ಊರು ಸುಟ್ಟರೂ ಹನುಮಪ್ಪ ಹೊರಗ
ಆಗಿನ್ನೂ ಸೂರ್ಯಾ ಎಳ್ಲೋ ಬ್ಯಾಡೋ ಅಂತ ಕಣ್ಣು ಬಿಡಾಕ ಹತಿದ್ದ. ಊರ ನಡುವಿನ ಬಿದ್ಯಾಗ "ಗುಡ್ಯಾನ ಹನುಮಪ್ಪ ಕಳುವಾಗ್ಯಾನಪೊ ಎಂತ ಪುಜೇರಪ್ಪ ಲಬೊ... ಲಬೊ... ಹೊಯ್ಕೊತ ಜೋರಲೇ ಒಡಾಕ ಹತ್ತಿದ್ದ. ತಂಬಿಗೆ ಹಿಡಕೊಂಡು ಎರಡಕ್ಕೆ ಹೊರಟವರು, ಈಗಿನ್ನ ಎದ್ದು ಒಂದಕ್ಕ ಮಾಡುತ್ತಿದ್ದ ಹೈಕಳುಗಳು, ಬಿದ್ದಲ್ಲೆ ಬಿದ್ದು ಹುಡಗೀರ ಕನಸು ಕಾಣುತ್ತಿದ್ದ ಪಡ್ಡೆ ಹುಡುಗರು, ಬಚ್ಚಲದಾಗ ಜಳಕ ಮಾಡುತ್ತಿದ್ದ ಮಡಿವಂತರು, ಎತ್ತಿನ ಮೈ ತೊಳೆಯುತ್ತಿದ್ದ ರೈತರು, ಸಗಣಿ ಕಸ ಗುಡಿಸುತ್ತಿದ್ದ ಆಳುಮಕ್ಕಳು, ಚಳಿ ತಡಿಲಾರದ ಚುಟ್ಟಾ ಸೇದುತ್ತಿದ್ದ ಮುದಕರು ಒಟ್ಟಿನಲ್ಲಿ ಇಡೀ ವಜ್ರಗಟ್ಟಿ ಊರೆಂಬೋ ಊರು ದಿಗಿಲುಗೊಂಡು ಪುಜಾರಿಯ ಬೆನ್ನ ಹಿಂದೆ ಬಿತ್ತು.
ನಿನ್ನೆ ಮಾಡಿದ ಪಾಪ ಕರ್ಮಗಳನ್ನು ತೊಳೆದುಕೊಳ್ಳಲು ಜಳಕ ಮಾಡಿ, ಭಸ್ಮ ಬಳಕೊಂಡು, ಬಕ್ಕ ಮೈಯಲ್ಲಿ ಹನುಮಪ್ಪನ ಗುಡಿಗೆ ಹೊಂಟಿದ್ದ ಗ್ರಾಮ ಪಂಚಾಯಿತಿ ಚೇರಮನ್ನರು, ಇಡಿ ಊರಿಗೆ ಊರೇ ತನ ಮನೆಯತ್ತ ದಾಂಗುಡಿಯಿಡುತ್ತಿದ್ದುದನ್ನು ನೋಡಿ ಒಂದು ಕ್ಷಣ ಹೌಹಾರಿ, ಮತ್ತೊಂದು ಏಕಿರಬಹುದೆಂದು ಭಯ ವಿಹ್ವಲತೆಯಿಂದ ಚಿಂತಿಸತೊಡಗಿದರು. ಚೇರಮನ್ನರನ್ನು ಕಾಣುಗಂಟ ಹೊಯ್ಕೊಳ್ಳುತ್ತಿದ್ದ ಪುಜಾರಿ, ಅವರನ್ನು ಕಂಡೊಡನೆ ವಿಶಿಷ್ಟ ರಾಗದಲ್ಲಿ ಅಳತೊಡಗಿದ. ಚೇರಮನ್ರಿಗೆ ಕಿರಿಕಿರಿಯಾಗಿ ಬೈದು ಬೆದರಿಸಿ, ಕಾರಣವೆನೆಂದು ಕೇಳಿದರು. ತನ್ನ ರಾಗಕ್ಕೆ ಸ್ವಲ್ಪ ಬ್ರೇಕ್ ನೀಡಿದ ಪುಜಾರಿ "ಹನುಮಂತ ದೇವರನ್ನು ತುಡಗಮಾಡ್ಯರ" ಎಂದು ಹೇಳಿ ಮತ್ತೆ ತನ್ನ ರಾಗಕ್ಕೆ ಚಾಲನೆ ನೀಡಿದ. ಚೆರಮನ್ನರು ಒಂದು ಕ್ಷಣ ದಂಗಾದರು. ಪ್ರತಿದಿನದ ಪಾಪಗಳನ್ನು ಹನುಮಂತನ ದರ್ಶನದಿಂದ ತೊಳಕೊತಿದ್ನಿ, ಇನ್ನ ಮುಂದ ಯಾರ ದರ್ಶನದಿಂದ ಪಾಪ ತೊಳಕೊಳ್ಳುದು. ಹಿಂದ ಮಾಡಿದ ಪಾಪಗಳನ್ನು ತೊಳಕೊಳ್ಳಲಾರದ ಮುಂದ ಪಾಪಗಳನ್ನು ಹ್ಯಂಗ ಮಾಡುದು ಎಂದು ತನ್ನೊಳಗ ಚಿಂತಿ ಮಾಡಾಕ ಹತ್ತಿ, ಚಿಂತಿಗೆ ಪರಿಹಾರ ಗೊತ್ತಾಗಲಾರದ ತಾನೂ ಪುಜಾರಿ ಜೊತೆ ರಾಗ ಸೇರಿಸಿ ಅಳಬೇಕೆಂದನು. ಆದರೆ ಸುತ್ತಮುತ್ತಲ ಮಂದಿ ನೊಡಿ ಮರ್ಯಾದೆಗಂಜಿ ಅಳು ನುಂಗಿಕೊಂಡನು.
"ನಮ್ಮ ಊರಿನವರ ಭಕ್ತಿ ಕಡಿಮೆ ಆಗಿರೊದ್ರಿಂದ ಬೇಸತ್ತ ಹನುಮಪ್ಪ ನಮ್ಮ ಊರು ಬಿಟ್ಟು ತಪ್ಪಿಸಿಗೊಂಡು ಓಡಿ ಹೋಗ್ಯಾನ"
"ಸತ್ಯುಳ್ಳ ಹನುಮಂತನ ಪವಾಡ ಶಕ್ತಿ ಕಂಡು ಬೇರೆ ಊರ ಭಕ್ತರು ಹನುಮಂತನ ಒಲಿಸಿಕೊಂಡು ಕರಕೊಂಡು ಹೋಗ್ಯಾರ"
ತಲೆಗೊಬ್ಬಬ್ಬರು ತಮಗನಿಸಿದ್ದನ್ನು ಒದರತೊಡಗಿದರು.
