಾಗಿ ಕುಳಿತುಕೊಂಡು ಗಹನವಾದ ಚರ್ಚೆಯಲ್ಲಿ ತೊಡಗಿಕೊಂಡೆ ತಮ್ಮ ನಿತ್ಯದ ಪ್ರಾರ್ಥವಿಧಿಗಾಗಿ ಪರದಾಡುತ್ತಿದ್ದರು. ಹಲವರು ಬಾರದಕ್ಕೆ ತಿಣುಕುತ್ತಾ, ಕೆಲವರು ತಮ್ಮ ಅಂಡಿಗೆ ನೀರು ಮುಟ್ಟಿಸುತ್ತಾ, ಇನ್ ಕೆಲವರು ತಮ್ಮ ದೋತರದ ಲಂಗಟ ಕಟ್ಟಿಕೊಳ್ಳುತ್ತಾ ಮಾತಿನಲ್ಲಿ ಮೈ ಮರೆತಿದ್ದರು. ಎಲ್ಲರ ನಾಲಿಗೆಲೂ ಹೊಲದ ಸುದ್ದಿಯೇ ಹೊರಳಾಡುತ್ತಿತ್ತು. ಸ್ವಲ್ಪ ಮಂದಿ ಹೊಲ ಮಾರಿ ಪ್ಯಾಟಿಯೊಳಗ ಸೆಟಲ್ ಆಗೋ ಬಗ್ಗೆ ಹೇಳಿಕೊಳ್ಳುತ್ತಿದ್ದರೆ, ಇನ್ನಷ್ಟ ಮಂದಿ ಹೊಲ ಮಾರಿ ನಾವೆಲ್ಲಿಗೆ ಹೊಗೋನು ಅಂತ ಸಿಟ್ಟಿನಿಂದ ಪೆಚಾಡುತ್ತಿದ್ದರು.
ಕಲ್ಲಪ್ಪಜ್ಜ ಹೇಲುವುದನ್ನು ಮರೆತು ಹತ್ತಿರದ ಗುಂಪಿನ ಕಡೆ ಹೋಗಿ ಕಿವಿಯಾದ. ಅಜ್ಜನನ್ನು ನೋಡಿದ ವಾಲಿಕಾರ ಮಲ್ಲ, ‘ಚಾನ್ಸ್ ಹೊಡಿದೆಲ್ಲೋ ಮಾವಾ, ಯಾಡ ಎಕ್ರೆಗೆ ಯಾಡ ಲಕ್ಷ ರೊಕ್ಕ ಬರತಾವು' ಅಂತ ಚರ್ಚೆಯನ್ನು ಕಲ್ಲಜ್ಜನ ಸುತ್ತಲೂ ಕೇಂದ್ರಿಕರಿಸಿದ.
ಕಲ್ಲಜ್ಜಗ ಮೈಯೆಲ್ಲ ಉರಿದಂಗಾತು, ಆದ್ರೂ ಹುಡುಗ ನಕಲಿ ಮಾಡ್ತಾನ ಅನಕೊಂಡು, `ಯಾವನಲೇ ನೀನು, ನೀನ ಬೇಕಾದ್ರ ನಿನ್ನ ಹೊಲ ಕೊಡು, ನನ್ನ ಹೊಲದ ಸುದ್ದಿಗೆ ಮಾತಾಡಾಕ ನೀನ್ಯಾವ' ಅಂತ ಹುಸಿ ಮುನಿಸಿಕೊಂಡ.
ಸಿಟ್ಟಿಗೆ ಬರಬೇಡೋ ಮಾವಾ, ನಿಂದೇನ್ ಯಾಡ ಎಕರೆ ಐತಿ. ಮುಪ್ಪಿನ ಕಾಲದಾಗ ಅಟ ಹೊಲ ಇಟಗೊಂಡಾದ್ರೂ ಏನು ಮಾಡಾಂವ. ಹ್ಯಾಂಗೂ ಹಿರಿ ಮಗ ಬೆಂಗಳೂರಿನ್ಯಾಗ ನೌಕರಿ ಮಾಡತಾನ. ಹೊಲ ಮಾರಿ ಬಂದಟ ದುಡ್ಡು ತುಗೊಂಡು ನೀನು ಬೆಂಗಳೂರು ಬಸ್ ಹತ್ತೊದು ಚಲೋ' ಎಂದು ಹುಬ್ಬು ಹಾರಿಸಿದ.
`ನೋಡಪಾ, ಅದ ಎರಡೆಕ್ರೆ ಹೊಲ ತುಗೋಳಾಕ ಎಷ್ಟ ಕಷ್ಟ ಪಟ್ಟಿವಿ ಅಂತ ನಮಗ ಮಾತ್ರ ಗೊತ್ತು. ಯಾರ್ರ ಬೇಕಾದವರ ಬರಲಿ ನಾನ್ ಮಾತ್ರ ಹೊಲ ಕೊಡಂಗಿಲ್ಲ'
`ನೀನು ಕೊಡಲ್ಲ ಅಂದ್ರ ಸರಕಾರದೋರು ಕೇಳಬೇಕಲ್ಲೋ ಮಾವಾ. ನೀನು ಎಷ್ಟ್ ಹಾರಾಡಿದರೂ ಸರಕಾರ ಒಮ್ಮಿ ಮನಸ್ಸು ಮಾಡಿತು ಅಂದ್ರ ಮುಗಿತು.
ಯಾವ ಸರಕಾರ. ನನಗೆನ್ ಸರಕಾರದವರು ಬಂದು ಹೊಲ ಕೊಡಿಸಿಲ್ಲ. ಸ್ವಂತ ರಟ್ಟಿ ಮ್ಯಾಲ ದುಡುದು ಹೊಲ ಗಳಿಸೇನಿ. ಸರಕಾರಕ್ಕೂ ನಮಗೂ ಏನು ಸಂಬಂಧ ಇಲ್ಲ' ಬಂದ ಬಿಟ್ಟ ಹೇಳಾಕ ದೊಡ್ಡ ಮಂತ್ರಿ ಮಗನಂಗ'
ನೀ ಎಷ್ಟ್ ಬೇಕಾದಷ್ಟು ಕಿಸಿದ್ಯಾಡೋ ಮಾವಾ. ನಿನ್ನ ಹೊಲ ಸರಕಾರದೊರು ತುಗೊಂಡ ತುಗೊಂತಾರ, ಏನ್ ಸರ್ತ ಕಟ್ಟಿತಿ ಹೇಳ'
ಈ ಸಲ ಅಜ್ಜನ ಪಿತ್ಥ ನೆತ್ತಗೇರಿತು. `ನಿಂದೆಟ್ ಐತಿ ಅಟ್ಟ ಮಾಡು ಅಂದ್ರ ಮತ್ತ ನನಗ ಬುದ್ಧಿ ಹೇಳಾಕ ಬರತಿಯಲ್ಲಲೇ ಕಿಸಬಾಯಿ. ತುತ್ತ ಏನ್ ಹಿಂಬರಕಿ ಉಂತಿಯೇನ' ಅಂತ ಜೋರಾಗಿ ಚೀರಕೋತ ಮಲ್ಲನ ಮೈಮೇಲೆ ಹೋಗತೊಡಗಿದ.
ವಾಲಿಕಾರ ಭೀಮನಿಗೆ ಏನು ಮಾಡಬೇಕು ಗೊತ್ತಾಗದೆ ಮಂಗ್ಯಾನ ಮುಖ ಮಾಡಕೊಂಡು ಪೆಪ್ಪೆಪ್ಪೆ ಅನ್ನತೊಡಗಿದ. ಸುತ್ತಲಿನವರು ಅಜ್ಜನನ್ನು ಸಮಾಧಾನಿಸಿ ಪರಿಸ್ಥಿತಿ ತಹಬದಿಗೆ ಬರುವಂಗ ಮಾಡಿದರು.