"ಈಗ ಮುಂದ ಹ್ಯಂಗ ಮಾಡೂದು" ಎಂದು ಚೇರಮನ್ನರು ಜನರ ಒದುರುವಿಕೆಗೆ ಬ್ರೆಕ್ ಹಾಕಿದರು.
"ಎಲ್ಲಾ ಕಡೆ ಹುಡಕಾಡಿಸೋನು"
"ಪೋಲಿಸ್ ಕಂಪ್ಲೆಂಟ್ ಕೊಡೋಣ" ಇಂತಹ ತರಾವರಿ ಸಲಹೆಗಳೂ ಗುಂಪಿನಿಂದ ತೂರಿ ಬರತೊಡಗಿದವು.
"ತನ್ನನ್ನು ತಾನು ಕಾಪಾಡಿಕೊಳ್ಳಲಾರದ ಹನುಮಂತ ದೇವರು ನಮ್ಮನ್ನೆಲ್ಲಾ ಹ್ಯಂಗ ಕಾಪಾಡತಾನ, ಇಂಥ ಕೈಲಾಗದ ದೇವರು ನಮಗ ಬ್ಯಾಡ" ಎಂದು ಒದರಿಬಿಟ್ಟ ಹುಚ್ಚಮಲ್ಲ.
ಜನ ಅವನ ಮೇಲೆ ರಪ್ಪಂತ ಉಗಿಬಿದ್ದು, ಸಾಕಾಗುವಷ್ಟು ಒದ್ದು ಗುಂಪಿನಿಂದ ಹೊರಗೊಯ್ದು ಬಿಟ್ಟರು. "ದಡ್ಡನನ್ನ ಮಕ್ಕಳು, ಸತ್ಯ ಹೇಳಿದರ ಒಪ್ಪಕೊಳ್ಳಾಕ ತಯಾರಿಲ್ಲ" ಎಂದು ಕುಂಟುತ್ತಾ ಹುಚ್ಚಮಲ್ಲ ಹೊರ ಹೋಗುವುದು ಕಾಣಿಸಿತು.
ಈ ಮಧ್ಯ ಹಿರಿಯಜ್ಜನೊಬ್ಬ "ಆ ದೇವಸ್ಥಾನ ಪೂರ್ವಿಕರ ಕಾಲದಿಂದಲೂ ದರೆಗಟ್ಟಗೆ ಸೇರಿದ್ದು. ಆ ಊರಿನ ಹಿರ್ಯಾರಿಗೆ ತಿಳಿಸೂದು ಒಳ್ಳೆದು" ಎಂದು ಸಲಹೆ ನೀಡಿದ. ಬೇರೆ ದಾರಿ ಕಾಣದ ಅವರೆಲ್ಲರೂ ಅಜ್ಜನ ಸಲಹೆಗೆ ಸಮ್ಮತಿಯಿತ್ತು ಕೆಲವು ಯುವಕರಿಗೆ ಸುದ್ದಿ ಮುಟ್ಟಿಸುವ ಜವಾಬ್ದಾರಿ ವಹಿಸಿದರು.
* * * * *
"ಜಡ್ಡು ಜಡ್ಡು ನಕುಕ್ಕ, ನಕ್ಕುಕ್ಕ" ಎಂದು ಹಲಗೆಗಳ ಸಪ್ಪಳ ಮೈಲು ದೂgಕವಿರುವ ಮುಂಚೆಯೇ ವಜ್ರಗಟ್ಟಿಯ ಯುವಕರಿಗೆ ದರೆಗಟ್ಟಿಯಿಂದ ಕೇಳಿಸತೊಡಗಿತು. ಅವರು ಊರಲ್ಲಿ ಯಾರದೋ ಲಗ್ನ ನಡೆತಿರಬಹುದು ಎಂದು ಅಂದಾಜಿಸಿಕೊಂಡರು. ಹತ್ತತ್ತಿರ ಬಂದು ನೊಡಿದರೆ ಟ್ಯಾಕ್ಟರಿನಲ್ಲಿ ಯಾವದೋ ಒಂದು ಮೂರ್ತಿ ಇಟ್ಟು ಮೆರವಣಿಗೆ ಮಾಡುತ್ತಿದ್ದಾರೆ. ದೃಷ್ಟಿಸಿ ನೋಡುತ್ತಾರೆ, ಅರೆ ಅದು ಅದೆ ಗುಡಿಯಲ್ಲಿ ಕಳುವಾದ ಹನುಮಂತ ದೇವರು! ಹನುಮಂತ ತನ್ನ ಸೊಟ್ಟಮೊತಿಯಲ್ಲಿ ಇವರನ್ನು ನೋಡಿ ಅಣಕಿಸಿದಂತಾಯಿತು. ಆ ಮೆರವಣಿಗೆಯಲ್ಲಿ ಭಾಗವಹಿದವರೆಲ್ಲರೂ ಈ ಯುವಕರಿಗೆ ಕಳ್ಳರಂತೆ ಗೊಚರಿಸತೊಡಗಿದರು. ಇವರು ಎನು ಮಾಡಬೇಕೆಂದು ಯೋಚಿಸುವ ಮಂಚೆಯೇ ದರೆಗಟ್ಟಿಯವರು ಈ ಯುವಕರಿಗೆ ದೇವರ ಅನ್ನ ಪ್ರಸಾದ ಹಾಕಿ ಕಳುಹಿಸಿಕೊಟ್ಟರು.
* * * * * *
ದರೆಗಟ್ಟಿ ಗ್ರಾಮ ಈಗ ಕಳುವಾಗಿರುವ ಹನುಮಂತನ ಗುಡಿಯ ಸುತ್ತ ಹತ್ತಾರು ತಲೆಮಾರುಗಳ ಹಿಂದೆ ಸಂಪದ್ಭರಿತತೆಯಿಂದ ನೆಲೆಸಿತ್ತು. ಇಲ್ಲಿನ ಮೊಳಕಾಲೆತ್ತರದ ಗೊಡೆಗಳು, ಮಡಿಕೆ ಕುಡಿಕೆಯ ಚೂರುಗಳು ನಿಧಿüಶೋಧಕ್ಕಾಗಿ ಅಗೆಸಿಕೊಂಡಿರುವ ತಗ್ಗುಗಳು ಇದಕ್ಕೆ ಪುರಾವೆ ಒದಗಿಸುತ್ತವೆ ದರೆಗಟ್ಟಿಯಿಂದ ಕೂಗಳತೆಯಲ್ಲಿ ವಜ್ರಗಟ್ಟಿ ಗ್ರಾಮವಿದ್ದು, ಇಲ್ಲಿಯ ಜನರು ಕೂಡ ದರೆಗಟ್ಟಿಯ ಹನುಮಪ್ಪನಿಗೆ ಅನಾದಿಕಾಲದಿಂದಲೂ ನಡೆದುಕೊಳ್ಳುತ್ತಿದ್ದರು. ಕಾಲಾನಂತರದಲ್ಲಿ ಯಾವದೋ ಹೆಮ್ಮಾರಿ ರೋಗ ಊರೊಳಗೆ ಹೊಕ್ಕು ಒಂದೊಂದೆ ಕುಟುಂಬಗಳನ್ನು ಬಲಿ ತೆಗೆದುಕೊಳ್ಳತೊಡಗಿತಂತೆ. ಇದ್ದು ಬಿದ್ದವರು ಈ ಊರು ಬಿಟ್ಟು ಈಗ ಊರಿಂದ ಮೂರು ಕಿ.ಮಿ. ದೂರದಲ್ಲಿರುವ ಪ್ರದೇಶಕ್ಕೆ ಹೋಗಿ ನೆಲೆಗೊಂಡರಂತೆ ಇಂದು ಅದೆ ಜಾಗ ದರೆಗಟ್ಟಿ ಗ್ರಾಮವೇನಿಸಿಕೊಂಡಿದೆ. ಗುಡಿಯ ಸುತ್ತಲಿನ ಎಲ್ಲ ಮನೆಗಳು ಮಣ್ಣಿನಲ್ಲಿ ಮಣ್ಣಾಗಿದ್ದರೂ ಹನುಮಪ್ಪನ ಗುಡಿ ಮಾತ್ರ ಮುಕ್ಕಾಗದೆ ಹಾಗೆ ಉಳಿದಿದ್ದು, ಎರಡು ಊರಿನ ಭಕ್ತರು ಮೊದಲಿನಂತೆಯೇ ಈಗಲೂ ಕೂಡ ತುಂಬ ಶ್ರಧ್ಧೆಯಿಂದ ನಡೆದುಕೊಳ್ಳುತ್ತಾರೆ.
ಪುಜಾರಿ ಪ್ರತಿದಿನ ಸೂರ್ಯೋದಯಕ್ಕೂ ಮುಂಚೆ ಗುಡಿಗೆ ಹೋಗಿ ಕಸ ಗುಡಿಸಿ ಎಣ್ಣೆ ಬತ್ತಿ ಹಚ್ಚಿ ಎರಡು ಊರಿನ ಭಕ್ತರಿಂದ ನೈವೆದ್ಯ ಸ್ವೀಕರಿಸಿ ಸಂಜೆ ಮನೆಗೆ ತೆರಳುವುದು ರೂಡಿಸಿಕೊಂಡ ಬಂದ ಪದ್ದತಿ. ಆದರೆ ಹತ್ತಾರು ವರ್ಷಗಳ ಹಿಂದೆ ಪುಜಾರಿಕೆ ಅಣ್ಣ ತಮ್ಮಂದಿರ ನಡುವೆ ಹಂಚಿಕೆಯಾಗಿದ್ದು, ಒಂದುವರ್ಷ ಒಬ್ಬರು ಮತ್ತೊಂದು ವರ್ಷ ಮತ್ತೊಬ್ಬರು ಹೀಗೆ ಪಾಳೆ ಪ್ರಕಾರ ಪುಜಾರಿಕೆ ಮಾಡಿಕೊಂಡು ಬರುತ್ತಿದ್ದರು. ಅಣ್ಣನಾದವನಿಗೆ ವಯಸ್ಸಾದುದರಿಂದ ಗುಡಿಗೆ ಹತ್ತಿರವಿರುವ ವಜ್ರಗಟ್ಟಯಲ್ಲಿಯೇ ಜನತಾ ಮನೆ ಮಾಡಿಕೊಂಡು ಕುಟುಂಬದೊಂದಿಗೆ ವಾಸಿಸತೊಡಗಿದನು. ಇದರಿಂದ ಗುಡಿಗೆ ಬೆಳಿಗ್ಗೆ ಹೋಗಿ ದೇವರ ಪೂಜೆ ಮಾಡಲು ಅವನಿಗೆ ಅನುಕೂಲವಾಗಿತ್ತು. ಹೀಗಾಗಿ ಸಹಜವಾಗಿಯೇ ಎರಡು ಊರಿನವರು ಅವನ ಮೇಲೆ ವಿಶೇಷವಾದ ಆದರವನ್ನಿಟ್ಟುಕೊಂಡಿದ್ದರು. ತಮ್ಮ ಮನೆಯಲ್ಲಿನ ವಿಶೇಷ ಪೂಜೆಗಳಿಗೆ ಇನ್ನಾವುದೆ ಧಾರ್ಮಿಕ ಕಾರ್ಯಗಳಿಗೆ ಈ ಹಿರಿ ಪುಜಾರಿಗೆ ಹೆಚ್ಚಿನ ಅಹ್ವಾನಗಳಿರುತ್ತಿದ್ದವು. ಇದರಿಂದ ಹೆಚ್ಚು ಮತ್ಸರಕ್ಕಿಡಾದವಳು ಕಿರಿ ಪುಜಾರಿ ಹಂಡತಿ ಸುಬ್ಬಮ್ಮ. ಅವಳು ಪ್ರತಿದಿನ ತನ್ನ ಗಂಡನ ಮುಂದೆ ಹೊಟ್ಟೆಯೊಳಗಿನವಿಷವನ್ನು ಕಕ್ಕುತ್ತಿದ್ದಳು. ಕ್ರಮೇಣ ಈ ವಿಷ ಕಿರಿ ಪುಜಾರಿಯ ಮೈಯಲ್ಲಾ ಅಡರಿ, ಆತ ಇದಕ್ಕೊಂದು ಪರಿಹಾರಕ್ಕಾಗಿ ಚಿಂತಿಸತೊಡಗಿದನು.
ಒಂದಿನ ಬೆಳಿಗ್ಗೆ ಇದ್ದಕಿದ್ದಂತೆ "ಹನುಮಂತ ನನ್ನ ಕನಸನ್ಯಾಗ ಬರಾಕಹತ್ಯಾನ, ನಿಮ್ಮೂರಿನ ಭಕ್ತರು ನನ್ನ ಗುಡಿ ಮಟ ಬರಾಕ ದೂರ ಆಗಿ ತ್ರಾಸ ಅಕೈತಿ. ಅದಕ್ಕ ಈಗಿನ ಹೊಸ ಊರಾಗ ನನಗೊಂದು ಗುಡಿ ಕಟ್ಟಿಸಬೇಕು, ಬರುವ ಉಗಾದಿಯಂದು ನನ್ನ ಪ್ರತಿಷ್ಠಪನಾ ಅಗಬೇಕು ಎಂದು ಅಪ್ಪಣಿ ಕೊಟ್ಟಾನ" ಎಂದು ಕಂಡ ಕಂಡವರಿಗೆಲ್ಲಾ ಪುಜಾರಿ ಹೇಳ ಹತ್ತಿದನು. ಮೊದ ಮೊದಲು ಜನ ಕಿವಿಗೊಡದಿದ್ದರೂ ಪುಜಾರಿಯ ಬಣ್ಣದ ಮಾತುಗಳಿಗೆ ಮರುಳಾಗಿ ಈ ವಿಷಯನ್ನು ಗಂಭಿರವಾಗಿ ತೆಗೆದುಕೊಂಡರು. ಊರಲ್ಲಿ ಬಿಸಿ ಬಿಸಿ ಚರ್ಚೆಗಳಾಗತೊಡಗಿದವು. ಉದ್ಯೋಗವಿಲ್ಲದ ಬಡಿಗ್ಯಾ ಅದೆನೋ ಕೆತ್ತಿಕೊಂಡ ಎನ್ನುವಂತೆ ರಾಜಕೀಯ ಮರಿ ಪುಡಾರಿ ಹಾಗೂ ಯುವಕ ಸಂಘಧ ಅಧ್ಯಕ್ಷ ಬಸಣ್ಣ ಈ ವಿಷಯವನ್ನು ಪ್ರತಿಷ್ಟೆಯ ವಿಷಯವಾಗಿ ತೆಗೆದುಕೊಂಡನು. ನಮ್ಮೂರು ದೇವರು ನಮ್ಮೂರಾಗಿದ್ರ ಛಂದ, ಅದಕ್ಕ ಊರವ್ರೆಲ್ಲಾ ಸಹಕಾರ ಕೊಡಬೆಕು ಎಂದು ಬಣ್ಣದ ಮಾತುಗಳಿದ ತನ್ನೊಳಗಿನ ಕಿಡಿಯನ್ನು ಎಲ್ಲಿಗೂ ಹರಡತೊಡಗಿ ಹನುಮಂತನನ್ನು ಮೂಲ ಗುಡಿಯಿಂದ ಎತ್ತಂಗಡಿ ಮಾಡಿಕೊಂಡು ಬರುವುದಕ್ಕಾಗಿ ಚಂದಾ ಎತ್ತತೊಡಗಿದನು.