*
ಊರ ತುಂಬಾ ಹೊಲz್ದÉೀ ಸುದ್ದಿ. ಕೆಲವರು ಈಗಾಗಲೇ ಹೊಲ ಮಾರಿ ಏನೇನ್ ತುಗೋಬೇಕು ಯಾವ ಊರಿಗೆ ಹೋಗಿ ಸೆಟಲ್ ಆಗಬೇಕು. ಬಂದ ಹಣದಲ್ಲಿ ಯಾರ್ಯಾರಿಗೆ ಎಷ್ಟೇಷ್ಟು ಕೊಡಬೇಕು ಅಂತ ಕನಸು ಕಾಣುತ್ತಿದ್ದರು. ಹೊಲ ವ್ಯಾಪಾರ ಮಾಡಿಸುವುದಕಾಗಿಯೇ ಕೆಲವರು ದಿಡೀರ್ ದಲ್ಲಾಳಿಗಳಾಗಿ ಚಿಗಿತುಕೊಂಡರು. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎಕ್ರೆಗೆ ಏನು ರೇಟು, ಒಂದು ಏಕರೆಗೆ ನಾವೆಷ್ಟ್ ಕಮೀಶನ್ ತುಗೋಬೇಕು. ಯಾವತ್ತು ಸರಕಾರದಿಂದ ಹೊಲ ಅಳಿಯಾಕ ಕರಸೋದು ಅಂತ ಕನಸ ಕಾಣ್ಕೋತ ಗಡಿಬಿಡಿಯಿಂದ ಓಡಾಡುತ್ತಿದ್ದರು.
ಇನ್ನು ಹೊಲ ಕೊಡಲಿಕ್ಕೆ ಮನಸ್ಸಿಲ್ಲದವರು ಹೊಲ ಮಾರಾಟ ಆಗದಂಗ ಏನು ಪತ್ರಿತಂತ್ರ ರೂಪಿಸೋದು. ಪೇಪರ್ನವರಿಗೆ ತಿಳಿಸಬೇಕು. ಕಮ್ಯುನಿಸ್ಟ್ ಪಕ್ಷಗಳಿಗೆ, ಪ್ರಗತಿಪರ ಸಂಘಟನೆಗಳಿಗೆ ತಿಳಿಸಿ ದೊಡ್ಡ ಹೋರಾಟ ರೂಪಿಸಬೇಕು. ಏನೆ ಆದ್ರೂ ಹೊಲ ಕೊಡಬಾರದು. ಪರಿಸ್ಥಿತಿ ವಿಕೋಪಕ್ಕ ಹೋದ್ರ ಗಾಂಧಿ ತಾತ ಬಳಸಿದ ಉಪವಾಸ ಸತ್ಯಾಗ್ರಹವನ್ನು ಬಳಸೋನು ಅಂತ ಗಟ್ಟಿಮಟ್ಟಾದರು.
ಎರಡು ಗುಂಪುಗಳ ಮುಖಂಡರು ಪಕ್ಕದ ಜಿಲ್ಲಾ ಕೇಂದ್ರಕ್ಕೆ ಹೋಗಿ ತಮಗೆ ಬೇಕಾದವರನ್ನು ಕಂಡು ತಂತ್ರ ಪ್ರತಿತಂತ್ರವನ್ನು ರೂಪಿಸತೊಡಗಿದರು. ಇಡಿ ಹಳ್ಳಿ ಗೊಂದಲದ ಗೂಡಾಗಿತ್ತು. ರಾಜ್ಯದ ಹಿರಿಕಿರಿಯ ಪತ್ರಕತರೆಲ್ಲ ಹಳ್ಳಿಯಲ್ಲಿ ನೆರೆದು ಗೊಂದಲ ಮತ್ತಷ್ಟು ಹೆಚ್ಚಾಗಿತ್ತು. ದಿನಾಲೂ ಜನಪ್ರಿಯ ರಾಜಕಾರಣಿಗಳ ಮುಖಗಳ ಮುಂದೆ ಲೋಗೋ ಹಿಡಿದು ರೂಡಿಮಾಡಿಕೊಂಡಿದ್ದ ಪತ್ರಕರ್ತರು ಈ ಹಾಳು ಹಳ್ಳಿಯಲ್ಲಿ ಯಾರನ್ನು ಮಾತಾಡಿಸಬೇಕೆಂದು ಗೊತ್ತಾಗದೆ ತಲೆ ಕೆರೆದುಕೊಳ್ಳತೊಡಗಿದರು. ಇದರ ಮಧ್ಯೆ ಯಾವಾಗಲೂ ತಮ್ಮ ಮನೆಲಿನ ಟಿವಿ ಪೆಟ್ಟಿಗೆಯಲ್ಲಿ ಇನ್ನೊಬ್ಬರ ಮುಖ ನೊಡಿ ಬೇಸತ್ತಿದ್ದ ಕೆಲವು ಊರಿನ ತಾತ್ಕಾಲಿಕ ಹಿರಿಕರು, ಕೊರಳಪಟ್ಟಿ ಸರಿ ಮಾಡಿಕೊಂಡು ತಾವೇ ಮುಂದೆ ಮಾತನಾಡಲು ಪಾಳಿ ಹಚ್ಚಿದರು.
*
ಯಾವದ್ಯಾವದೋ ಊರವರು ಬದುಕೂರಿನಲ್ಲಿ ಒಕ್ಕರಿಸಿಕೊಂಡರು. ತಾಲೂಕು-ಜಿಲ್ಲಾ ಕೇಂದ್ರಗಳ ಕೆಲ ಪರಮನೆಂಟ್ ಹೋರಾಟಗಾರರಂತೂ ಬದುಕೂರಿನ ಎದೆಯ ಮೇಲೆ ತಮ್ಮ ಝಂಡಾ ಊರಿದ್ದರು. ಊರೆಲ್ಲ ಒಂದು ರೌಂಡು ಜಾಥಾ ಮುಗಿಸಿಕೊಂಡು ಬಂದು ನಂತರ ಬದುಕೂರಿನ ಹಿರಿಯ ಸ್ವಾತಂತ್ರ ಹೋರಾಟಗಾರ ಗೂದ್ಲೆಪ್ಪಜ್ಜನ ಸರ್ಕಲ್ ಹತ್ತಿರ ಹಾಕಿದ್ದ ಸಣ್ಣ ಪೆಂಡಾಲ್‍ನಲ್ಲಿ ಗಿಜಗುಡತೊಡಗಿದರು. ಪೆಂಡಾಲ್‍ನ ಒಂದು ಮೂಲೆಯ ಕುರ್ಚಿಯಲ್ಲಿನ ಫೋಟೋದ ಕಟ್ಟಿನೊಳಗೆ ಬಂಧಿಯಾಗಿದ್ದ ಗಾಂಧೆಪ್ಪ ಮುತ್ಯಾ ಸೋಡಾ ಬುಡ್ಡಿ ಚಸ್ಮಾದೊಳಗಿಂದ ಬಿಡುಗಡೆಗಾಗಿ ಪಿಳಿ ಪಿಳಿ ಕಣ್ಣು ಬೀಡುತ್ತಿದ್ದ.
ಅವನ ಮುಂದೆ ಒಂದಿಷ್ಟು ಮಂದಿ `ಬೇಕೆ ಬೇಕು ನ್ಯಾಯ ಬೇಕು' ಎಂದೋ, `ಬೇಡ ಬೇಡ ಪ್ಯಾಕ್ಟರಿ ಬೇಡ' ಎಂದೋ ಗಂಟಲು ಹರಿದುಕೊಳ್ಳುತ್ತಿದ್ದರು. ಪೆಂಡಾಲ್‍ನ ಹಿಂದೆ ನಿರಂತರವಾಗಿ ಚಾ-ಚುಡಾ ಸರಬರಾಜು ನಡೆಯುತ್ತಿತ್ತು. ಸತ್ತವರ ಮನೆಗೆ ಸಂಬಂಧಿಕರು ಬಂದಾಗ ಹೆಚ್ಚಾಗುವ ರೋಧನದಂತೆ ಆಗಾಗ ಬರುತ್ತಿದ್ದ ಟಿವಿಯವರಿಗಾಗಿ ಘೋಷಣೆಗಳ ಚೀರಾಟದಿಂದ ವಾತಾವರಣ ಮತ್ತಷ್ಟು ಭಯಾನಕವಾಗುತ್ತಿತ್ತು. ಟಿವಿಯವರು ಸಹ ಭಯಾನಕವಾಗಿ ಚೀರುತ್ತಿದ್ದವರನ್ನೆ ಕೇಂದ್ರಿಕರಿಸಿ ಅವರಿಗೆ ಮತ್ತಷ್ಟು ಬೊಬ್ಬಿರಿಯುವತೆ ಪೆÇ್ರತ್ಸಾಹ ನೀಡುತ್ತಿದ್ದರು. ಟಿವಿಯವರು ಹೋದ ನಂತರ ನೀರು ಕುಡಿದು ದನಿವಾರಿಸಿಕೊಳ್ಳುತ್ತಿದ್ದ ಪ್ರತಿಭಟನಾಕಾರರು ಮುಂದಿನ ಟಿವಿಯವರು ಬರುವಿಕೆಗಾಗಿ ತಯಾರಾಗಿ ಕೂಡ್ರುತ್ತಿದ್ದರು.
ಕೆಲವು ಜನ ಊರಿನ ರೈತರ ಮನವೊಲಿಸಿ ಪೆಂಡಾಲಿಗೆ ಕರೆತರುವಲ್ಲಿ ನಿರತರಾಗಿದ್ದರೆ, ಹಲವರು ಹೊಲ ಮಾರಲಿಚ್ಚಿಸುವ ರೈತರನ್ನು ವಿಕಾಸಪ್ಪನವರ ಮನೆಗೆ ಕರೆದುಕೊಂಡು ಹೋಗುವ ಕಳ್ಳಯತ್ನ ನಡೆಸಿದ್ದರು. ವಿಕಾಸಪ್ಪನ ಮನೆಯಲ್ಲಿ ಹೊಲದ ಸರ್ವೆ ನಂ ಬರೆದುಕೊಂಡು ಖರ್ಚಿಗೆ ಅಡ್ವಾನ್ಸ್ ಕೊಟ್ಟು ಕಳಿಸಲಾಗುತ್ತಿತ್ತು.
ವಿರೋಧ ಪಕ್ಷದ ಮುಖಂಡರು ಪೆಂಡಾಲ್‍ನಲ್ಲಿ ಬಂದು ಕುಳಿತು ಪ್ರತಿಭಟನೆ ಬೆಂಬಲ ಸೂಚಿಸಿದ್ದರಾದರೂ ಒಳಗೊಳಗೆ ಹೊಲ ಮಾರುವ ಹುನ್ನಾರಕ್ಕೆ ಚಾವಿ ಕೊಟ್ಟಿದ್ದರು. ಯಾವಯಾವದೋ ಸಂಘಟನೆಗಳ ರಾಷ್ಟ್ರೀಯ ಮುಖಂಡರುಗಳು ಬಂದು ಮಾತನಾಡಿಸಿ ಟಿವಿ ಮುಂದೆ ಮಾತನಾಡಿ ಕಾರು ಹತ್ತುತ್ತಿದ್ದರು. ವಾರಾನುಗಟ್ಟಲೆ ನಡೆದ ಪ್ರತಿಭಟನೆಯಲ್ಲಿ ನಿಧಾನಕ್ಕೆ ರೈತರೆಲ್ಲ ಕಡಿಮೆಯಾಗುತ್ತಿದ್ದರೇ, ವಿಕಾಸಪ್ಪನ ಮನೆಯಲ್ಲಿ ರೈತರ ಹಾಜರಿ ಹೆಚ್ಚುತ್ತಲೇ ಇತ್ತು. ಪ್ರತಿಭಟನೆಯಲ್ಲಿ ನಿರತರಾಗಿದ್ದ ಕೆಲವು ರೈತರ ಸಂಬಂಧಿಕರು ಪ್ರತಿಭಟನಾ ನಿರತರನ್ನು ಚಾ ಕುಡಿಯಕ್ಕೆಂದು ಹೊರಗಡೆ ಕರೆದುಕೊಂಡು ಹೋದರೆ ಅವರು ಮತ್ತೆ ಪೆಂಡಾಲ್‍ನತ್ತ ತಿರುಗಿ ನೊಡುತ್ತಿರಲಿಲ್ಲ. `ಇದು ಪ್ರಜಾಪ್ರಭುತ್ವದ ಸೋಲು' ಎಂಬ ದೊಡ್ಡ ಹೆಸರನ್ನು ಕೊಟ್ಟ ಪ್ರಗತಿಪರ ಸಂಘಟನೆಗಳ ಮುಖಂಡರು ಒಂದಿನ ಪಂಡಾಲ್ ಕಿತ್ತುಕೊಂಡು ಪಟ್ಟಣದ ಹಾದಿ ಹಿಡಿದರು.
*
ಮರುದಿನ ಕಲ್ಲಜ್ಜ ಪ್ರತಿಭಟನಾ ಸ್ಥಳಕ್ಕೆ ಹೋದರೆ ಅಲ್ಲೇನಿದೆ ಮಣ್ಣು. ವಾರಗಟ್ಟಲೆ ತಿಂದು ಎಸೆದಿದ್ದ ಪೇಪರ್ ಮುದ್ದಿಗಳು ಮಡಿಚಿದ ಪ್ಲಾಸ್ಟಿಕ್ ಗ್ಲಾಸ್‍ಗಳು ಕಲ್ಲಜ್ಜನನ್ನು ಅಣಕಿಸುವಂತೆ ಬಿದ್ದುಕೊಂಡಿದ್ದವು. ಸರ್ಕಲ್ಲಿನ ಮುಂದೆ ಸೈಕಲ್ ಮೇಲೆ ಹೋಗುತ್ತಿದ ವಾಲಿಕಾರ ಭೀಮನ ಮುಖದಲ್ಲೂ ಅಣಕು ನಗೆ. ಅವತ್ತ ಎಷ್ಟೊಂದು ಎಗರ್ಯಾಡಿದಿ. ಈಗೇನು ಕಿಸಿತಿಯೋ ಕಿಸಿ' ಅನ್ನೋ ಸವಾಲು ಅವನ ನಗುವಿನಲ್ಲಿದ್ದಂಗಿತ್ತು.