ಉಗಾದಿಯ ಹಿಂದಿನ ದಿನ ಹನುಮಂತನನ್ನು ಗುಡಿಯಿಂದ ಕಿಡ್ನ್ಯಾಪ್ ಮಾಡಿಕೊಂಡು ಬರುವದೆಂದು ಠರಾವುಗಳಾದವು. ಅವತ್ತ ದರೆಗಟ್ಟಿಯ ಜನ ಬೈಕ್, ಟ್ಯಾಕ್ಟರ್‍ಗಳ ಬೆನ್ನೇರಿ ಹನುಮಂತನ ಗುಡಿಗೆ ದಾಳಿಯಿಟ್ಟರು. ನಿರ್ದಾಕ್ಷಿಣ್ಯವಾಗಿ ಮೂರ್ತಿಯನ್ನು ಕಿತ್ತುಕೊಂಡು ದರೆಗಟ್ಟಿಗೆ ತಂದು ಬೆಳಗಿನ ಮೆರವಣಿಗೆಗೆ ತಯಾರು ಮಾಡಿಕೊಳ್ಳತೊಡಗಿದರು.
* * * * *
ವಜ್ರಗಟ್ಟಿಯ ಜನ ಚೇರಮನ್ನರ ನೇತೃತ್ವದಲ್ಲಿ ಎಮ್ಮೆಲ್ಲೆ ಬಳಿ ದಾವಿಸಿದರು. ಎಮ್ಮೆಲ್ಲೆಗೆ ಎರಡು ಊರಿನ ಮತಗಳು ಬೇಕಾಗುವುದರಿಂದ ತುಂಬ ಇಕ್ಕಟ್ಟಿನಲ್ಲಿ ಸಿಲುಕಿಕೊಂಡರು. ಆದರೂ ಇದರಲ್ಲಿ ದರೆಗಟ್ಟಿಯ ಜನರಿಂದಲೇ ತಪ್ಪು ಘಟಿಸಿರುವುದು ಎಂದು ಅವರು ನಿರ್ಣಯಿಸಿದರು. ಆ ಕೂಡಲೇ ಮೊಬೈಲಿನಿಂದ ದರೆಗಟ್ಟಿಯ ತಮ್ಮ ಚೇಲಾವೊಬ್ಬನಿಗೆ ರಿಂಗುಣಿಸಿದರು. "ಗುಡಿಯಿಂದ ದೇವರನ್ನು ಹೊತ್ತೊಯ್ಯುವುದು ಕಾಯ್ದೆ ಪ್ರಕಾರ ತಪ್ಪಾಕೈತಿ. ಇದರಿಂದ ಜನರ ಧಾರ್ಮಿಕ ಆಚರಣೆಗಳಿಗೆ, ಭಾವನೆಗಳಿಗೆ ಧಕ್ಕೆ ಆಗೇತಿ ಎಂದು ನಿಮ್ಮ ಊರಿನವರ ಮ್ಯಾಲ ದೊಡ್ಡ ಕೇಸು ಹಾಕಬಹುದು. ಆನುರೇಣು ತೃಣಕಾಷ್ಠಗಳಲ್ಲಿ ದೇವರಿದ್ದಾನ ಎಂದು ಎಲ್ಲ ದಾರ್ಶನಿಕರು ಹೇಳ್ತಾರ, ಅದಕ್ಕ ಆ ಮೂರ್ತಿನ ವಜ್ರಗಟ್ಟಿಯವರಿಗೆ ಕೊಟ್ಟುಬಿಡ್ರಿ. ನಾನು ಬೇಕಾದರೆ ನಿಮಗ ಗುಡಿ ಕಟ್ಟಿಸುವಂತಹ ದೇವರ ಕೆಲಸಕ್ಕೆ 5 ಲಕ್ಷ ರೂಪಾಯಿ ಕೊಡ್ತಿನಿ. ಸಂಗಮರಿ ಕಲ್ಲಿನ ಮೂರ್ತಿ ಕೊಡಸಿರ" ಎಂದು ಆಸ್ವಾಶನೆ ನೀಡಿದರು.
ಚೇಲಾ ಊರಿನ ಪ್ರಮುಖರನ್ನು ತನ್ನ ಮನೆಯ ಪಡಸಾಲಿಗೆ ಕರೆಸಿದ. ಎಮ್ಮೇಲ್ಲೆಎ ಪೋನು ಮಾಡಿರುವುದನ್ನು ಸಂಕ್ಷಿಪ್ತವಾಗಿ ತಿಳಿಸಿ 5 ಲಕ್ಷ ಸಿಗುವ ವಿಷಯವನ್ನು ಒತ್ತಿ ಒತ್ತಿ ಹೇಳತೊಡಗಿದ. ಗುಡಿ ಕಟ್ಟುವ ನೆಪದಲ್ಲಿ ಈ ಐದು ಲಕ್ಷ ರೂಪಾಯಿಯಲ್ಲಿ ತಮಗೆ ಹಿರಿತನ ಸಿಗುತ್ತದೆ ಎಂದು ಲೆಖ್ಖ ಹಾಕಿದ ಹಿರಿಯರು, ಬಾಯಲ್ಲಿ ನೀರು ತಂದುಕೊಂಡು ಅದಕ್ಕೆ ಒಪ್ಪಿಗೆ ನೀಡಿದರು.
* * * * *
ಮರುದಿನ ಬೆಳಿಗ್ಗೆ ಬಾಜಾ ಬಂಜಂತ್ರಿಯವರೊಂದಿಗೆ ಹುಂಬ ಉತ್ಸಾಹದಿಂದ ವಜ್ರಗಟ್ಟಿಯವರು ಮರೆಗಟ್ಟಿಗೆ ಬಂದರು. ಮರೆಗಟ್ಟಿಯ ಅಗಸಿಯಲ್ಲಿ ಸೊಟ್ಟ ಮುಖ ಮಾಡಿಕೊಂಡು ಕುಂತಿದ್ದ ಹನುಮಂತನನ್ನು ಅನಾಮತ್ತಾಗಿ ಎತ್ತಿಕೊಂಡು ಟ್ಯಾಕ್ಟರನಲ್ಲಿ ಕುಳ್ಳಿರಿಸಿಕೊಂಡು ಮತ್ತೆ ಮೇರವಣಿಗೆ ಸುರುಹಚ್ಚಿಕೊಂಡರು. ನೇರವಾಗಿ ತಮ್ಮೂರಿಗೆ ಹೋಗದೇ ಇದು ತಮ್ಮ ವಿಜಯೋತ್ಸವೆಂದು ಬಿಂಬಿಸುವದಕ್ಕೊಸ್ಕರ ಮರೆಗಟ್ಟಿಯ ತುಂಬ ಹನುಮಂತನನ್ನು ಹೊತ್ತುಕೊಂಡು ಅಲೆದಾಡಹತ್ತಿದರು. ಇದರಿಂದ ಮರೆಗಟ್ಟಿಯ ಬಸಣ್ಣ ಮತ್ತು ಅವನ ಸಂಘದ ಹುಡುಗರಿಗೆ ಚಡ್ಡಿಯಲ್ಲಿ ಇರುವೆ ಬಿಟ್ಟಂತಾಗಿ ಯುವಕ ಮಂಡಳದಲ್ಲಿ ಸಭೆ ಸೇರಿದರು. ಮೈಕ್ ಹಿಡಿದುಕೊಂಡ "ನಮ್ಮೂರಿನ ಹಿರಿಯರು ಐದು ಲಕ್ಷ ರೂಪಾಯಿ ಎಂಜಲಕ ಆಸೆ ಮಾಡಿ ಇನ್ನೊಂದು ಊರಿಗೆ ನಮ್ಮ ಗ್ರಾಮ ದೇವರು ಹನುಮಂತನನ್ನು ಮಾರುತ್ತಿದ್ದು, ಷಂಡರಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ನಾವು ಬಿಸಿ ರಕ್ತದ ಹುಡುಗರು ಅವಕಾಶ ಕೊಡುದು ಬ್ಯಾಡ" ಎಂದು ತನ್ನ ಬಿಸಿಯನ್ನು ಇನ್ನಿತರ ಯುವಕರಿಗೆ ಹರಡತೊಡಗಿದನು. ಆದರೂ ಕೂಡ ಹಿರಿಯರು ಅತ್ತ ಕಡೆ ಹಾಯದೆ ಅವನ ಭಾಷಣಕ್ಕೆ ಕ್ಯಾರೆ ಅನ್ನಲಿಲ್ಲ. ಇದರಿಂದ ಮತ್ತಷ್ಟು ಅವಮಾನಿತನಾದ ಬಸಣ್ಣ ತನ್ನ ಹುಡುಗರನ್ನು ಕರೆದುಕೊಂಡು ಮೆರವಣಿಗೆ ಬರುವ ದಾರಿಯಲ್ಲಿ ಅಡ್ಡಗಟ್ಟಿ ಧರಣಿ ಕುಳಿತಬಿಟ್ಟನು. ಮೆರವಣಿಗೆ ಅಲ್ಲಿಯೇ ನಿಂತಿತು. ಎರಡು ಕಡೆಯ ಊರ ಹಿರಿಯರು ಬಸಣ್ಣನ ಮನ ಒಲಿಸಲು ಪ್ರಯತ್ನಿಸಿದರಾದರೂ ಫಲ ಸಿಗಲಿಲ್ಲ.
ಹೊತ್ತು ನೆತ್ತಿ ಮ್ಯಾಲ ಬಂದು ಚರ್ಮದೊಳಗಡೆಯಿಂದ ಬೆವರು ತೊಟ್ಟಿಕ್ಕತೊಡಗಿತು. ಇದರಂದ ತಾಳ್ಮೆ ಕಳೆದುಕೊಂಡ ವಜ್ರಗಟ್ಟಿಯವರು ಜಗಳಕ್ಕೆ ನಿಂತರು. ಬಾಯಿ ಬಾಯಿ ಹತ್ತಿ, ಕೈ ಕೈ ಮಿಲಾಯಿಸತೊಡಗಿ, ಕೈಯಲ್ಲಿ ಕಲ್ಲುಗಳು ಬಂದು ಒಂದೆರಡು ತಲೆಗಳು ಕೂಡ ಒಡೆದು, ಬೆವರಿನೊಂದಿಗೆ ರಕ್ತವು ಬಸಿಯತೊಡಗಿತು. ಬಸಣ್ಣ ಮತ್ತು ಅವನ ಹುಡುಗರ ಕೈ ಮೇಲಾಗಿ ಮೈಯಲ್ಲಾ ಜಜ್ಜಿಸಿಕೊಂಡ ವಜ್ರಗಟ್ಟಿಯರು ಹನುಮಂತ ದೇವರನ್ನು ಅಲ್ಲಿಯೇ ಬಿಟ್ಟು ಊರ ದಾರಿಯನ್ನು ಹಿಡಿದರು. ಅವರ ಗುಂಪಿನಲ್ಲಿದ್ದ ಹುಚ್ಚಮಲ್ಲ ತನ್ನೊಳಗೆ ಮುಸಿ ಮುಸಿ ನಗುತ್ತಿದ್ದ. ಹನುಮಪ್ಪ ಕೂಡ!
* * * * *
ವಜ್ರಗಟ್ಟಿ ಎಂಬ ಊರು ಅವಮಾನದ ಕುದಿ ತಾಳಲಾರದೆ ಪೂರ್ತಿಯಾಗಿ ಬಿಸಿಯಾಗತೊಡಗಿತು. "ಹನುಮಪ್ಪ ನಮ್ಮ ಅಜನ್ಮ ಸಿದ್ಧ ಆಸ್ತಿ" ಎನ್ನುವಂತೆ ಜನ ವರ್ತಿಸತೊಡಗಿದರು. ತಮ್ಮ ಮೊಬೈಲ್ ಟ್ರಿನ್ ಟ್ರಿನ್ ಎನಿಸಿದ ಛೆರಮನ್ನರು ಎಮ್ಮೆಲ್ಲೆ ಮುಂದೆ ತಮ್ಮ ಗೋಳನ್ನು ತೊಡಿಕೊಂಡರು. ಇದು ದೇವರ ವಿಷಯವಾಗಿರೊದ್ರಿಂದ ಎಮ್ಮೆಲ್ಲೆಗೂ ಒಂದು ಕ್ಷಣ ಎನು ಹೇಳಬೇಕೆಂದು ತೊಚದಾಯಿತು. ಮರುಕ್ಷಣ ಸುದಾರಿಸಿಕೊಂಡು "ಪುರಾತನವಾದ ದೇವರ ಮೂರ್ತಿ ಮತ್ತು ದೇವಸ್ಥಾನದ ಪ್ರಾಚ್ಯ ವಸ್ತುಗಳು ಕಳ್ಳತನ ಆಗ್ಯಾವ ಎಂದು ಪೋಲಿಸ್ ಕಂಪ್ಲೇಂಟ್ ಕೊಡ್ರಿ, ಸರಳ... ದಾರಿಗೆ ಬರ್ತಾರ" ಎಂದು ಅಸಹನೆಯಿಂದ ಅವಡುಗಚ್ಚಿ ಮೊಬೈಲ್ ಮಡಚಿಟ್ಟುಕೊಂಡರು.