ಮಹಾರಾಷ್ಟ್ರದಾಗ ಅಣ್ಣಾ ಎಂಬ ಚೂಪು ಟೊಪಗಿ ಮುತ್ಯಾ ಒಬ್ಬ ಅನ್ಯಾಯ ಆದಾಗೆಲ್ಲ ಸರ್ಕಲ್‍ಗಳಲ್ಲಿ ಕುಳಿತು ಪ್ರತಿಭಟಿಸೋದನ್ನು ಯಾವಾಗೋ ಟಿವಿಯಲ್ಲಿ ನೊಡಿದ್ದೋ ಈಗ ಕಲ್ಲಜ್ಜನ ನೆನಪಿನಲ್ಲಿ ಸುಳಿದುಹೋಯಿತು. ತನಗ ನ್ಯಾಯ ಸಿಗೋವರೆಗೋ ಇಲ್ಲಿಂದ ಎಳಬಾರದು ಅಂತ ಶಪತ ಮಾಡಿಕೊಂಡು ಮುದುಕ ಅಲ್ಲೆ ಕುಸಿದು ಕುಳಿತ.
ಮುಂಜಾನಿಂದ ಸಂಜಿಮಟ ಅಲ್ಲೆ ಕುಂತ, ಮಲಕೊಂಡ, ಎದ್ದ. ಮತ್ತೆ ಮಲಕೊಂಡ. ಮಗ ರಮೇಶ ಬಂದು ಊಟಕ್ಕೆ ಕರೆದಾಗಲೆ ಅವನು ಪ್ರತಿಭಟನೆ ಮಾಡುತ್ತಿದ್ದಾನೆ ಎಂದು ಊರ ಜನಕ್ಕೆ ಗೊತ್ತಾಗಿದ್ದು.
`ಎಪ್ಪ ನಡಿ ಊಟಕ್ಕ, ಮನಿ ಇಲ್ಲೆನ ಮಾಡಾಕ ಹತ್ತಿ'
`ಇಲ್ಲಪ್ಪಾ, ವಿಕಾಸಪ್ಪ ಗೌಡ್ರು ನಮ್ಮ ಹೊಲ ತುಗಳುದಿಲ್ಲಾ ಅಂತ ಮಾತ ಕೊಡುವರೆಗೂ ಈ ಜಾಗ ಬಿಟ್ಟು ಕದಲಂಗಿಲ್ಲ.'
`ಅಲ್ಲೋ ಎಪ್ಪಾ, ನೀ ಒಬ್ಬನ ಇಲ್ಲಿ ಕುಂತ್ರ ಏನು ಸಾಧಿಸಿದಂಗಾಕ್ಕೆತಿ. ಹೊಲದ ಬಗ್ಗೆ ಗೌಡ್ರ ಮನಿಗೆ ಹೋಗೆ ಮಾತಾಡೂನು. ನೀ ಮನಿಗೆ ಬಾ' ಅಂತ ಮಗಾ ಒಂದೆ ಸಮನ ಕರಿಯಾಕ ಹತ್ತಿದ.
ಕಲ್ಲಜ್ಜ ಅವನಿಗೆ ಕೇರ್ ಮಾಡದೆ ಸುಮ್ಮನ ಅವನ ಕಡೆ ಮುಕುಳಿ ತಿರುವಿ ಗುದ್ಲೆಪ್ಪಜ್ಜನ ಕಲ್ಲ ಮೂರ್ತಿ ನೋಡಕೊಂತ ಕುಂತಬಿಟ್ಟ.
ಈ ವಿಷಯಾನ ವಿಕಾಸಪ್ಪಗೌಡರೊಂದಿಗೆ ಮಾತಾಡೋದು ಒಳಿತು ಅಂತ ಮಗ ರಮೇಶ್ ಗೌಡರ ವಾಡೆಯ ದಾರಿ ಹಿಡಿದ. ಒಟ್ಟು ಎಷ್ಟು ಎಕರೆ ಭೂಮಿ ಸಿಗುತ್ತೆ, ತಮಗೆ ಸಿಗುವ ಕಮೀಶನ್ ಎಷ್ಟು ಎಂದು ಲೆಕ್ಕ ಹಾಕುತ್ತಾ ಕುಳಿತಿದ್ದ ಗೌಡರು, ರಮೇಶನ್ನ ನೋಡಿ `ನಿಮ್ಮ ಹೊಲದ್ದು ಉತಾರ ಯಾವತ್ತು ತರತಿಯೋ' ಅಂತ ಅಧಿಕಾರದಿಂದೆಂಬಂತೆ ಜೋರಿನಿಂದ ಕೇಳಿದರು.
`ನಮ್ಮಪ್ಪ ಹೊಲ ಕೊಡೂದಿಲ್ಲಾ ಅಂತಾನ್ರಿ'
`ಅಲ್ಲೊ ನಿಮ್ಮಪ್ಪಗ ಹುಚ್ಚ ಗಿಚ್ಚ ಹಿಡದೈತೇನ. ಸುತ್ತಲಿರೋರು ಎಲ್ಲ ಹೊಲ ಕೊಟ್ಟಾರ. ನಿಮ್ಮದೊಂದು ನಡುವು ಬಿಟ್ಟು ಸುತ್ತಲೂ ಪ್ಯಾಕ್ಟರಿ ಕಟ್ಟಾಕ ಹೆಂಗ ಬರತೈತಿ. ನಿಮ್ಮ ಅಪ್ಪ ಏನ್ ಬಿನ್ ಲಾಡೆನ್ ತುಂಡನ. ಅದೆಲ್ಲ ಆಗಂಗಿಲ್ಲ. ನಿಮ್ಮ ಹೊಲ ತುಗೊಂಡ ನಾವೇನು ನಮ್ಮ ಹೆಸರಿಗೆ ಬರಸÀಕೊಳ್ಳಾಕ ಹತ್ತಿಲ್ಲ. ಸರಕಾರದೊರ ಆದೇಶ ಐತಿ. ನೀವು ಕೊಡೂದಿಲ್ಲ ಅಂದ್ರೂ ಸರಕಾರದೋರು ಕೇಳತಾರೇನ್. ಇವತ್ತಲ್ಲಾ ನಾಳೆ ತಮ್ಮ ಕಬ್ಜಾಕ್ಕ ತೊಗೋತಾರ' ಎಂದು ಗೌಡರು ಇದ್ದ ಹಕ್ಕಿಕತಾವನ್ನು ಹೇಳಿ ತಮ್ಮ ಒಳ್ಳೆತನವನ್ನು ಪ್ರದರ್ಶಿಸಿದರು.
‘ನೀವು ಹೇಳೂದು ನನಗೆಲ್ಲ ಅರ್ಥ ಆಕ್ಕೆತ್ರಿ ದನ್ಯಾರ. ಆದ್ರ, ಮುದಿಯಾ ನಮ್ಮಪ್ಪಗ ಅರ್ಥ ಆಗೊಲ್ಲದು. ಎರಡು ದಿನದಿಂದ ಅಂವ ಮನಿಗೆ ಬಂದಿಲ್ರಿ. ನೀವು ಬಂದು ನಮ್ಮ ಹೊಲ ತುಗೊಂಬುದಿಲ್ಲ ಅಂತ ಹೇಳುವರೆಗೂ ಆ ಜಾಗ ಬಿಟ್ಟು ಕದಲೋದಿಲ್ಲ ಅಂತ ಹಟಾ ಹಿಡಿದಾನ. ನೀವು ಸ್ವಲ್ಪ ಅಲ್ಲಿವರೆಗೆ ಬಂದು ಅಂವಗ ಬುದ್ಧಿ ಹೇಳಿದ್ರ ಉಪಕಾರ ಆಕೈತ್ರಿ ದನ್ಯಾರ.’