ಒಂದು ಸುಡು ಮಧ್ಯಾಹ್ನ ಬರ್ರರ್ರ... ಎಂದು ದೂಳೆಬ್ಬಿಸಿಕೊಂಡು ಒಂದರ ಹಿಂದೊಂದು ಮೂರು ಪೋಲಿಸ್ ಜೀಪುಗಳು ದರೆಗಟ್ಟಿಯತ್ತ ದಾವಿಸಿದವು. ಜೀಪಿನಿಂದ ದಬದಬನೆ ಕೆಳಗಿಳಿದ ಪೋಲಿಸರು ಕಂಡಕಂಡವರಿಗೆ ಲಾಠಿ ರುಚಿ ತೋರಿಸತೊಡಗಿದರು. ಜನರು ಕಂಗಾಲಾಗಿ ತಮ್ಮ ಮನೆಯೊಳಗೆ ಹೊಕ್ಕೊಂಡು ಒಳ ಚಿಲಕ ಹಾಕ್ಕೊಂಡರು. ಕ್ಷಣ ಮಾತ್ರದಲ್ಲಿ ರಸ್ತೆಗಳು ಖಾಲಿಯಾಗಿ ಬಿಕೋ ಎನ್ನತೊಡಗಿದವು. ನಂತರ ಪೋಲಿಸರು ಊರ ಅಗಸಿ ಬಾಗಿಲಿನತ್ತ ದಾವಿಸಿ ಸೊಟ್ಟ ಮೊರೆಯ ಹನುಮಪ್ಪನನ್ನು ಇಷ್ಟಕ್ಕೆಲ್ಲಾ ನಿನೇ ಕಾರಣ ಎನ್ನುವಂತೆ ಸಿಟ್ಟಿನಿಂದ ಎತ್ತಿಕೊಂಡು ಜೀಪಿನ ಮೇಲೆ ಹೇರಿಕೊಂಡರು. ಬಂದಷ್ಟೆ ವೇಗವಾಗಿ ಜೀಪುಗಳು ಮಾಯವಾದವು.
ಮರುದಿನ ಎಲ್ಲ ಪತ್ರಿಕೆಗಳು "ಪೋಲಿಸ್ ಕಸ್ಟಡಿಯಲ್ಲಿ ಹನುಮಪ್ಪ ದೇವರು" ಎಂಬ ಶಿರ್ಷಿಕೆಯೊಂದಿಗೆ ಆಕರ್ಷಕವಾಗಿ ಸುದ್ಧಿ ಪ್ರಕಟಿಸಿದವು. ಹನುಮಪ್ಪ ಎಲ್ಲ ಟಿವಿ ಚಾನಲ್‍ಗಳಲ್ಲಿ ತನ್ನ ಸೊಟ್ಟ ಮೂತಿಯನ್ನು ತೋರಿಸಿದ್ದೆ ತೋರಿಸಿದ್ದು. ದೇವರು ಎನು ತಪ್ಪು ಮಾಡಿರಬಹುದು ಎಂದು ಜನರು ಗಾಬರಿಯಿಂದ ಸ್ಟೇಷನ್ನಿನ ಕಡೆ ಬರತೊಡಗಿದರು. ಸರಿಯಾಗಿ ಒಂಬತ್ತು ಗಂಟೆಗೆ ಎರಡು ಹಳ್ಳಿಯ ಜನರು ಟ್ಯಾಕ್ಟರ್, ಬೈಕು, ಟಂಟಂ ಗಾಡಿ ಮುಂತಾದವುಗಳಲ್ಲಿ ಪೋಲಿಸ್ ಸ್ಟೇಷನ್ ಮುಂದೆ ಬಂದಿಳಿಯತೊಡಗಿದರು. ಭಜನಾ ಮಂಡಳಿಯವರು ಭಜನಾ ಪದ ಸುರು ಹಚಗೊಂಡರು. ಡೊಳ್ಳು ಹಲಗೆಗಳ ಬಡಿತ ಸ್ಟೇಷನ್ನಿನ ಅಂಗಳ ದಾಟಿಕೊಂಡು ನಗರವನ್ನೆಲ್ಲಾ ಆವರಿಸತೊಡಗಿ ನಗರದ ನಾಗರಿಕರೆನಿಸಿಕೊಂಡವರು ಪೋಲಿಸ್ ಸ್ಟೇಷನ್ ಕಡೆ ಮುಖ ಮಾಡಿದರು. ಪೇದೆಗಳು ಎನು ಮಾಡಬೆಕೆಂದು ಯೋಚಿಸಿ ಯೋಚಿಸಿ ಕೊನೆಗೆ "ನೀನೆ ದಾರಿ ತೊರಿಸಪ್ಪ" ಎಂದು ಹನುಮಪ್ಪನಿಗೆ ಕೈ ಮುಗಿದು ನಿಂತರು.
ಅಷ್ಟರಲ್ಲಿ ಎರಡು ಊರಿನ ಪೂಜಾರಿಗಳ ನಡುವೆ ಪೂಜೆಗಾಗಿ ನಾ ಮೊದಲು, ತಾ ಮೊದಲು ಎಂದು ಜಗಳ ಪ್ರಾರಂಭವಾಯಿತು. ಆಯಾ ಊರವರು ತಮ್ಮ ತಮ್ಮ ಊರಿನ ಪೂಜಾರಿಗಳ ಬೆಂಬಲಕ್ಕೆ ನಿಂತುದ್ದರಿಂದ ಉರಿಯುವ ಬೆಂಕಿಗೆ ತುಪ್ಪ ಹಾಕಿದಂತಾಯಿತು. ಪೋಲಿಸ್ ಅಧಿಕಾರಗಳ ಎಚ್ಚರಿಕೆಯನ್ನು ಕಡೆಗಣಿಸಿ ಜಗಳ ಮುಂದುವರೆದಿದ್ದರಿಂದ ಸಿಟ್ಟಿಗೆದ್ದ ಪೋಲಿಸರು ಲಾಠಿ ಬಿಸಿ ತೋರಿಸಿ ಜನರನ್ನು ಕಂಪೌಂಡನಿಂದ ಚದುರಿಸಿದರು.