‘ನಮ್ಮ ನೋರೆಂಟು ಜಂಜಾಟದಾಗ ಎಲ್ಲಿ ಆಕ್ಕೆತಲೆ ಅದು. ನೋಡು ಒಂದು ಕೆಲಸ ಮಾಡು. ಇವತ್ತೊಂದಿನ ಮುದಕ ಆ ಪೆಂಡಾಲದಾಗ ಬಿದ್ದಿರಲಿ. ನೀನು ಈಗಿಂದ ಈಗ ನಿಮ್ಮಣ್ಣ ತಿಮ್ಮೇಶಿಗೆ ಫೆÇೀನು ಮಾಡಿ ಅಂವಂಗ ಬರಾಕ ಹೇಳು. ಮೊದಲು ನೀವು ಇಬ್ಬರು ಅಣ್ಣ ತಮ್ಮ ಮಾತಾಡಕೋರಿ. ಮುದುಕಂದೂ ಎಲ್ಲ ಆಗೇತಿ ಹೋಗೆತಿ. ನೀವು ಹೊಲ ಮಾರಬೇಕಂತ ಮಾಡಿದ್ರ ನಿಮ್ಮಪ್ಪನ ಆಟ ನಡಿಲಾರದಂಗ ಮಾಡಬಹುದು. ನಾನು ನಿಮ್ಮಣ್ಣನ ಕೂಡ ಫೆÇನಿನೊಳಗ ಮಾತಾಡತೇನಿ. ನೀನು ಹೋಗಿ ಫೆÇನು ಮಾಡು' ಎಂದು ಸಿಗರೇಟ್ ಹಚ್ಚಿದ ಗೌಡರು ಮತ್ತೆ ಲೆಕ್ಕದಲ್ಲಿ ಮುಳುಗಿದರು.
ಕೊನೆಗೆ ಗೌಡ್ರ ನಿರ್ಧಾರವೇ ಗೆದ್ದಿತು. ಬೆಂಗಳೂರಿನಿಂದ ಬಂದ ಹಿರಿಮಗ ತಿಮ್ಮೇಶಿ ಮೊದಲು ವಿಕಾಸಪ್ಪನೊಡನೆ ದೀರ್ಘ ಚರ್ಚೆ ನಡೆಸಿದ. ನಂತರ ಗುದ್ಲೆಪ್ಪಜ್ಜನ ಸರ್ಕಲ್‍ಗೆ ಹೋಗಿ ನಿತ್ರಾಣಗೊಂಡು ಮಲಗಿದ್ದ ಕಲ್ಲಜ್ಜನನ್ನು ಕೂಡಿಸಿ `ನೀ ಮುದುಕಾದಿ. ಹೊಲ ತುಗೊಂಡು ಏನು ಮಾಡಿತಿ. ಹೊಲ ಬೇಕು ಬೇಡ ಅಂತ ನಾವು ತಿರ್ಮಾನ ಮಾಡತೆವಿ. ನಮಗ ಹೊಲ ಮಾಡೂದು ನೀಗಲಾರದಕ್ಕ ಬ್ಯಾರೆ ಕಡೆ ಕೆಲಸಕ್ಕ ಹೊಂಟೆವಿ. ನೀ ಇಲ್ಲಿ ಇಲ್ಲದ ಉಸಾಬರಿ ಮಾಡಕೊಂಡು ದಣ್ಯಾರ ಕೂಡ ಮುಖ ಕೆಡಿಸಿಕೊಂಡ ಕುಂತಿ. ಹೊಲ ಮಾರಿದ ಮ್ಯಾಲ ನೀನು ಬಂದು ಬೆಂಗಳೂರಿಗೆ ಬರುವಂತಿ. ಈಗ ಮನಿಗೆ ನಡಿ' ಎಂದು ಬೈಯ್ದು ಬುದ್ಧಿ ಹೇಳಿ ಮನೆಗೆ ಕರಕೊಂಡು ಬಂದ.
*
ಇದೆಲ್ಲ ನಡೆದು ಮೂರ್ನಾಲ್ಕು ವರ್ಷಗಳ ಗತಿಸಿವೆ. ತಿಮ್ಮೇಶಿ ತಾನು ಕೊಟ್ಟ ಮಾತಿನಂತೆ ಹೆತ್ತೊಡಲುಗಳನ್ನು ಬೆಂಗಳೂರಿಗೆ ಕರಕೊಂಡು ಹೋದ. ಜಮೀನು ಮಾರಿ ಬಂದ ದುಡ್ಡಿನಲ್ಲಿ ಒಂದು ಚಿಕ್ಕಮನೆಯನ್ನು ಲೀಜ್‍ಗೆ ಹಾಕಿಸಿಕೊಂಡು ಬದುಕಿನ ಬಂಡಿ ನೂಕುವುದಕ್ಕೆ ಹೆಣಗಾಡತೊಡಗಿದ. ಮನೆ ಅಂದ್ರೆ ಅದೊಂದು ಚಿಕ್ಕ ರೂಮು. ಅದರ ನಡುವೆ ಆಳೆತ್ತರದ ಗೊಡೆ ಎದ್ದು ಅಡುಗೆ ಮನೆ ವಿಭಾಗಿಸಿರುವಂಥದ್ದು. ಆ ಚಿಕ್ಕ ಮನೆಯಲ್ಲಿ ಮಗ, ಸೊಸೆ, ಇಬ್ಬರು ಮಕ್ಕಳು ಮತ್ತು ಕಲ್ಲಜ್ಜನೆಂಬ ಹೊಸ ಸದಸ್ಯ. ಸೊಸೆ ದಿನ ರಾತ್ರಿ ಹೂ ಪೆÇೀಣಿಸಿ ಸಂಸಾರ ಬಂಡಿಗೆ ಹೆಗಲು ಕೊಡುತ್ತಿದ್ದಳು. ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದ ಮಗ ಬೆಳಗಿನ ಜಾವ ಮನೆ ಬಿಟ್ಟು, ಡ್ಯೂಟಿ ಮ್ಯಾಲ ಓಟಿ ಮಾಡಿ ತಡರಾತ್ರಿ ಮನೆಗೆ ಬರುತ್ತಿದ್ದ.
ಯಾವಾಗಲೂ ಬಯಲು ಹೊಲದಲ್ಲಿ, ಮರಗಿಡಗಳ ನೆರಳಲ್ಲಿ ಬದುಕು ಸಾಗಿಸಿದ್ದ ಮುದುಕರಿಗೆ ಬೆಂಗಳೂರು ಜೀವನ ಹೇಗೆ ಒಗ್ಗಲು ಸಾಧ್ಯ. ಆದರೂ ದಿನ ನೂಕಬೇಕು ಹಿರಿಯ ಜೀವಗಳೆರಡು ದಿನಗಳೆದಂತೆ ಮೂಕವಾಗುತ್ತಾ ಹೋದವು. ರತ್ನವಜ್ಜಿ ಒಂದು ದಿನ ಬಚ್ಚಲಿನಲ್ಲಿ ಬಿದ್ದ ನೆಪದಿಂದ ಚಪ್ಪೆ ಮುರಿದುಕೊಂಡವಳು ಅದೆ ನೆಪದಲ್ಲಿ ಹಾಸಿಗೆ ಹಿಡಿದುಬಿಟ್ಟಳು. ಗಾರ್ಮೇಂಟ್ಸ್‍ನಲ್ಲಿ ನಾಲ್ಕಂಕಿಯ ಸಂಬಳ ಪಡೆಯುತ್ತಿದ್ದ ತಿಮ್ಮೇಶಿ ಕೆಲವು ದಿನ ಸರಕಾರಿ ಆಸ್ಪತ್ರೆಗೆ ಅಲೆದಾಡಿದಂತೆ ಮಾಡಿ ಆಮೇಲೆ ಮೌನವಾಗಿಬಿಟ್ಟ. ದಿನಗಳೆದಂತೆ ಮುದುಕಿಯ ಮೈ ಕರಗತೊಡಗಿದ್ದನ್ನು ನೋಡಿ ರತ್ನವಜ್ಜಿ ಕೈ ಬೀಡುವುದು ಯಮುನಜ್ಜನಿಗೆ ಖಾತ್ರಿಯಾಯಿತು. ಇನ್ನು ಇಲ್ಲೆ ಇದ್ದರೆ ಗತಿಗೆಡುತ್ತದೆ ಎಂದು ಮುದುಕಿನ ಹೆಂಗಾರ ಮÀiÁಡಿ ಊರಿಗೆ ಕರೆದೊಯ್ಯಿ ಎಂದು ಕಲ್ಲಜ್ಜ ತಿಮ್ಮೇಶಿಗೆ ದುಂಬಾಲು ಬಿದ್ದ. ಆದರೆ, ಈಗಾಗಲೆ ಸಾವಿರಾರು ರೂ.ಆಸ್ಪತ್ರೆಗಗಿ ಕೈ ಬಿಟ್ಟಿದ್ದರಿಂದ ತಿಮ್ಮೇಶಿ ಹೂಂ ಅಥವಾ ಉಹುಂ ಎನ್ನಲಿಕ್ಕಾಗದೆ ಕಣ್ಣೀರು ಬರಿಸಿಕೊಂಡು ತಂದೆಯ ಮುಖ ನೋಡಿದ. ಸುಕ್ಕುಗಟ್ಟಿದ ಅಜ್ಜನ ಗಲ್ಲದ ಮೇಲೂ ಕಣ್ಣ ಹನಿ ದುಂಡುಗಟ್ಟಿತ್ತು.