ಹೊರ ಬಂದ ಎರಡು ಊರಿನ ಜನ ಎರಡು ಕಡೆ ಬೇರೆ ಬೇರೆಯಾಗಿ ಸ್ಟೇಷನ್ ಮುಂದೆ ಕುಳಿತು ಪ್ರತಿಭಟನೆ ಮಾಡತೊಡಗಿದರು. "ಪೋಲಿಸರು ಲಾಠಿ ರುಚಿ ತೋರಿಸಿ ಅಮಾಯಕ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಾಕ ಹತ್ಯಾರ. ನಮ್ಮ ಗ್ರಾಮ ದೇವರನ್ನುಪೂಜೆ ಮಾಡುವುದಕ್ಕೆ ನಾವು ಪೋಲಿಸರ ಅನುಮತಿ ಕೇಳಬೇಕಾಗಿ ಬಂದಿರುವುದು ವಿಪರ್ಯಾಸ" ಎಂದು ಬಸಣ್ಣನಂತವರು ಎದ್ದು ನಿಂತು ತಮ್ಮ ನಾಲಿಗೆ ಚಟ ತೀರಿಸಿಕೊಳ್ಳತೊಡಗಿದರು. ಸೂರ್ಯ ನೆತ್ತಿ ಮೇಲೆ ಬಂದತೆಲ್ಲಾ ವಾತಾವರಣ ಬಿಸಿ ಎರುತ್ತಿರುವುದನ್ನು ಕಂಡ ಪೋಲಿಸ್ ಅಧಿಕಾರಿಗಳು ಮೊದಲ ಬಂದ ಊರಿನವರಿಗೆ ಆಧ್ಯತೆ ನೀಡಿ ಪಾಳೆ ಪ್ರಕಾರ ಪೂಜೆ ಮಾಡಲು ಅನುಮತಿ ನೀಡಿದರು.
* * * * *
ಪ್ರತಿ ಶನಿವಾರ ಸ್ಟೇಷನ್ನಿನಲ್ಲಿ ಹೀಗೆ ಪೂಜೆ ಮುಂದುವರೆಯಿತು. ವಾರದ ನಡುವಿನ ದಿನಗಳಲ್ಲಿ ತಮ್ಮ ವಯಕ್ತಿಕ ಕೆಲಸಗಳಿಗೆ ನಗರಕ್ಕೆ ಬರುತ್ತಿದ್ದ ಗ್ರಾಮಸ್ಥರು, ಸ್ಟೇಷನ್ನಿಗೆ ಬಂದು ಹನುಮಂತನ ದರ್ಶನ ಪಡೆಯುವದನ್ನು ರೂಡಿಸಿಕೊಂಡರು. ಸ್ಟೇಷನ್‍ನ್ನು ಐದು ಸುತ್ತು ಪ್ರದಕ್ಷಿಣೆ ಹಾಕಿ, ಮೂರ್ತಿ ಇಟ್ಟ ಕಟಂಜರಿ ಮುಂದೆ ಕಾಯಿ ಒಡೆಯುತ್ತಿದ್ದರು. "ನಮ್ಮಂತಹ ನರಮನಷ್ಯರು ಮಾಡಿದ ಪಾಪಗಳಿಂದ ದೇವರೆ ನಿನು ಈ ದುಷ್ಟ ಪೋಲಿಸರ ಕೈಗೆ ಸಿಗುವಂತಾಯಿತು. ನಿಯೇನ್ ಹೆದ್ರಕೋಬ್ಯಾಡ ನಾವೆನಾದರೂ ಉಪಾಯ ಮಾಡಿ ನಿನ್ನನ್ನು ಈ ನರಕದಿಂದ ಪಾರು ಮಾಡ್ತಿವಿ ಎಂದು ಕೆಲವು ಮುಗ್ದ ಜನರು ದೇವರಿಗೆ ಧೈರ್ಯ ತುಂಬಿ, ಹನುಮಪ್ಪನನ್ನು ಚಂದಂಗ ನೋಡಿಕೊಳಿ"್ರ ಎಂದು ತಮ್ಮ ಪರಿಚಯದ ಪೇದೆಗಳಿಗೆ ಬುದ್ಧಿವಾದ ಹೇಳಿ ಅಲ್ಲಿಂದ ಭಾರದ ಹೆಜ್ಜೆಗಳನ್ನಿಡುತ್ತಾ ಹೊರ ಬರುತ್ತಿದ್ದರು.
ಕ್ರಮೇಣ ಸುತ್ತಮುತ್ತಲ ಬಡಾವಣೆಗಳಲ್ಲಿನ ಜನರು ಕೂಡ ಹನುಮಪ್ಪನ ದರ್ಶನಕ್ಕೆ ಬರತೊಡಗಿದರು. ಸ್ಟೇಷನನಿಗೆ ಯಾವುದೆ ಕೆಲಸದ ನಿಮಿತ್ತ ಬರುವ ಸುತ್ತಮುತ್ತಲ ಹಳ್ಳಿಯವರು ಮೊದಲು ಹನುಮಪ್ಪನ ದರ್ಶನ ತೆಗೆದುಕೊಂಡು ಆಮೇಲೆ ಅಧಿಕಾರಿಗಳ ಚೆಂಬರಿಗೆ ಹೋಗುತ್ತಿದ್ದರು. ಕೆಲವು ಪೇದೆಗಳು ಕೂಡ ತಮ್ಮ ಹಿರಿಯ ಅಧಿಕಾರಿಗಳಿಗೆ ಶಲ್ಯೂಟ್ ಹೊಡೆಯುವ ಮೊದಲು ಹನುಮಪ್ಪನಿಗೆ ಕೈ ಮುಗಿಯುವುದನ್ನು ರೂಡಿಸಿಕೊಂಡರು. ಪ್ರತಿದಿನವು ಬರುವ ಭಕ್ತರು ತಮ್ಮ ಗಂಟೆ ಜಾಗಟೆಗಳಿಂದ ವಿಶಿಷ್ಟ ರೀತಿಯಲ್ಲಿ ದ್ವನಿ ಹೊರಡಿಸಿ ತಾಸುಗಟ್ಟಲೆ ಪೂಜೆ ಮಾಡುತ್ತಿದ್ದರು. ಇದರಿಂದ ಅಧಿಕಾರಿಗಳಿಗೆ ಕಿರಿಕಿರಿ ಎನಿಸಿತು. ಇದಕ್ಕಾಗಿ ಒಂದು ಉಪಾಯ ಹುಡುಕಿ ಪೂಜೆಯಲ್ಲಿ ಪರಿಣತಿಯನ್ನು ಹೊಂದಿದ್ದ ಒಬ್ಬ ಪೇದೆಗೆ ಪುಜಾರಿ ಪಟ್ಟವನ್ನು ಕಟ್ಟಿದರು. ಹೀಗೆ ಪೋಲಿಸ್ ಸ್ಟೇಷನ್ ಎಂಬುದು ದಿನ ಗತಿಸಿದಂತೆ ದೇವಸ್ಥಾನವಾಗಿ ಬದಲಾಗತೊಡಗಿತು.
* * * * *
ಇತ್ತ ವಜ್ರಗಟ್ಟಿಯವರು ಪುರಾತನವಾದ ಮೂರ್ತಿ ಮತ್ತು ಪ್ರಾಚ್ಯ ವಸ್ತುಗಳು ಕಳುವಾಗಿವೆ" ಎಂದು ಮರೆಗಟ್ಟಿಯ 115 ಜನರ ಮೇಲೆ ಬಲವಾದ ಕೇಸು ಜಡಿದಿದ್ದರು. ಮರೆಗಟ್ಟಿಯವರು ಕೂಡ ನಮ್ಮ ಊರಿಗೆ ಬಂದು ನಮ್ಮನ್ನೆ ಹೊಡೆದಿದ್ದಾರೆ ಎಂದು ವಜ್ರಗಟ್ಟಯವರ ಮೇಲೆ ಮರು ಕೇಸು ದಾಖಲಿಸಿದ್ದರು. ಎರಡು ಊರಿನವರು ಜಿಲ್ಲಾ ಕೊರ್ಟಿಗೆ ಅಲೆದಾಡುವುದು ಅನಿವಾರ್ಯವಾಯಿತು. ಇದು ಧಾರ್ಮಿಕ ಅಚರಣೆಗೆ ಸಂಬಂಧಿಸಿದ ವಿಷಯವಾದುದರಿಂದ ವರ್ಷಾನುಗಟ್ಟಲೇ ಕೇಸು ವಿಳಂಬವಾಗತೊಡಗಿತು. ಮೊದಲೆಲ್ಲ ಉತ್ಸಾಹದಿಂದ ಕೋರ್ಟಿಗೆ ಹೋಗುತ್ತಿದ್ದ ಜನರು ನಂತರದಲ್ಲಿ ಇದರಿಂದ ಹೇಗೆ ತಪ್ಪಿಸಿಕೊಳ್ಳಬೇಕೆಂದು ಹವನಿಸತೊಡಗಿದರು. ತಿಂಗಳಿಗೊಮ್ಮೆ ತಮ್ಮ ಹೊಲ ಮನೆಯ ಕೆಲಸಗಳನ್ನು ಬದಿಗಿಟ್ಟು ಕೈಯಿಂದ ಖರ್ಚು ಮಾಡಿಕೊಂಡು ಹೋಗುವುದು ಕೆಲವರಿಗೆ ಬಹಳಷ್ಟು ದುಸ್ತರವಾಗತೊಡಗಿತು.
ಮುಂದ ಹ್ಯಂಗ ಮಾಡುವುದು ಎಂದು ಯೋಚಿಸುತಿದ್ದವರಿಗೆ ಹನುಮಂತನ ದೇವರಿಗಾಗಿ ಬಿಟ್ಟಿದ್ದ ಪೊಗದಸ್ತಾದ ಹೋರಿಗಳು ಪರಿಹಾರವಾಗಿ ಕಂಡವು. ಹೊರಿಗಳನ್ನು ಹರಾಜು ಹಾಕಿ ಬಂದ ಹಣವನ್ನು ಬಸ್ ಚಾರ್ಜಿಗಾಗಿ ಬಳಸತೊಡಗಿದರು. ಆ ಹಣವು ಖಾಲಿಯಾಯಿತು. ಮುಂದೆ ಸ್ವಲ್ಪ ದಿನ ಊರ ಎಲ್ಲ ಮನೆಗಳಿಂದ ಚಂದಾ ಎತ್ತಿ ಕೋರ್ಟಿನ ಖರ್ಚನ್ನು ಸರಿದೂಗಿಸಿಕೊಂಡರು. ಅದು ಸಾಲದಾದಾಗ ತಮ್ಮ ತಮ್ಮ ಹೊಲವನ್ನು ಬಡ್ಡಿಯಲ್ಲಿ ಹಾಕಿದರು. ಬಸಣ್ಣನಂತ ಕಲವು ಯುವಕರು ಖರ್ಚಿಗಾಗಿ ಊರು ಬಿಟ್ಟು ಗೂಳೆ ಹೋಗುವುದು ಅನಿವಾರ್ಯವಾಯಿತು. ಕೊನೆ ಕೊನೆಯಲ್ಲಿ ಜನರು ಸ್ಟೇಷನ್ನಿಗೆ ಹೋಗಿ ಪೂಜೆ ಮಾಡುವುದನ್ನು ಕಡೆಗಣಿಸತೊಡಗಿದರು. ಯಾವಾಗಲಾದಾಗರೊಮ್ಮೆ ಹೋದಾಗ ನಿನ್ನಿಂದಲೇ ಆದ್ದದ್ದು ಎಂದು ಹನುಮಂತ ದೇವರಿಗೆ ಮೂದಲಿಸತೊಡಗಿದರು.
* * * * *
ಮೂರೂವರೆ ವರ್ಷಗಳ ನಂತರ ಕೇಸು ಖುಲ್ಲಾ ಆಯಿತು. ಹನುಮಂತ ದೇವರ ಜಾಗ ಬದಲಿಸಿದ್ದು ಕಾನೂನು ಪ್ರಕಾರ ತಪ್ಪು. ಈ ಕೃತ್ಯದಲ್ಲಿ ಭಾಗವಹಿಸಿದವರೆಲ್ಲರೂ ಇಂತಿಷ್ಟು ದಂಡ ಕಟ್ಟಬೇಕು ಮತ್ತು ಎರಡು ಊರಿನವರು ಸೇರಿ ಹನುಮಂತ ದೇವರನ್ನು ಮರು ಪ್ರತಿಷ್ಠಾಪಿಸಬೇಕು ಎಂದು ಕೋರ್ಟು ಆದೇಶಿಸಿತು. ಅಷ್ಟೋತ್ತಿಗಾಗಲೇ ಜನ ಕೋರ್ಟಿಗೆ ಅಲೆದಾಡಿ ಸೋತು ಸುಣ್ಣವಾಗಿದ್ದರು. ಜನರ್ಯಾರು ಮೂರ್ತಿಯ ಮರು ಪ್ರತಿಷ್ಠಾಪನೆಗೆ ಉತ್ಸಾಹ ತೋರಿಸಲಿಲ್ಲ. ಪೋಲಿಸ್ ಅಧಿಕಾರಿಗಳು ಕಾಯುವಷ್ಟು ದಿನ ಕಾಯ್ದು ಕೊನೆಗೆ ಒಂದು ದಿನ ಮತ್ತೆ ಜೀಪಿನ ಮೇಲೆ ಹನುಮಂತನನ್ನು ಕುಳ್ಳಿರಿಸಿಕೊಂಡು ಬಂದರು. ಜೀಪಿನ ಮೇಲೆ ಮೂರ್ತಿಯನ್ನು ಕಂಡು ಜನ ದೆವ್ವ ಕಂಡವರಂತೆ ದಿಕ್ಕುಪಾಲಾಗಿ ಓಡತೊಡಗಿದರು.
*****
-ಹನುಮಂತ ಹಾಲಿಗೇರಿ

No comments:
Post a Comment