ಅಂದು ಅಪರಾತ್ರಿಯೇ ಮುದುಕಿ ಜೀವ ಕಲ್ಲಜ್ಜನ ತೊಡೆಯ ಮೇಲೆ ಜೀವ ಬಿಟ್ಟಳು. ತಿಮ್ಮೇಶಿ ಏನೂ ಮಾಡುವುದು ಗೊತ್ತಾಗದೆ ಹೆಣ ಸಾಗಿಸೋ ಟಿಂಪೆÇೀಗಾಗಿ ನಗರಪಾಲಿಕೆಗೆ ಫೆÇೀನು ಮಾಡಿದ. ಆ ಕಡೆಯಿಂದ `ಬೆಳಗ್ಗೆವರೆಗೆ ಕಾಯಿರಿ' ಅನ್ನೋ ಉತ್ತರದಿಂದ ಅಲ್ಲೆ ಕುಸಿದು ಕುಳಿತ. ಅಳಲಿಕ್ಕೂ ಆಗದ, ನೆಮ್ಮದಿಯಿಂದ ಮಲಗಲಿಕ್ಕೂ ಆಗದ ಸೊಸೆ ಮಕ್ಕಳೊಂದಿಗೆ ಹೆಣಕ್ಕೆ ಸ್ವಲ್ಪ ದೂರದಲ್ಲಿಯೇ ನಿದ್ರೆಯಿಲ್ಲದೆ ಹೊರಳಾಡಿದಳು. ಬೆಳಗ್ಗೆವರೆಗೆ ಕಲ್ಲಜ್ಜನ ಕಣ್ಣುಗಳು ರತ್ನವ್ವಜ್ಜಿಯ ಮುಖದ ಮೇಲೆ ತೊಟ್ಟು ತೊಟ್ಟಾಗಿ ಕಣ್ಣ ಹನಿ ಚಲ್ಲುತ್ತಲೇ ಇದ್ದವು.
ಬೆಳಗ್ಗೆ ತಿಮ್ಮೇಶಿ ನಾಲ್ಕಾರು ಜನ ಗೆಳೆಯರಿಗೆ ಫೆÇೀನು ಮಾಡಿ ಅವ್ವ ಸತ್ತಿದ್ದನ್ನು ತಿಳಿಸಿದ. ಒಂದಿಬ್ಬರು ಪೆÇೀನಿನಲ್ಲಿಯೇ ಸಂತಾಪ ಸೂಚಿಸಿದರೆ, ಮತ್ತಿಬ್ಬರು ಹೆಣ ಎತ್ತುವ ಸಮಯಕ್ಕೆ ತಮ್ಮ ಬೈಕುಗಳಲ್ಲಿ ಮನೆಯ ಮುಂದೆ ಹಾಜರಾದರು. ನಾಗರಪಾಲಿಕೆಯ ಟೆಂಪೂ ಎಂಬ ಗೂಡಿನಲ್ಲಿ ರತ್ನವ್ವಜ್ಜಿಯ ಕೊನೆಯ ಯಾತ್ರೆ ಸಾಗಿದ್ದನ್ನು ಕಂಡು ಕಲ್ಲಜ್ಜ ಮತ್ತಷ್ಟು ಗೋಳಾಡತೊಡಗಿದ. ಮುದುಕಿ ಒಂದು ವೇಳೆ ಬದುಕೂರಿನಲ್ಲಿ ಜೀವ ಬಿಟ್ಟಿದ್ದರೆ, ಬಾಳೆಗೊನೆಯ ಮಂಟಪದಲ್ಲಿ ಮೈಮುಚ್ಚುವಷ್ಟು ಹೂ-ಹಾರಗಳಿಂದ ಅಲಂಕೃತಗೊಂಡು ಕಿ.ಮೀ.ಗಟ್ಟಲೆ ನೆರೆದ ಜನಜಾತ್ರೆಯ ಮಧ್ಯೆ ಮುದಕಿಯ ಕೊನೆಯ ಯಾತ್ರೆ ಸಾಗಬಹುದಾದ ಚಿತ್ರ ಅಜ್ಜನ ಕಣ್ಣಗುಬ್ಬೆ ಮೇಲೆ ಬಂದು ಏನೆಯಾದರೂ ಜೀವ ಮಾತ್ರ ಬೆಂಗಳೂರಿನಲ್ಲಿ ಬೀಡಬಾರದು ಅಂತ ಯಮುನಜ್ಜ ಅವತ್ತೆ ಸಂಕಲ್ಪ ಮಾಡಿಕೊಂಡ.
ಹರಿಶ್ಚಂದ್ರ ಘಾಟಿನ ವಿದ್ಯುತ್ ಚಿತಾಗಾರದ ಎದುರು ನಳದ ಮುಂದೆ ಕೊಡಪಾನ ಪಾಳಿಗಿಟ್ಟಂಗ ತರಾವರಿ ಹೆಣಗಳನ್ನು ಪಾಳಿಗಿಟ್ಟು ಅವುಗಳ ಸಂಬಂಧಿಕರು ಅಲ್ಲೆ ಕಲ್ಲುಬೆಂಚಿನ ಮುಂದೆ ಹರಟೆ ಹೊಡಕೋತ ಕಾಯುತ್ತಾ ಕುಳಿತಿದ್ದರು. ದೇವರಂತೆ ಸಿಂಗಾರಗೊಂಡಿದ್ದ ಹೆಣಗಳ ಬಾಡಿಯೊಳಗೆ ನೋಣಗಳು ಪ್ರವಾಸ ಕೈಗೊಂಡಿದ್ದವು.
ಜೀವ ಇದ್ದಾಗಲೂ, ಇಲ್ಲದಾಗಲೂ ಮನುಷ್ಯನಿಗೆ ಬೆಲೆಯೆ ಇಲ್ಲದ ಈ ನಗರಗಳಲ್ಲಿ ಮನುಷ್ಯರ ಬದುಕು ಮೃಗ- ಯಂತ್ರಗಳಿಗಿಂತಲೂ ಕಡೆ ಎಂಬ ಯೋಚನೆಗೆ ಬಿದ್ದ ಕಲ್ಲಜ್ಜ ತನಗೆ ಹುಚ್ಚು ಹಿಡಿಯುವ ಮುನ್ನ ರತ್ನವ್ವನ ಅಂತಿಮ ಕ್ರಿಯೆ ನಡೆದುಬಿಡಲಿ ಎಂದು ಸಿಡಿಯುತ್ತಿರುವ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಕಾಯುತ್ತ ಕೂತ.
ರತ್ನಜ್ಜಿ ಹೆಣದ ಪಾಳಿ ಬಂದುದು ಗೊತ್ತಾಗಿ ಕಲ್ಲಜ್ಜ ಎದ್ದು ಬಂದ ಯಾಂತ್ರಿಕವಾಗಿ ಪೂಜೆ ಮುಗಿಸಿದ. ಹೆಣ ಯಂತ್ರದ ಬಾಯಾಗ ಕೊಟ್ಟು ಅಂಗಡಿ ಶೆಟರ್ ಎಳೆದಂತೆ ಅದರ ಬಾಗಿಲು ಮುಚ್ಚಿ ಕ್ಷಣದ ನಂತರ ತೆರೆದರೆ ಅಲ್ಲೆನಿದೆ? ನಿಗಿ ನಿಗಿ ಕೆಂಡದಲ್ಲಿ ಮುದುಕಿ ಮಾಯವಾಗಿದ್ದಳು. ಜೀವವೂ ಕ್ಷಣಿಕ, ದೇಹವೂ ಕ್ಷಣಿಕ.
ಮುದುಕಿ ಹೋದ ಮೇಲೆ ಯಮುನಜ್ಜನಿಗೆ ಬೆಂಗಳೂರಿನಿಂದ ಯಾವಾಗ ಬಿಡುಗಡೆ ಹೊಂದೆನೋ ಅನ್ನೊ ಚಡಪಡಿಕೆ ಶುರುವಾತು. ಮೊಮ್ಮಕ್ಕಳೊಂದಿಗಿನ ಆಟ, ಸೊಸೆಯ ಪ್ರೀತಿ, ಮಗನ ಗದರಿಕೆ ಎಲ್ಲದರಿಂದ ಕೊಸರಿಕೊಂಡು ಆತ ಮೂರ್ನಾಲ್ಕು ವರ್ಷಗಳ ನಂತರ ಹಟ ಹಿಡಿದು ಮತ್ತೆ ಹಳ್ಳಿ ಕಡೆ ಬಸ್ ಹತ್ತಿದ. ಅಜ್ಜನ ದಣಿದ ಮೈಮನಸ್ಸುಗಳಿಗೆ ಹಳೆಯ ನೆನಪುಗಳು ಕಾಡಿಸಿ ಆಗಷ್ಟೆ ನಿದ್ರೆಗೆ ದೂಡಿದ್ದವು.
ಆಕಾಶವೇ ತುಂಬಿಕೊಂಡಂತಿರುವ ಕಾಂಕ್ರೀಟ್ ಬಣ್ಣದ ಪಕ್ಷಿಯೊಂದು ಬದಕೂರಿನ ಅಗಸಿ ಬಾಗಿಲ ಮೇಲೆ ಕುಳಿತಿದೆ. ಅದು ತನ್ನ ಭಾರೀ ಗಾತ್ರದ ರೆಕ್ಕೆಗಳನ್ನು ಪಟಪಟನೆ ಬಡಕೊತ ಬದಕೂರಿನ ಸಣ್ಣ ಸಣ್ಣ ಮಣ್ಣಿನ ಮನೆಗಳನ್ನು ಕುಕ್ಕಿ ಕುಕ್ಕಿ ತಿನ್ನುತ್ತಿದೆ. ಇಡೀ ಬದುಕೂರೆಂಬ ಬದುಕೂರೆ ಖಾಲಿಯಾದಾಗ ರೆಕ್ಕೆಯ ಚುಂಗಿನಿಂದ ಚುಂಚನ್ನು ಒರೆಸಿಕೊಂಡ ಹಕ್ಕಿ ಅಳಿದುಳಿದ ಮಣ್ಣಿನ ಮನೆಗಳ ಅವಶೇಷಗಳ ಮೇಲೆಯೇ ನೆಮ್ಮದಿಯಿಂದ ದೊಡ್ಡ ದೊಡ್ಡ ಮೊಟ್ಟೆಗಳನ್ನು ಇಡುತ್ತಿದೆ. ಆ ಮೊಟ್ಟೆಗಳೋ ಕ್ಷಣಾರ್ಧದಲ್ಲಿ ನಳನಳಿಸುವ ಕಾಂಕ್ರೀಟ್ ಕಟ್ಟಡಗಳಾಗಿ ಬದಲಾಗುತ್ತಿವೆ. ಕಲ್ಲಜ್ಜ ಊರ ಮುಂದಿನ ಹೊಲದಲ್ಲಿನ ತನ್ನಪ್ಪ ಯಮುನಜ್ಜನ ಗೋರಿಯ ಸಮೀಪ ಕುಳಿತು ದಿಗ್ಮೂಡನಾಗಿ ಈ ವಿಸ್ಮಯ ನೋಡುತ್ತಿದ್ದಾನೆ. ಮೊಟ್ಟೆಯಿಟ್ಟಾದ ಮೇಲೆ ನಿಸೂರಾಗಿ ಉಸಿರುಬಿಟ್ಟು ರೆಕ್ಕೆ ಪಟಪಟಿಸಿದ ಹಕ್ಕಿ, ಮತ್ತೆ ತಿನ್ನಲು ಹುಡುಕಾಡುತ್ತಾ ಯಮುನಜ್ಜನ ಗೋರಿಯತ್ತಲೆ ಕತ್ತು ಕೊಂಕಿಸಿ ಮುಂದಡಿಯಿಡತೊಡಿಗಿದೆ. ಸತ್ನೋ ಕೆಟ್ನೋ ಎಂದು ಒಮ್ಮೆಲೆ ಎದ್ದು ಬಂದು ಗೋರಿಯ ಮೇಲೆ ಉದ್ದಕ್ಕೆ ಮಲಗಿಕೊಂಡ ಕಲ್ಲಜ್ಜ, ತಿನ್ನುವುದಾದರೆ ನನ್ನ ತಿನ್ನು ಎಂದು ಹಕ್ಕಿಯ ಮುಂದೆ ಪರಿಪರಿಯಾಗಿ ಗೋಳಾಡತೊಡಗಿದ.
ಬಸ್ಸಿನಲ್ಲಿದ್ದ ಜನ ಎಲ್ಲ ಒಮ್ಮೆಲೆ ಗಾಬರಿಯಾಗಿ ಚೀರುತ್ತಾ ಬಸ್ ನಿಲ್ಲಿಸುವಲ್ಲಿ ಯಶಸ್ವಿಯಾದರು. ಸೀಟುಗಳ ಮಧ್ಯ ಉದ್ದಕ್ಕೆ ಮಲಗಿಸಿದ ಕಲ್ಲಜ್ಜನನ್ನು ಎಬ್ಬಿಸಿ ಮುಖಕ್ಕೆ ನೀರು ಚಿಮುಕಿಸಿ ಉಪಚರಿಸಿ ಮತ್ತೆ ಸೀಟಿಗೆ ಕೂಡ್ರಿಸಿದರು. ನುಂಗಲು ಬಂದ ಹಕ್ಕಿ ಕನಸಿನಲ್ಲಿ ಎಂದು ಕಲ್ಲಜ್ಜನಿಗೆ ಮನವರಿಕೆಯಾಗುವಷ್ಟರಲ್ಲಿ ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರ ಕಣ್ಣಲ್ಲಿ ಆತ ಅರೆಹುಚ್ಚನಾಗಿಬಿಟ್ಟಿದ್ದ.
*
ತಾನು ಬದುಕೂರಿಗೆ ಬಂದೆನೋ ಅಥವಾ ಅಪ್ಪಿ ತಪ್ಪಿ ಬೆಂಗಳೂರಿನಲ್ಲಿಯೇ ಇಳಿದುಬಿಟ್ಟೆನೋ ಅನ್ನೊ ಅನುಮಾನ ಅಜ್ಜನಿಗೆ ಒಂದು ಕ್ಷಣ ಬಂದು ಹೋಯಿತು. ಹಳ್ಳಿಯಲ್ಲ ಅದಲು ಬದಲು. ಮರಗಿಡಗಳ ಗವುಗನ್ನು ಬೃಹದ್‍ಗಾತ್ರದ ಕಾಂಕ್ರೀಟ್ ಕಟ್ಟಡಗಳು ಆವರಿಸಿಕೊಂಡಿವೆ. ಊರ ಸುತ್ತಲಿನ ಎಲ್ಲ ಜಮೀನನ್ನು ಪ್ಯಾಕ್ಟರಿಯ ಆಳೆತ್ತರದ ಕಂಪೌಂಡು ಆವರಿಸಿ ಮುಚ್ಚಿ ಹಾಕಿದೆ. ಅಜ್ಜನ ಎರೆಡೇಕ್ರೆಯಂತೂ ಪತ್ತೆಯೇ ಆಗೂದಿಲ್ಲ. ಬ್ಯಾಂಗಲೋರ್ ಎಂಬ ರಣಹದ್ದು ಎಲ್ಲ ಬದುಕೂರಿನಂಥ ಚಿಲಿಪಿಲಿ ಹಕ್ಕಿಗಳನ್ನು ನುಂಗಿ ತನ್ನ ಬೃಹತ್ ಕಾಂಕ್ರೀಟ್ ಮೊಟ್ಟೆಗಳನ್ನೆ ಇಡುತ್ತಾ ಹೊರಟಿರುವಂತಿದೆ ಎಂದು ಅಜ್ಜ ಚಿಂತೆಗೆ ಬಿದ್ದ.
ಬಸ್ ನಿಲ್ದಾಣದಲ್ಲಿ ಎಂಥೆಂಥದೋ ಕಾಂಪ್ಲೆಕ್ಸಗಳು, ಊರಲ್ಲಿ ನಳನಳಿಸುತ್ತಿದ್ದ ಗಿಡಮರಗಳ ಜಾಗದಲ್ಲಿ ಈಗ ಟಿವಿ ಎಂಟೇನಾಗಳು, ಮೊಬೈಲ್ ಟವರ್‍ಗಳು ತಮ್ಮ ಸಾಮ್ರಾಜ್ಯದ ಕುರುಹನ್ನು ಸಾರುತ್ತಿವೆ. ಹುಡುಗರೆಲ್ಲ ಹಿಂದೆ ಹಿಪ್ಪಿ, ಮುಂದೆ ಹೋತದ ಗಡ್ಡ ಬಿಟ್ಟುಕೊಂಡು ಕುಂಡಿ ಕೆಳಗಿನ ಜೀನ್ಸ್ ಮೇಲೆಳೆದುಕೊಳ್ಳತ್ತಾ, ಕಬ್ಬಡ್ಡಿ, ಕುಸ್ತಿ ಮರೆತು ಕ್ರಿಕೇಟ್ ಆಡುವಲ್ಲಿ ಮಗ್ನರಾಗಿದ್ದಾರೆ. ತಡರಾತ್ರಿವರೆಗೆ ಪ್ಯಾಕ್ಟರಿಯಲ್ಲಿ ದುಡಿದು ಬರುವ ಹೆಂಗಸರು ತಮ್ಮ ಬದುಕಿನ ಕಹಿ ಸತ್ಯಗಳನ್ನು ಮರೆಯಲು ಮಾಯಾವಿ ಟಿವಿಯೊಳಿಗಿನ ದಾರಾವಾಹಿಗಳಿಗೆ ಮೊರೆ ಹೋಗಿದ್ದಾರೆ.
ಅಳಿದುಳಿದ ಬದುಕು ಪೊರೆಯುವುದಕ್ಕಾಗಿ ಅಜ್ಜ ಪ್ಯಾಕ್ಟರಿಯ ಗೇಟ್ ಕಡೆ ಹೆಜ್ಜೆ ಹಾಕಿದ. ಇಡಿ ಬದುಕು ಸವೆಸಿದ್ದ ಬದುಕೂರಿನಲ್ಲಿಯೇ ಅಜ್ಜನನ್ನು ಪ್ಯಾಕ್ಟರಿಯ ಸೆಕ್ಯೂರಿಟಿ ಗಾರ್ಡ್ ‘ಯಾರು’ ಎಂದು ಕೇಳಿ ಬೆಚ್ಚಿ ಬೀಳಿಸಿದ.
ವಿಧಿಯಿಲ್ಲದೆ ಅಜ್ಜ `ನಾ. ಇದ ಊರಾಂವ್ರಿ. ಈ ಪ್ಯಾಕ್ಟರಿಗೆ ಜಮೀನು ಮಾರಿನ್ರಿ. ನನಗ ಯಾವುದಾದರೂ ಕೆಲಸ ಕೊಟ್ಟು ಪುಣ್ಯ ಕಟ್ಟಕೊಳ್ರಿ' ಎಂದು ತನ್ನ ಹಳ್ಳಿ ಶೈಲಿನಲ್ಲಿ ಬೆಪ್ಪನಂತೆ ಕೇಳಿದ. ಸೆಕ್ಯೂರಿಟಿಗೆ ಇವನ ಮಾತುಗಳು ಅರ್ಥವಾಗದೆ ಅಲ್ಲೆ ಅಡ್ಡಾಡುತಿದ್ದ ಕುತ್ತಿಗೆಗೆ ಟೈ ಕಟ್ಟಿದವನೊಬ್ಬನನ್ನು ಕರೆದು ಇವನ ಸಮಸ್ಯೆ ಹೇಳಿದ. ಅಜ್ಜ ಇವನ ಮುಂದೆಯೂ ಮೊದಲಿನ ಬೆಪ್ಪುತನ ರಿಪೀಟ್ ಮಾಡಿದ.
ಅಜ್ಜನಿಗೆ ಏನು ಹೇಳಬೇಕೆಂದು ಗೊತ್ತಾಗದೆ ಟೈದಾರ ‘ಎಲ್ಲಿ, ನಿನ್ನ ರೆಜ್ಯುಮ್ ತೋರಿಸು’ ಎಂದು ತನ್ನ ಟೈ ಸರಿಪಡಿಸಿಕೊಂಡ. ಅಜ್ಜ ರೆಜ್ಯುಮ್ ಎಂದರೆ ಎನೆಂದು ಗೊತ್ತಾಗದೆ ಕಂಗಾಲಾಗಿ ತಲೆ ಕರೆದುಕೊಳ್ಳುತ್ತಾ ಮುಗಿಲ ಸೂರ್ಯನೆಡೆಗೆ ನೋಡಿದ. ಬದಕೂರಿನ ಸೂರ್ಯ ಮಾಯಾವಿ ಕಾಂಕ್ರೀಟ್ ಹಕ್ಕಿಯ ರೆಕ್ಕೆಯಡಿ ಸಿಕ್ಕು ಅಸ್ತಗಂತನಾಗಿದ್ದ.
* * *
No comments:
Post a Comment